Advertisement

ಎಸ್ಸೆಸ್ಸೆಂ ಹೇಳಿಕೆ ಹಾಸ್ಯಾಸ್ಪದ: ಮೇಯರ್‌

03:21 PM May 16, 2022 | Team Udayavani |

ದಾವಣಗೆರೆ: ಸತತ ಸೋಲಿನಿಂದ ಹತಾಶರಾಗಿರುವ ಮಾಜಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ ಬಿಜೆಪಿ ಅಧಿಕಾರಾವಧಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಮೇಯರ್‌ ಜಯಮ್ಮ ಗೋಪಿನಾಯ್ಕ ದೂರಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎಸ್. ಮಲ್ಲಿಕಾರ್ಜುನ್‌ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಸಂಸ್ಥೆ, ಮನೆ, ಸಂಬಂಧಿ ಕರ ಆಸ್ತಿ ಇರುವ ಕಡೆ ಕಾಂಕ್ರಿಟೀಕರಣ ಮಾಡಿರುವುದನ್ನೇ ದಾವಣಗೆರೆ ಅಭಿವೃದ್ಧಿ ಎಂದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಮಲ್ಲಿಕಾರ್ಜುನ್‌ರವರ ಅಧಿಕಾರವಧಿಯಲ್ಲಿ ಯಾವುದೇ ಕಾಮಗಾರಿಗಳಿಗೆ ಟೆಂಡರ್‌ ಕರೆಯದೆ ಒಂದೇ ಸಂಸ್ಥೆಗೆ ನೀಡಿದ್ದಾರೆ. ಅದರಲ್ಲಿ ಎಷ್ಟು ಲಾಭ ಮಾಡಿಕೊಂಡಿರಬಹುದು ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಮಲ್ಲಿಕಾರ್ಜುನ್‌ ಅವರು ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಮಾತನಾಡಿದ ಅವರು, ನಮ್ಮ ತಂದೆ ಎಸ್‌. ಎ. ರವೀಂದ್ರನಾಥ್‌ ಅವರು ಸಚಿವರಾಗಿದ್ದಾಗ 900 ಕೋಟಿ ಅನುದಾನದಲ್ಲಿ ಭದ್ರಾ ನಾಲಾ ಆಧುನೀಕರಣ ಮಾಡಿರುವುದರಿಂದ ಜಿಲ್ಲೆ ಹಚ್ಚ ಹಸಿರಾಗಿದೆ. ಜಿಲ್ಲಾಧಿಕಾರಿ ಕಚೇರಿ, ದಾವಣಗೆರೆ ವಿಶ್ವವಿದ್ಯಾಲಯ, ಪ್ರಾದೇಶಿಕ ಸಾರಿಗೆ ಕಚೇರಿ ಪ್ರಾರಂಭಕ್ಕೆ ಕಾರಣರಾಗಿದ್ದಾರೆ. ದಾವಣಗೆರೆಯಲ್ಲಿ ನೂರಕ್ಕೂ ಹೆಚ್ಚು ಪಾರ್ಕ್‌ ಗಳಿಗೆ ಬೇಲಿ ಅಳವಡಿಸಿಕೊಳ್ಳುವ ಮೂಲಕ ಒತ್ತುವರಿ ಆಗುವುದನ್ನ ತಪ್ಪಿಸಿದ್ದಾರೆ ಎಂದು ತಿಳಿಸಿದರು.

ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌ ಮಾತನಾಡಿ, ಸಂಸದ ಸಿದ್ದೇಶ್ವರ ಮತ್ತು ಶಾಸಕ ರವೀಂದ್ರನಾಥ್‌ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಲು ಸಾಕಷ್ಟು ದಿನಗಳೇ ಬೇಕು. ಸಂಸದರು, ಶಾಸಕರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಲವಾರು ಬಾರಿ ಹೇಳಲಾಗಿದೆ. ಮಲ್ಲಿಕಾರ್ಜುನ್‌ ಅವರು ಚುನಾವಣಾ ಸಂದರ್ಭದಲ್ಲಿ ಮಾತ್ರವೇ ಇಲ್ಲಸಲ್ಲದ ಹೇಳಿಕೆ ನೀಡಿವುದು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಂಸದ ಸಿದ್ದೇಶ್ವರ ಅವರು ದಾವಣಗೆರೆ ರೈಲ್ವೆ ನಿಲ್ದಾಣ ವನ್ನು ಒಂದೇ ವರ್ಷದಲ್ಲಿ ಮರು ಅಭಿವೃದ್ಧಿ ಮಾಡುವ ಮೂಲಕ ಒಂದು ಪ್ರವಾಸಿ ತಾಣ ಮಾಡಿದ್ದಾರೆ.ಎಸ್‌ ಟಿಪಿಐ, ಸಿಆರ್‌ ಸಿ ಕೇಂದ್ರ, ಅಂಚೆ ಇಲಾಖೆ ವಿಭಾಗೀಯ ಕಚೇರಿ ತಂದಿದ್ದಾರೆ. ಕೆಲವೇ ದಿನಗಳಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗೆ ಭೂಮಿ ಪೂಜೆ ನಡೆಯಲಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

Advertisement

ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿದೆ. ಈಗ ಅಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರದ ರೂಪದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕೆಳ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಸಂಸದರು, ಶಾಸಕರ ವಿರುದ್ಧ ಮಾತನಾಡುವಾಗ ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಸುಮ್ಮನೆ ಮಾತನಾಡ ಬಾರದು. ನಾವು ನಮ್ಮ ಸಂಸರು, ಶಾಸಕರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ದಾಖಲೆಯೊಂದಿಗೆ ಬಹಿರಂಗ ಚರ್ಚೆಗೆ ನಾವೆಲ್ಲರೂ ಸಿದ್ಧ ಎಂದು ತಿಳಿಸಿದರು.

ಉಪ ಮೇಯರ್‌ ಗಾಯತ್ರಿ ಬಾಯಿ ಖಂಡೋಜಿರಾವ್‌, ಗೌರಮ್ಮ, ರೇಣುಕಾ ಶ್ರೀನಿವಾಸ್‌, ಎಲ್‌.ಡಿ. ಗೋಣೆಪ್ಪ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಸಾಮಾನ್ಯರು ಮಾತನಾಡಲೇಬಾರದೆ?

ನಾವು ಸಹ ಜನಪ್ರತಿನಿಧಿಗಳು. ಜನರಿಂದ ಆಯ್ಕೆಯಾದಂತಹವರು. ಎಸ್.ಎಸ್. ಮಲ್ಲಿಕಾರ್ಜುನ್‌ ಅವರ ಕಾರ್ಯ ವೈಖರಿ ಬಗ್ಗೆ ಮಾತನಾಡಿದರೆ ನಾಯಿ, ನರಿ… ಎನ್ನುತ್ತಾರೆ. ಜನಸಾಮಾನ್ಯರಾದವರು ಏನು ಮಾತನಾಡಬಾರದೆ, ಏನನ್ನೂ ಕೇಳಬಾರದೆ. ನಮ್ಮ ಮುಖಂಡರ ಬಗ್ಗೆ ದಾಖಲೆಯಿಟ್ಟುಕೊಂಡು ಮಾತನಾಡಲಿ. ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ನಗರಪಾಲಿಕೆ ಸದಸ್ಯ ಆರ್‌. ಶಿವಾನಂದ್‌ ತಿಳಿಸಿದರು.

ಎರಡೂ ಗೆಲ್ಲುತ್ತೇವೆ…

ಮಹಾನಗರ ಪಾಲಿಕೆಯ 27 ಮತ್ತು 38ನೇ ವಾರ್ಡ್ ನ ಉಪ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ಬಹಳ ದಿನಗಳಿಂದ ಇದ್ದಂತಹ ರಾಜಕಾಲುವೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡಲಾಗಿದೆ. 6.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಿಜೆಪಿಯ ಅಭಿವೃದ್ಧಿ ಕಾರ್ಯ, ಶ್ರೀನಿವಾಸ್‌ರವರ ಜನಪರ ಕೆಲಸಗಳಿಂದ ಎರಡೂ ವಾರ್ಡ್‌ಗಳಲ್ಲಿ ನಾವೇ ಬಿಜೆಪಿಯವರೇ ಗೆಲ್ಲುತ್ತೇವೆ ಎಂದು ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next