Advertisement

ಮುಂದುವರಿದ ದರದ ಬರೆ ; ಅಕ್ಕಿ, ಗೋಧಿ, ಬೇಳೆ, ಮೊಟ್ಟೆ ದುಬಾರಿ

10:49 PM Feb 20, 2023 | Team Udayavani |

ಬೆಂಗಳೂರು:ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಜೊತೆಗೆ ಕಳೆದೊಂದು ತಿಂಗಳಿಂದ ಜನಸಾಮಾನ್ಯರು ಅಕ್ಕಿ, ಹಾಲು, ಗೋದಿ, ಬೇಳೆ, ಮೊಟ್ಟೆ ಮತ್ತಿತರ ಅಗತ್ಯ ವಸ್ತುಗಳ ದರ ಏರಿಕೆಯ ಬಿಸಿಯನ್ನು ಅನುಭವಿಸುತ್ತಿದ್ದಾರೆ.
ಅಕ್ಕಿಯ (ಸ್ಟೀಮ್‌ ರೈಸ್‌) ದರದಲ್ಲಿ ಶೇ.10ರಷ್ಟು ಹೆಚ್ಚಳವಾಗಿದ್ದರೆ, ದೋಸೆ ಅಕ್ಕಿ ಬೆಲೆಯಲ್ಲಿ ಪ್ರತಿ ಕೆ.ಜಿಗೆ 2 ರಿಂದ 3 ರೂ.ವರೆಗೂ ಏರಿಕೆಯಾಗಿರುವುದು ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ.

Advertisement

ಅಕ್ಕಿಯನ್ನು ವಿದೇಶಗಳಿಗೆ ರಫ್ತು ಮಾಡುವುದಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿರುವುದು, ಹಣದುಬ್ಬರದ ಏರಿಕೆ, ದೇಶೀಯ ಉತ್ಪಾದನೆ ಕುಂಠಿತಗೊಂಡಿರುವುದು, ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ದರದಲ್ಲಿ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆ.ಜಿ.ಗೆ 8-10ರೂ. ಏರಿಕೆ:
ಕಳೆದ ಒಂದು ತಿಂಗಳಿಂದ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿ ಸೇರಿದಂತೆ ಇನ್ನಿತರ ಸ್ಟೀಮ್‌ ರೈಸ್‌ಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ಹಿಂದೆ ಕೇಂದ್ರ ಸರ್ಕಾರ ಶೇ.5ರಿಂದ 10ರಷ್ಟು ಅಕ್ಕಿಯ ವಿದೇಶಿ ರಫ್ತುಗೆ ಮಾತ್ರ ಅನುಮತಿ ನೀಡಿತ್ತು. ಆದರೆ ಈಗ ಶೇ.20ರಷ್ಟು ರಫ್ತಿಗೆ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಬಾಸ್ಮತಿ ಸೇರಿದಂತೆ ಎಲ್ಲ ರೀತಿಯ ಅಕ್ಕಿಯ ಬೆಲೆಯಲ್ಲಿ ಪ್ರತಿ ಕೆ.ಜಿಗೆ 8ರಿಂದ 10ರೂ.ಗಳಷ್ಟು ಏರಿಕೆಯಾಗಿದೆ. ಅದರಲ್ಲೂ ಪಲಾವ್‌, ಬಿರಿಯಾನಿಯಂತಹ ಅಡುಗೆಗಳಿಗೆ ಯಥೇತ್ಛವಾಗಿ ಬಳಸುವ ಬಾಸ್ಮತಿ ಸ್ಟೀಮ್‌ ರೈಸ್‌ನ ಬೆಲೆ ಸಗಟು ದರದಲ್ಲಿಯೇ ಕೆ.ಜಿ.ಮೇಲೆ 10ರೂ. ಹೆಚ್ಚಳವಾಗಿದೆ. ಕೆಲವೆಡೆ ಸಗಟು ವ್ಯಾಪಾರಿಗಳ ನೂರಾರು ಟನ್‌ಗಟ್ಟಲೆ ದಾಸ್ತಾನು ಮಾಡಿರುವುದು ಸಹ ಬೆಲೆ ಏರಿಕೆ ಕಾರಣ ಎನ್ನಲಾಗುತ್ತಿದೆ.

ಕೇವಲ ಅಕ್ಕಿ ಮಾತ್ರವಲ್ಲದೇ, ಗೋಧಿ, ಬೇಳೆಕಾಳುಗಳು, ಮೊಟ್ಟೆಯ ದರದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಇನ್ನೂ ಕೆಲವು ತಿಂಗಳುಗಳ ಕಾಲ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ. 2022ರ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಅಂದರೆ ಶೇ.5.72ಕ್ಕೆ ಇಳಿದಿತ್ತು. ನಂತರ ಜನವರಿಯಲ್ಲಿ ಶೇ.6.52ಕ್ಕೆ ಏರಿಕೆಯಾಗಿತ್ತು. ಜನವರಿ ತಿಂಗಳಲ್ಲಿ ತರಕಾರಿ ದರ ಇಳಿಕೆಯಾದರೂ, ಬೇಳೆಕಾಳುಗಳು, ಮೊಟ್ಟೆ, ಮಾಂಸ, ಮೀನು ಮತ್ತು ಹಾಲಿನ ಉತ್ಪನ್ನಗಳ ಹಣದುಬ್ಬರ ಹೆಚ್ಚಾದ ಕಾರಣ, ಈ ಎಲ್ಲ ವಸ್ತುಗಳ ಬೆಲೆಯೂ ಗಗನಮುಖಿಯಾಗಿದೆ.

