Advertisement
ಲಾವಣ್ಯ ಬೈಂದೂರು(ರಿ.) ತನ್ನ ಸಹ ಸಂಸ್ಥೆಯಾದ ರಿದಂ ನೃತ್ಯ ಶಾಲೆಯ ಮೂಲಕ 18 ವರ್ಷಗಳಿಂದ ಪರಿಸರದ ನಾಟ್ಯಾಸಕ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಾ ಬಂದಿದೆ. ಇತ್ತೀಚೆಗೆ ನಡೆದ ನೃತ್ಯಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪುಟ್ಟ ಮಕ್ಕಳು ರೀಮಿಕ್ಸ್ ಹಾಡುಗಳಿಗೆ ಹೆಜ್ಜೆ ಹಾಕಿ ತಮ್ಮ ನೃತ್ಯ ಸಾಧನೆಯನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಮನ ಮುದಗೊಳಿಸಿದರು.ಪಾಯ ತುಜೆ ಪಾಯ ಮೈನೆ ಮತ್ತು ಧೀರೇ ಧೀರೇಸೇ ಮೇರೇ ಜಿಂದಗೀ ಮೇ ಆನಾ ಹಾಡುಗಳಿಗೆ ಲಿರಿಕಲ್ ಹಿಪಾಪ್ ನೃತ್ಯ ಮಾಡಿದ ನೃತ್ಯ ಶಾಲೆಯ ವಿದ್ಯಾರ್ಥಿ ನಾಗಾರ್ಜುನನ ನೃತ್ಯ ಸಾಧನೆ ಪ್ರಶಂಸೆಗೆ ಪಾತ್ರವಾಯಿತು. ದೇವಾ ಶ್ರೀ ಗಣೇಶಾ… ದೇವಾ ಶ್ರೀ ಗಣೇಶಾ… ಜ್ವಾಲಾ ಸೀ ಚಲತೀ ಹೈ… ದರ್ತಿ ಅಂಬರ್ ಸೇ ಎನ್ನುವ ಕ್ಷಿಪ್ರ ಮೂಮೆಂಟ್‌ಗಳ ಫ್ಯೂಜನ್ ನೃತ್ಯ ಮಾಡಿದ 5 ವರ್ಷದ ಬಾಲಕಿ ಪ್ರತಿಜ್ಞಾ ಆಕರ್ಷಣೆಯ ಕೇಂದ್ರವಾದಳು. ಗೀಯಾ… ಗೀಯಾ… ಗೀಯಾ… ಗೀಯಾ..ಬಂದೇವು… ನಾವು ನಿಮ್ಮ ಚರಣಕೆ, ಓ ಗಣಪಾ ನೀಡಾ… ನಮ್ಗೆ ಸುಖಾ ಎನ್ನುವ ಉತ್ತರ ಕರ್ನಾಟಕದ ಗಣೇಶ ಸ್ತುತಿಯ ಗೀ ಗೀ ಹಾಡಿಗೆ ನೃತ್ಯ ಮಾಡುತ್ತಾ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಯೇ ವತನ್ ಕೇ ಲೋಗೋ…, ಸಂದೇಸೇ ಆತೇ ಹೈ… ಏ ದೇಶ್ ಹೈ ವೀರ್ ಜವಾನೋ ಕಾ… ಮಾ ತುಝೇ ಸಲಾಂ..ಗಳ ರೀಮಿಕ್ಸ್ ಹಾಡಿನ ನೃತ್ಯ ದೇಶಭಕ್ತಿಯ ಅಲೆಯಲ್ಲಿ ಕೊಚ್ಚಿಹೋಗುವಂತೆ ಮಾಡಿತು. ಆಯಾರೇ.. ಆಯಾರೇ.. ಮೋರಾ ಪಿಯಾ ಘರ್ ಆಯಾ… ಮೈ ತೋ ಹೋಗಯಿ ಬಾವರಿಯಾ… ಎನ್ನುವ ಹಾಡಿಗೆ ವಿದ್ಯಾರ್ಥಿಗಳು ಮಾಡಿದ ರಾಜಸ್ಥಾನಿ ಬಂಜಾರ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ಪಂಕಿಡಾ ಹೋ ಪಂಕಿಡ…ಪಂಕಿಡಾ ತು ಉಡನೀ ಜಾನಾ ಪವಘಡ ರೇ…. ಗುಜರಾತಿ ಗರ್ಭಾಡ್ಯಾನ್ಸ್ ಗಳು ವಿವಿಧತೆಯಲ್ಲಿ ಏಕತೆಯ ವೈಶಿಷ್ಟ್ಯದ ಸಾಂಸ್ಕೃತಿಕ ಸೊಬಗನ್ನು ತೆರೆದಿಟ್ಟಿತು. ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಗೀತದ ರೀಮಿಕ್ಸ್ ಹಾಡಿಗೆ ವಿ|ಮಾನಸ ಮತ್ತು ರಂಜಿತಾ ಮಯ್ಯ ಸಹೋದರಿಯರ ಶಾಸ್ತ್ರೀಯ ನೃತ್ಯ ಕಣ್ಮನ ತಣಿಸಿತು. ಮಧುರ ಕಂಠದೊಂದಿಗೆ ತನ್ಮಯತೆಯಿಂದ ಹಾಡುವ ಯದುರಾಜ್ ಹಾಗೂ ವರ್ಷಾ ಭಾಸ್ಕರ್ ಅವರ ಚಿತ್ರಗೀತೆಗಳು ಭಾವವಿಭೋರರಾಗಿಸಿತು.