ಕಾರ್ಕಳ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಹಿರ್ಗಾನ ಬಳಿ ರಸ್ತೆಯಲ್ಲಿ ಅಡ್ಡಲಾಗಿ ಪ್ರಾಣಿಯೊಂದು ಬಂದ ಪರಿಣಾಮ ಸ್ಕೂಟರ್ ಪಲ್ಟಿಯಾಗಿ ನಿಟ್ಟೆ ಗ್ರಾಮದ ಸದಾನಂದ ಶೆಟ್ಟಿ (45) ಅವರು ಮೃತಪಟ್ಟ ಘಟನೆ ಸಂಭವಿಸಿದೆ.
ಕ್ಯಾಟರಿಂಗ್ ವ್ಯವಹಾರ ಮಾಡಿಕೊಂಡಿದ್ದ ಅವರು, ಮೇ 26ರಂದು ಶಿರ್ಲಾಲಿಗೆ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ಹೋಗಿದ್ದರು. ಮಗ ಸ್ಪರ್ಷ್ (13) ಅನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಶಿರ್ಲಾಲ್‌ನಿಂದ ನಿಟ್ಟೆಗೆ ಹೆಬ್ರಿ -ಕಾರ್ಕಳ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುವ ಸಂದರ್ಭ ರಾತ್ರಿ 10.30 ಗಂಟೆಗೆ ಘಟನೆ ಸಂಭವಿಸಿದೆ.
ಹಿರ್ಗಾನ ಸಮೀಪ ಬಿ.ಎಂ. ಶಾಲೆಯ ಬಳಿ ತಲುಪುವಾಗ ಪ್ರಾಣಿಯೊಂದು ರಸ್ತೆಯಲ್ಲಿ ಅಡ್ಡ ಬಂದ ಕಾರಣ ಸ್ಕೂಟರ್ ಸವಾರಿ ಮಾಡುತ್ತಿದ್ದ ಸದಾನಂದ ಶೆಟ್ಟಿ ಅವರು ಒಮ್ಮೆಲೇ ಬ್ರೇಕ್ ಹಾಕಿದಾಗ ಸ್ಕೂಟರ್‌ನೊಂದಿಗೆ ಸದಾನಂದ ಶೆಟ್ಟಿ ಮತ್ತು ಸ್ಪರ್ಷ್ ರಸ್ತೆಗೆ ಬಿದ್ದಿದ್ದು ಅವರು ಧರಿಸಿದ್ದ ಹೆಲ್ಮೆಟ್ ಕಳಚಿ ಬಿದ್ದು ಸದಾನಂದ ಶೆಟ್ಟಿ ಅವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿವೆ. ಹಿಂಬದಿ ಸವಾರನಾದ ಸ್ಪರ್ಷ್ ಅವರ ಬಲಕೈಗೆ ಮತ್ತು ಎಡಕೈಗೆ ಸಣ್ಣ ಗಾಯವಾಗಿದ್ದು, ಗಾಯಾಳುಗಳನ್ನು ಕಾರ್ಕಳದ ಡಾ| ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಕೊಡಿಸಿ ಸದಾನಂದ ಶೆಟ್ಟಿಯವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನಾÉಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಲೆಗೆ ಗಂಭೀರ ಗಾಯಗೊಂಡ ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೇ 27ರಂದು ಮೃತರಾದರು. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.