Advertisement

ರಿಕ್ಷಾ ಚಾಲಕ-ಮಾಲಕರ ಹೋರಾಟ ಸಮಿತಿ ಪ್ರತಿಭಟನೆ

03:37 PM Jul 18, 2019 | Team Udayavani |

ಪುತ್ತೂರು: ತಾಲೂಕು ಆಟೋ ಚಾಲಕ-ಮಾಲಕರ ಸಂಯುಕ್ತ ಹೋರಾಟ ಸಮಿತಿ, ಸ್ನೇಹ ಸಂಗಮ ಮತ್ತು ಎಸ್‌ಡಿಎಸಿಯು ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಬುಧವಾರ ನಗರದ ಮಿನಿ ವಿಧಾನಸೌಧದ ಎದುರು ನಡೆಯಿತು.

Advertisement

ಬಡ ರಿಕ್ಷಾ ಚಾಲಕರೇ ಗುರಿ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಆಟೋ ಚಾಲಕ-ಮಾಲಕರ ಸಂಯುಕ್ತ ಹೋರಾಟ ಸಮಿತಿ ಗೌರವಾಧ್ಯಕ್ಷ ಸಂಜೀವ ನಾಯಕ್‌ ಕಲ್ಲೇಗ, ಬಡವರು ಮತ್ತು ಪ್ರಾಮಾಣಿಕ ಸೇವೆ ನೀಡುವ ರಿಕ್ಷಾ ಚಾಲಕರ ಮೇಲೆ ಎಲ್ಲ ರೀತಿಯ ಪ್ರಹಾರ ನಡೆಸುವ ಕೆಲಸ ಇಂದು ನಡೆಯುತ್ತಿದೆ. ಬಿಡಿಭಾಗಗಳು ಹಾಗೂ ಪೆಟ್ರೋಲ್‌ ಬೆಲೆ ಏರಿಕೆಯಿಂದ ರಿಕ್ಷಾ ಚಾಲಕರ ಬದುಕು ತತ್ತರಿಸಿದೆ. ಶಾಲೆಗೆ ಮಕ್ಕಳನ್ನು ಭದ್ರತೆಯಿಂದ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಹೊಂದಿ ರುವ ರಿಕ್ಷಾಗಳಿಗೆ ಕಾನೂನಿನ ಮಿತಿ ಹೇರಿ ಅವರ ಬದುಕಿಗೆ ಮತ್ತೂಂದು ಪೆಟ್ಟು ಕೊಡಲಾಗಿದೆ. ಪೊಲೀಸ್‌ ಇಲಾಖೆ ದೊಡ್ಡ ಕುಳಗಳನ್ನು ಬಿಟ್ಟು ಬಡ ರಿಕ್ಷಾ ಚಾಲಕರ ಮೇಲೆ ಕೇಸು ದಾಖಲಿಸುತ್ತಿರುವುದು ಎಷ್ಟು ಸರಿ? ಎಂದವರು ಖಾರವಾಗಿ ಪ್ರಶ್ನಿಸಿದರು.

ಸಿಕ್ಕಾಪಟ್ಟೆ ಪರ್ಮಿಟ್‌ ಬೇಡ
ಸ್ನೇಹ ಸಂಗಮ ಆಟೋ ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷ ಜಗದೀಶ್‌ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಪ್ರಸ್ತುತ ರಿಕ್ಷಾಗಳಿಗೆ ಸಿಕ್ಕಾಪಟ್ಟೆ ಪರ್ಮಿಟ್‌ ನೀಡುವುದರಿಂದ ಸಮಸ್ಯೆ ಉಂಟಾಗಿದೆ. ಈ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದ ಅವರು, ತಾಲೂಕಿನಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ರಿಕ್ಷಾಗಳ ವಿಚಾರದಲ್ಲಿ ಯಾವುದೇ ಸಮಸ್ಯೆ ಬಂದಿಲ್ಲ. ಆದರೂ ರಿಕ್ಷಾಗಳನ್ನೇ ಟಾರ್ಗೆಟ್‌ ಮಾಡಿ ನಿಯಮಗಳನ್ನು ಹೇರಲಾಗುತ್ತಿದೆ. ರಿಕ್ಷಾ ಚಾಲಕರ ಮೇಲೆ ಪೊಲೀಸ್‌ ವ್ಯವಸ್ಥೆ, ಅಧಿಕಾರಿಗಳು ಕರುಣೆ ತೋರಬೇಕು ಎಂದರು.

