ಮುಂಬಯಿ, ಅ. 4: ಮಹಾನಗರವು ಲಾಕ್‌ಡೌನ್ ಬಳಿಕ ಪ್ರಸ್ತುತ ನಿಧಾನವಾಗಿ ಮತ್ತೆ ತನ್ನ ನೈಜ ಸ್ವರೂಪ ಮತ್ತು ಲಯಕ್ಕೆಹಿಂದಿರುಗುತ್ತಿದೆ. ಮಹಾನಗರದ ಸಾರ್ವಜನಿಕ ಸಂಪರ್ಕ ಸಾರಿಗೆಯಲ್ಲಿ ಒಂದಾದ ರೈಲುಗಳು ಅಗತ್ಯ ಸಿಬಂದಿಗೆ ಮಾತ್ರ ಸೀಮಿತವಾಗಿರುವಾಗ ರಸ್ತೆ ಸಾರಿಗೆಯು ಸಾರ್ವಜನಿಕರಿಗೆ ಅನುಕೂಲಮಾಡಿಕೊಟ್ಟಿದೆ. ಆದರೆ ಇಲ್ಲಿ ಆಟೋರಿಕ್ಷಾಇರಿಸಿಕೊಂಡು ಬದುಕು ಕಟ್ಟಿಕೊಂಡಿದ್ದಕರಾವಳಿ ಮೂಲದ ಹಲವರು ಲಾಕ್‌ಡೌನ್ ಮತ್ತು ಆ ಬಳಿಕದ ಕಠಿನ ಸಂಚಾರ ನಿಯಮ ಗಳಿಂದಾಗಿ ದುಡಿಮೆ ಕಡಿಮೆಯಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.
ಲಾಕ್‌ಡೌನ್ ಅನಂತರ ಮೊದಲಿಗೆ ಸರಕಾರವು ಅಗತ್ಯ ಸೇವಾ ಸಿಬಂದಿಗೆ ಬಸ್ ಸೇವೆ ಪ್ರಾರಂಭಿಸಿತ್ತು. ಬಳಿಕ ರಿಕ್ಷಾ ಚಾಲಕರ ಬೇಡಿಕೆಯನ್ನು ಮನ್ನಿಸಿ ಲಾಕ್‌ಡೌನ್ – 4ರ ಅಡಿಯಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಟ್ಯಾಕ್ಸಿಗಳು, ಆಟೋ ರಿಕ್ಷಾಗಳು ಮತ್ತು ಇತರ ಸಾರ್ವಜನಿಕ ಸಾರಿಗೆಯು ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಕಾರ್ಯನಿರ್ವಹಿಸಲು ಅನುಮತಿ ನೀಡಿತ್ತು. ಪ್ರಸ್ತುತ ರಿಕ್ಷಾ- ಟ್ಯಾಕ್ಸಿ ಸಂಚಾರ ಸಹಜ ಸ್ಥಿತಿಯ ಕಡೆಗೆ ಸಾಗುತ್ತಿದ್ದರೂಮಹಾನಗರದಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿರುವ ನೂರಾರು ಕನ್ನಡಿಗರ ಸ್ಥಿತಿ ತೀರಾ ಹದಗೆಟ್ಟಿದೆ. ಹಿಂದಿನಂತೆ ಪ್ರಯಾಣಿಕರು ಇಲ್ಲದಿರುವುದು ಮಾತ್ರವಲ್ಲದೆ ಸರಕಾರದ ಮಾರ್ಗಸೂಚಿಗಳಿಂದ ದುಡಿಮೆ ಕಡಿಮೆಯಾಗಿದೆ ಎಂಬ ಅಳಲು ಅವರದು.
ಇಬ್ಬರು ಪ್ರಯಾಣಿಕರು ಮಾತ್ರ, “ಶೇರ್ ರಿಕ್ಷಾ’ ಕಡಿತ : ಸುರಕ್ಷೆ ಮತ್ತು ಕಾಳಜಿ ದೃಷ್ಟಿಯಿಂದ ಒಮ್ಮೆಗೆ ಇಬ್ಬರು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯುವ ನಿಯಮ ಪಾಲನೆಯನ್ನು ರಿಕ್ಷಾ ಚಾಲಕರುಮಾಡುತ್ತಿದ್ದಾರೆ. ಕೆಲವು ಚಾಲಕರು ಈಗಾಗಲೇ ಇಬ್ಬರು ಪ್ರಯಾಣಿಕರು ಮಾತ್ರ ಕುಳಿತುಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರಯಾಣಿಕರು ರಿಕ್ಷಾ ಏರುವುದಕ್ಕೆ ಮೊದಲೇ ಸ್ಯಾನಿಟೈಸರ್ ನೀಡುತ್ತಿದ್ದಾರೆ. ಕೆಲವು ಉಪನಗರಗಳಲ್ಲಿ ಮಾರ್ಗಸೂಚಿ ಗಾಳಿಗೆ ತೂರಿ ಹೆಚ್ಚು ಪ್ರಯಾಣಿಕರನ್ನು ಸಾಗಿಸುವುದೂ ಕಂಡುಬರುತ್ತಿದೆ. ಹಿಂದೆ 10 ರೂ. ನೀಡಿ “ಶೇರ್ ರಿಕ್ಷಾ’ಗಳಲ್ಲಿ ತೆರಳುತ್ತಿದ್ದ ಹೆಚ್ಚಿನವರು ಭಯದಿಂದ ರಿಕ್ಷಾ ಪ್ರಯಾಣ ತ್ಯಜಿಸಿದ್ದಾರೆ.
