ಕನ್ನಡದಲ್ಲಿ ಕಾರು, ಬೈಕ್ ಹೆಸರಿಟ್ಟುಕೊಂಡಿರುವ ಅದೆಷ್ಟೋ ಚಿತ್ರಗಳು ಬಂದಿವೆ, ಕೆಲವು ಬಿಡುಗಡೆಗೆ ರೆಡಿಯಾಗಿವೆ. ಇನ್ನೂ ಕೆಲವು ಚಿತ್ರೀಕರಣದಲ್ಲಿವೆ. ಹಾಗೆ ಹೆಸರಿಸುವುದಾದರೆ, ಈಗ “ರಾಜ್‌ದೂತ್’ ಎಂಬ ಹೊಸಬರ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಹೌದು, ಸದ್ದಿಲ್ಲದೆಯೇ ಚಿತ್ರ ಮುಗಿಸಿರುವ ಚಿತ್ರತಂಡ, ಇತ್ತೀಚೆಗಷ್ಟೇ ಚಿತ್ರದ ಹಾಡುಗಳನ್ನು ಹೊರತಂದಿದೆ.
ಲಹರಿ ಆಡಿಯೋ ಸಂಸ್ಥೆಯ ಲಹರಿ ವೇಲು ಅವರು ಹಾಡುಗಳನ್ನು ಹೊರತರುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. “ರಾಜ್‌ದೂತ್’ ಎಂಬ ಹೆಸರಿದೆ ಅಂದರೆ, ಚಿತ್ರದಲ್ಲಿ ರಾಜ್‌ದೂತ್ ಬೈಕ್ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಚಿತ್ರಕ್ಕೆ ಪವನ್‌ಕುಮಾರ್ ನಿರ್ದೇಶಕರು. ಕಥೆ, ಚಿತ್ರಕಥೆ, ಸಾಹಿತ್ಯ, ನೃತ್ಯ ಜವಾಬ್ದಾರಿಯನ್ನೂ ಇವರೇ ವಹಿಸಿಕೊಂಡಿದ್ದಾರೆ.
“ರಾಜ್‌ದೂತ್’ ಕಥೆ ಬಗ್ಗೆ ಹೇಳುವುದಾದರೆ, ಇದೊಂದು ಗೆಳೆಯರ ನಡುವಿನ ಸಂಬಂಧ ಮತ್ತು ರಾಜ್‌ದೂತ್ ಬೈಕ್ ಮೇಲಿನ ಪ್ರೀತಿ ಕುರಿತು ಸಾಗುವ ಕಥೆ. ಇಬ್ಬರು ಗೆಳೆಯರ ನಡುವೆ ರಾಜ್‌ದೂತ್ ಎಂಟ್ರಿಕೊಟ್ಟಾಗ, ಅದನ್ನು ಏನಾದರೂ ಸರಿ, ನನ್ನ ಪಾಲಾಗಬೇಕೆಂಬ ಹಠದಲ್ಲಿ ಆ ಇಬ್ಬರು ಗೆಳೆಯರು ಹರಸಾಹಸ ಪಡುತ್ತಾರೆ. ಆ ಬೈಕ್ ತಾತನೊಬ್ಬನದ್ದಾಗಿದ್ದರಿಂದ ಇಬ್ಬರು ಗೆಳೆಯರ ಮಧ್ಯೆ ಸಣ್ಣ ಭಿನ್ನಾಭಿಪ್ರಾಯ ಶುರುವಾಗಿ ಜಗಳಕ್ಕೂ ತಿರುಗುತ್ತದೆ.
ಕೊನೆಗೆ ರಾಜ್‌ದೂತ್ ಬೈಕ್ ಯಾರ ಪಾಲಾಗುತ್ತೆ ಎಂಬುದು ಕಥೆ. ಇದರ ನಡುವೆ ಒಂದು ಲವ್‌ಸ್ಟೋರಿಯೂ ಸೇರಿಕೊಳ್ಳುತ್ತೆ. ಮಿಕ್ಕಿದ್ದು ವಿಷಯ ತಿಳಿಯಬೇಕಾದರೆ, “ರಾಜ್‌ದೂತ್’ ಸಿನಿಮಾ ನೋಡಬೇಕು. ಚಿತ್ರದಲ್ಲಿ ಅನಿಲ್ ನಾಯಕರಾಗಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿಯೂ ಅವರದೇ. ಇನ್ನು, ತೇಜು ಪೊನ್ನಪ್ಪ ಇವರಿಗೆ ನಾಯಕಿ. ಆದರ್ಶ್ ನಾರಾಯಣ್ ಎರಡನೇ ನಾಯಕನಾಗಿದ್ದು,
ಸದಾ ಅಮ್ಮನ ಹಣದಿಂದ ಮೋಜು ಮಾಡುವ ಪಾತ್ರ ಮಾಡಿದ್ದಾರೆ. ಇನ್ನು, ರಿಶ್ವಿಭಟ್ ಸಿನಿಮಾದುದ್ದಕ್ಕೂ ಬೈಕ್ ಓಡಿಸುವ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ನೀನಾಸಂ ಅಶ್ವಥ್, ವಿಶ್ರುತ್ ರಾಜ್, ಶ್ರೀನಿವಾಸ್, ಶಶಿಕಲಾ, ನಂದೀಶ್ ನಟಿಸಿದ್ದಾರೆ. ಬೆಂಗಳೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಅರುಣ್ ಆ್ಯಂಡ್ರೂ ಸಂಗೀತವಿದೆ. ವಿಜಯಪ್ರಕಾಶ್, ಚೇತನ್‌ನಾಯ್ಕ, ಮಧುಶೇಖರ್, ಮಹಬೂಬ್‌ಸಾಬ್ ಹಾಡಿದ್ದಾರೆ.