ಹೋರಾಟ ಅನಿವಾರ್ಯ
ಎಸ್‌ಡಿಎಸಿಯು ಜಿಲ್ಲಾ ಸಂಚಾಲಕ ಜಾಬಿರ್‌ ಅರಿಯಡ್ಕ ಮಾತನಾಡಿ, ಹಗಲಿರುಳು ಜನಸಾಮಾನ್ಯರ ಸೇವೆ ಗೈಯುವ ಆಟೋ ಚಾಲಕರನ್ನು ತೃತೀಯ ದರ್ಜೆಯಾಗಿ ಕಾಣುವ ಪರಿಸ್ಥಿತಿ ಉಂಟಾಗಿದೆ. ಕೇವಲ ಆರು ಮಕ್ಕಳನ್ನು ಕರೆದುಕೊಂಡು ಹೋಗುವ ಕಾನೂನು ಹೊರಡಿಸಿರುವ ಸರಕಾರ, ಅಧಿಕಾರಿಗಳು ಕಾನೂನಿನ ಮೂಲಕ ಆಟೋ ಚಾಲಕರನ್ನು ದಮನಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಚಾಲಕರ ಸಮಸ್ಯೆಯ ಕುರಿತು ಗಮನಹರಿಸಿ ಕಾನೂನು ಸಡಿಲಗೊಳಿಸುವಲ್ಲಿ ಪ್ರಯತ್ನಿಸಲಿ. ಇಲ್ಲದಿದ್ದಲ್ಲಿ ಆಟೋ ಚಾಲಕರ ಕುಟುಂಬದವರನ್ನು ಸೇರಿಸಿ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದರು.

12 ಬೇಡಿಕೆಗಳ ಮನವಿ
ಆಟೋ ಚಾಲಕ-ಮಾಲಕರ ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ ಕುಲಾಲ್‌ ಸ್ವಾಗತಿಸಿದರು. ಬಳಿಕ ಸಂಘದ ವತಿಯಿಂದ ಸುಮಾರು 12 ಬೇಡಿಕೆಗಳ ಮನವಿ ಪತ್ರವನ್ನು ಸಹಾಯಕ ಕಮಿಷನರ್‌ ಮೂಲಕ ಸರಕಾರಕ್ಕೆ ನೀಡಲಾಯಿತು.

Advertisement

ಸ್ವಚ್ಛತೆಯ ಮಾದರಿ
ಪ್ರತಿಭಟನ ಸಭೆಯ ಮೊದಲು ಸಮಿತಿಯ ಗೌರವಾಧ್ಯಕ್ಷ ಸಂಜೀವ ನಾಯಕ್‌ ಕಲ್ಲೇಗ ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು. ಬಳಿಕ ಸಮಿತಿಯ ಪದಾಧಿಕಾರಿಗಳು ಸ್ಮಾರಕದ ಆವರಣದಲ್ಲಿ ಹುಲ್ಲುಗಳನ್ನು ಕೀಳುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಕಾನೂನು ಸಲಹೆಗಾರ ದೇವಾನಂದ ಕೆ., ಹರಿಣಾಕ್ಷಿ ಜೆ. ಶೆಟ್ಟಿ, ಪ್ರಮುಖರಾದ ಬಾತೀಶ್‌ ಬಡಕ್ಕೋಡಿ, ಇಸ್ಮಾಯಿಲ್‌ ಬೊಳುವಾರು, ಸಿಲ್ವೆಸ್ಟರ್‌ ಡಿ’ಸೋಜಾ ಪಾಲ್ಗೊಂಡಿದ್ದರು.

ಅನಗತ್ಯ ನಿಯಮ
ಒಂದು ಮಗುವಿಗೆ ತಿಂಗಳಿಗೆ 500 ರೂ.ನಂತೆ ತೆಗೆದುಕೊಂಡು 6 ಮಕ್ಕಳನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋದರೆ ತಿಂಗಳಿಗೆ 3 ಸಾವಿರ ರೂ. ಮಾತ್ರ ಆಗುತ್ತದೆ. ಬೆಳಗ್ಗೆ, ಸಂಜೆ ಮತ್ತು ಮಧ್ಯದಲ್ಲೂ ಮಕ್ಕಳನ್ನು ಮನೆಗೆ ಬಿಡುವ ರಿಕ್ಷಾಗಳಿಗೆ ಇದು ಯಾವುದಕ್ಕೂ ಸಾಕಾಗುವುದಿಲ್ಲ. 4 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಮಗುವಿನಿಂದ ಕನಿಷ್ಠ 1 ಸಾವಿರ ರೂ. ಪಡೆಯುವುದು ಅನಿವಾರ್ಯವಾಗುತ್ತದೆ. ಇದರ ಜತೆಗೆ ಹಲವು ಅನಗತ್ಯ ನಿಯಮಗಳನ್ನೂ ಹೇರಲಾಗಿದೆ.
– ಜಯರಾಮ ಕುಲಾಲ್‌ , ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next