ಹೊಸದಿಲ್ಲಿ: ದಿಲ್ಲಿ ವಿವಿ ವ್ಯಾಪ್ತಿಯ ಕಾಲೇಜುಗಳ ವ್ಯಾಪ್ತಿಯಲ್ಲಿ ಒಂದು ವಿಶೇಷ ಬ್ಯಾಂಕ್ ಸ್ಥಾಪಿಸಲಾಗಿದೆ.
ಅಂದ ಹಾಗೆ, ಇದು ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂದು ಯೋಚಿಸಿದ್ದರೆ ತಪ್ಪಾದೀತು. ಈ ವಿಶೇಷ ಬ್ಯಾಂಕ್‌ನಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಬರೋಬ್ಬರಿ ಒಂದು ಲಕ್ಷ ವಾಕ್ಯಗಳನ್ನು ಸಂಗ್ರಹಿಸಲಾಗಿದೆ. ಜತೆಗೆ ಅದನ್ನು ಗೂಗಲ್‌ಗೆ ಸಲ್ಲಿಕೆ ಮಾಡಲಾಗಿದೆ.
ಗೂಗಲ್‌ನಲ್ಲಿ ಶೀಘ್ರವೇ ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಭಾಷಾಂತರ ಲಭ್ಯವಾಗುತ್ತಿದೆ. ಗೂಗಲ್ ಟ್ಸಾನ್ಸ್‌ಲಿಟರೇಶನ್‌ನಲ್ಲಿ ಭಾರತೀಯ ಭಾಷೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಇಲ್ಲ ಎಂದು ಮನಗಂಡಿರುವ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಇಂಗ್ಲಿಷ್ ಮತ್ತು ಸಂಸ್ಕೃತವನ್ನು ಅದಕ್ಕೆ ಅಳವಡಿಸಲು ಯೋಜನೆ ಕೈಗೆತ್ತಿಕೊಂಡಿತು.
ಹೀಗಾಗಿ ದಿಲ್ಲಿ ವಿವಿಯ ವಿದೇಶಿ ವಿದ್ಯಾರ್ಥಿಗಳ ರಿಜಿಸ್ಟ್ರಿಯ ಜಂಟಿ ಡೀನ್ ಅಮರ್‌ಜೀವ ಲೋಚನ್ ನೇತೃತ್ವದಲ್ಲಿ ಯೋಜನೆ ಜಾರಿಗೊಳಿಸಲು ಮಾರ್ಚ್‌ನಲ್ಲಿ ಹೊಣೆ ನೀಡಿತು. ಲೇಡಿ ಶ್ರೀರಾಮ್ ಕಾಲೇಜು, ಹಿಂದೂ ಕಾಲೇಜು, ಸೈಂಟ್ ಸ್ಟೀಫನ್ ಕಾಲೇಜುಗಳ ಪ್ರಾಧ್ಯಾಪಕರ ಸಮಿತಿ ಯನ್ನು ಅವರು ರಚಿಸಿದರು.
ಆ ಸಮಿತಿ ಇಂಗ್ಲಿಷ್‌ನಲ್ಲಿ ಇರುವ ಕೆಲವೊಂದು ವಾಕ್ಯಗಳನ್ನು ಸಂಸ್ಕೃತಕ್ಕೆ ಭಾಷಾಂತರಿಸಿತು. ಒಂದು ವಾಕ್ಯದಲ್ಲಿ 5-6 ಶಬ್ದಗಳು ಇರುತ್ತಿದ್ದವು. ಹೀಗಾಗಿ, ಇಂಗ್ಲಿಷ್ ಮತ್ತು ಸಂಸ್ಕೃತ ವಾಕ್ಯಗಳನ್ನೂ ಗೂಗಲ್‌ಗೆ ನೀಡಲಾಯಿತು ಎಂದರು. ಇದರಿಂದಾಗಿ 2 ಭಾಷೆಗಳ ಅನುವಾದದ ಗುಣಮಟ್ಟ ಹೆಚ್ಚಲಿದೆ ಎಂದು ಲೋಚನ್ ಪ್ರತಿಪಾದಿಸಿದರು.
6 ತಿಂಗಳು ಕೆಲಸ: 30-35 ಮಂದಿ ಇರುವ ತಂಡ ಆರು ತಿಂಗಳ ಕಾಲ ಈ ವಿಚಾರಕ್ಕಾಗಿ ಕೆಲಸ ಮಾಡಿದೆ. ಈ ತಂಡ ಒಂದು ಲಕ್ಷ ಇಂಗ್ಲಿಷ್ ಮತ್ತು ಸಂಸ್ಕೃತ ವಾಕ್ಯಗಳನ್ನು ಸಂಗ್ರಹಿಸಿದೆ. ಅದಕ್ಕಾಗಿ ಐಸಿಸಿಆರ್-ಗೂಗಲ್ ನಡುವೆ ಒಪ್ಪಂದ ಮಾಡಿಕೊಂಡಿದೆ. ಸೈಂಟ್ ಸ್ಟೀಫನ್ ಕಾಲೇಜಿನಿಂದ ಪದವಿ ಪಡೆದ ಅನನ್ಯಜೀವ ಈ ಯೋಜನೆಯಲ್ಲಿ ಕೆಲಸ ಮಾಡಿದ್ದು 23 ಸಾವಿರ ವಾಕ್ಯಗಳನ್ನು ರಚಿಸಿದ್ದಾರೆ. ಅದಕ್ಕಾಗಿ ಅವರಿಗೆ ಕಾಳಿದಾಸನ ಕೆಲವು ಕೃತಿಗಳು, ರಾಮಾಯಣ ಮತ್ತು ಮಹಾಭಾರತವನ್ನು ಅಧ್ಯಯನ ನಡೆಸಿದ್ದಾಗಿ ಹೇಳಿಕೊಂಡರು.