Advertisement

Richard Illingworth: ಅಂದು ಫೈನಲ್‌ ಆಟಗಾರ; ಇಂದು ಫೈನಲ್‌ ಅಂಪಾಯರ್‌!

11:35 PM Nov 18, 2023 | Team Udayavani |

ಅಹ್ಮದಾಬಾದ್: ರವಿವಾರದ ವಿಶ್ವಕಪ್‌ ಫೈನಲ್‌ಗೆ ಮೈದಾನದ ಇಬ್ಬರೂ ಅಂಪಾಯರ್‌ಗಳು ಇಂಗ್ಲೆಂಡ್‌ನ‌ವರೇ ಆಗಿರುವುದು ವಿಶೇಷ. ಇವರೆಂದರೆ ರಿಚರ್ಡ್‌ ಇಲ್ಲಿಂಗ್‌ವರ್ತ್‌ ಮತ್ತು ರಿಚರ್ಡ್‌ ಕೆಟಲ್‌ಬರೊ.

Advertisement

ಕೆಟಲ್‌ಬರೊ ಅವರಿಗೆ ಇದು 2ನೇ ಫೈನಲ್‌. 2015ರ ಫೈನಲ್‌ನಲ್ಲಿ ಮೊದಲ ಸಲ ಅವರು ಕರ್ತವ್ಯ ನಿಭಾಯಿಸಿದ್ದರು. ಇಲ್ಲಿಂಗ್‌ವರ್ತ್‌ ಅವರಿಗೂ ಇದು 2ನೇ ಫೈನಲ್‌. ಆದರೆ ಇಲ್ಲೊಂದು ಸ್ವಾರಸ್ಯವಿದೆ. ಅವರು ಮೊದಲ ಫೈನಲ್‌ನಲ್ಲಿ ಅಂಪಾಯರ್‌ ಆಗಿರಲಿಲ್ಲ, ಇಂಗ್ಲೆಂಡ್‌ ತಂಡದ ಆಟಗಾರನಾಗಿದ್ದರು!

ಇದು 1992ರ ಕತೆ…
ಎಡಗೈ ಸ್ಪಿನ್ನರ್‌ ಆಗಿದ್ದ ರಿಚರ್ಡ್‌ ಇಲ್ಲಿಂಗ್‌ವರ್ತ್‌ 1992ರ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡದ ಆಡುವ ಬಳಗದ ಸದಸ್ಯರಲ್ಲಿ ಒಬ್ಬರಾಗಿದ್ದರು. 10 ಓವರ್‌ಗಳಲ್ಲಿ 50 ರನ್‌ ನೀಡಿದ ಇಲ್ಲಿಂಗ್‌ವರ್ತ್‌ ಒಂದು ವಿಕೆಟ್‌ ಕೆಡವಿದ್ದರು. ಇವರ ಎಸೆತಕ್ಕೆ ಔಟಾದ ಆಟಗಾರ ಜಾವೇದ್‌ ಮಿಯಾಂದಾದ್‌. ಪಾಕಿಸ್ಥಾನ ಈ ಪಂದ್ಯದಲ್ಲಿ 6ಕ್ಕೆ 249 ರನ್‌ ಮಾಡಿತ್ತು. ಚೇಸಿಂಗ್‌ ವೇಳೆ ಇಂಗ್ಲೆಂಡ್‌ 227ಕ್ಕೆ ಸರ್ವಪತನ ಕಂಡಿತ್ತು. 14 ರನ್‌ ಮಾಡಿದ ಇಲ್ಲಿಂಗ್‌ವರ್ತ್‌, ಇಮ್ರಾನ್‌ ಖಾನ್‌ ಎಸೆತದಲ್ಲಿ ರಮೀಜ್‌ ರಾಜ ಅವರಿಗೆ ಕ್ಯಾಚ್‌ ನೀಡುವುದರೊಂದಿಗೆ ಪಾಕಿಸ್ಥಾನದ ಮೊದಲ ವಿಶ್ವಕಪ್‌ ಜಯಭೇರಿ ಮೊಳಗಲ್ಪಟ್ಟಿತ್ತು.

ಆದರೆ ರಿಚರ್ಡ್‌ ಇಲ್ಲಿಂಗ್‌ವರ್ತ್‌ ಫೈನಲ್‌ನಲ್ಲಿ ಅಂಪಾಯರ್‌ ಜವಾಬ್ದಾರಿ ನಿಭಾಯಿಸುತ್ತಿರುವುದು ಇದೇ ಮೊದಲು. ಇವರಿಬ್ಬರೂ ಸೆಮಿಫೈನಲ್‌ನಲ್ಲೂ ತೀರ್ಪುಗಾರರಾಗಿದ್ದರು. ಫೈನಲ್‌ನ ಮ್ಯಾಚ್‌ ರೆಫ್ರಿಯಾಗಿ ಜಿಂಬಾಬ್ವೆಯ ಆ್ಯಂಡಿ ಪೈಕ್ರಾಫ್ಟ್, ತೃತೀಯ ಅಂಪಾಯರ್‌ ಆಗಿ ಟ್ರಿನಿಡಾಡ್‌ ಮತ್ತು ಟೊಬೆಗೋದ ಜೋಯೆಲ್‌ ವಿಲ್ಸನ್‌ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next