ಆರ್ಥಿಕ ಸಮಸ್ಯೆ : ಸಂಖ್ಯೆ ಕಡಿಮೆಯಾಗಿದೆ. ಸೀಮಿತ ಪ್ರಯಾಣಿಕರನ್ನು ಮಾತ್ರ ಕರೆದೊಯ್ಯುವ ಅವಕಾಶ ಇರುವುದರಿಂದ ಕೆಲವು ಪ್ರಯಾಣಿಕರು ಹೆಚ್ಚಿನ ದರ ನೀಡಲು ನಿರಾಕರಿಸುತ್ತಾರೆ. ಇದರಿಂದ ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ.
-ಶೇಖರ್ ಶೆಟ್ಟಿ, ಭಾಯಂದರ್ ರಿಕ್ಷಾ ಚಾಲಕರು
ಸಾಲ ಪಾವತಿಗೆ ತೊಂದರೆ : ಜೂನ್‌ನಿಂದ ಸಂಚಾರಕ್ಕೆ ಅನುಮತಿ ನೀಡಿದರೂ ಲಾಕ್ ಡೌನ್‌ಗೆ ಹಿಂದೆ ಹೋಲಿಸಿದರೆ ಪ್ರಸ್ತುತ ಬಾಡಿಗೆ ತುಂಬಾ ಕಡಿಮೆಯಿದೆ. ಅದಲ್ಲದೆ ಎಲ್ಲ ಮಾರ್ಗಗಳಲ್ಲಿ ವಾಹನಗಳ ದಟ್ಟಣೆ ಉಂಟಾಗುತ್ತಿದ್ದು, ದೂರದ ಬಾಡಿಗೆ ಪಡೆಯುವುದು ಕಷ್ಟವಾಗುತ್ತಿದೆ. ಮೂರು ರಿಕ್ಷಾಗಳನ್ನು ಹೊಂದಿದ್ದರೂ ಚಾಲಕರು ಮತ್ತು ಬಾಡಿಗೆ ಇಲ್ಲದ ಕಾರಣ ಬ್ಯಾಂಕ್ ಸಾಲ ಭರಿಸುವುದಕ್ಕೆ ತೊಂದರೆಯಾಗುತ್ತಿದೆ. ಇಎಂಐ ಕಟ್ಟಲು ಸರಕಾರ ಅವಧಿ ನೀಡಿರುವುದು ಮಾತ್ರ ಸಮಧಾನ ತಂದಿದೆ.
-ಕುನಾಲ್ ಸುವರ್ಣ, ವಸಾಯಿ ಪಶ್ಚಿಮ, ರಿಕ್ಷಾ ಚಾಲಕರು
ವಿನಾಕಾರಣ ದಂಡ : ಎಲ್ಲರಂತೆ ನಾವು ಕೂಡ ಸಮಸ್ಯೆ ಎದುರಿಸುತ್ತಿದ್ದೇವೆ. ಮೊದಲಿಗೆ ಐದು ರೂ. ದುಡಿಯುತ್ತಿದ್ದರೆ, ಈಗ ಒಂದು ರೂ. ದುಡಿಮೆಯಾಗಿದೆ ನಮ್ಮದು. ದಿನದ ದುಡಿಮೆ ಕಡಿಮೆಯಾಗಿದೆ. ಸರಕಾರದ ಅನೇಕ ನಿಯಮಗಳನ್ನುಪಾಲಿಸುತ್ತಿದ್ದರೂ ಕೆಲವೊಮ್ಮೆ ವಿನಾಕಾರಣವಾಗಿ ದಂಡ ವಿಧಿಸುವುದರಿಂದ ಮತ್ತಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಅಗತ್ಯ ಸೇವಾ ಸಿಬಂದಿ ಮತ್ತು ಕೆಲವೊಮ್ಮೆ ಮಾರುಕಟ್ಟೆಗಳಿಗೆ ಹೋಗುವವರು ರಿಕ್ಷಾ ಬಳಸುತ್ತಾರೆ. ದುಡಿಮೆ ಕಡಿಮೆಯಾಗಿರುವುದರಿಂದ ಸಂಸಾರ ನಡೆಸುವುದು ಕಷ್ಟ ಎಂಬಂತಾಗಿದೆ.
-ಮಾಧವ ಪೂಜಾರಿ ಬೊರಿವಲಿ, ರಿಕ್ಷಾ