ಈ ಹಿಂದೆ ಕೋವಿಡ್‌ ಹಿನ್ನೆಲೆಯಲ್ಲಿ ಉತ್ಪಾದನೆ ಕಡಿಮೆ ಆಗಿತ್ತು. ಜತೆಗೆ ಮಳೆ, ಪ್ರವಾಹದಿಂದಲೂ ಉತ್ಪಾದನೆ ಕುಂಠಿತವಾಗಿತ್ತು. ಹೀಗಾಗಿ, ಬೆಲೆಯಲ್ಲಿ ಸ್ವಲ್ಪಮಟ್ಟಿನ ಹೆಚ್ಚಳವಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಅಕ್ಕಿ ರಫ್ತಿಗೆ ಗ್ರೀನ್‌ ಸಿಗ್ನಲ್‌ ನೀಡಿರುವುದರಿಂದ ಬಾಸ್ಮತಿ, ಸೋನಾ ಮಸೂರಿ ಮತ್ತಿತರ ಅಕ್ಕಿಗಳ ದರ ಹೆಚ್ಚಳವಾಗಿದೆ ಎಂದು ಎಫ್ಕೆಸಿಸಿಐನ ಮಾಜಿ ಅಧ್ಯಕ್ಷ ಪೆರಿಕಲ್‌ ಸುಂದರ್‌ ಹೇಳುತ್ತಾರೆ.

Advertisement

ಜತೆಗೆ ಕೇಂದ್ರ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಲವು ಸುಧಾರಣೆ ತಂದಿದೆ. ಮುಕ್ತ ಮಾರುಕಟ್ಟೆಯಲ್ಲೂ ರೈತರ ಮಾರಾಟಕ್ಕೆ ಅವಕಾಶ ನೀಡಿದೆ. ಇದು ಕೂಡ ರೈತರಿಗೆ ಅನುಕೂಲವಾಗಿದೆ. ಇನ್ನು ಎರಡೂ¾ರು ತಿಂಗಳಲ್ಲಿ ಹೊಸಬೆಳೆ ಮಾರುಕಟ್ಟೆಗೆ ಪ್ರವೇಶವಾಗಲಿದೆ. ಅಲ್ಲಿಯವರೆಗೂ ಕೆಲವು ಅಕ್ಕಿಗಳ ಬೆಲೆ ಈ ಧಾರಣೆಯಲ್ಲಿಯೇ ಮುಂದುವರಿಯಲಿದೆ. ಒಂದು ವೇಳೆ ಸರ್ಕಾರ ರಫ್ತಿಗೆ ಕಡಿವಾಣ ಹಾಕಿದರೆ ಅಕ್ಕಿಯ ಬೆಲೆಯಲ್ಲಿ ಇಳಿಕೆಯಾಗಲಿದೆ ಎನ್ನುತ್ತಾರೆ.

ಪಂಜಾಬ್‌, ಹರ್ಯಾಣದಲ್ಲಿ ಹೆಚ್ಚಿನ ಬೆಳೆ:
ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ಬಾಸ್ಮತಿ ಅಕ್ಕಿಯನ್ನು ಪಂಜಾಬ್‌, ಹರ್ಯಾಣ ರಾಜ್ಯಗಳಲ್ಲಿ ಬೆಳೆಯುತ್ತಾರೆ. ಉತ್ತರ ಭಾರತದಲ್ಲಿ ಬೆಳೆಯಲಾಗುವ ಬಾಸ್ಮತಿ ಅಕ್ಕಿ ಅತ್ಯುತ್ತಮ ಗುಣಮಟ್ಟದ್ದಾಗಿದೆ. ಹೀಗಾಗಿ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅಧಿಕ ಬೇಡಿಕೆಯಿದೆ. ಇರಾಕ್‌, ಇರಾನ್‌, ಕುವೈತ್‌, ಬಹರೈನ್‌, ಒಮನ್‌, ಕತಾರ್‌, ಸೌದಿ ಅರೇಬಿಯಾ ಸೇರಿದಂತೆ ಮತ್ತಿತರ ಮಧ್ಯಪ್ರಾಚ್ಯ ರಾಷ್ಟ್ರಗಳು ಸ್ಟೀಮ್‌ ರೈಸ್‌ ಅನ್ನು ಹೇರಳವಾಗಿ ಆಮದು ಮಾಡಿಕೊಳ್ಳುತ್ತವೆ ಎಂದು ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಹೇಳುತ್ತಾರೆ.

ಆಂಧ್ರಪ್ರದೇಶ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಬಾಸ್ಮತಿ ಅಕ್ಕಿ ಬೆಳೆಯಲಾಗುತ್ತಿದೆ. ಆದರೆ ಪಂಜಾಬ್‌, ಹರ್ಯಾಣ ಭಾಗದ ಬಾಸ್ಮತಿ ಅಕ್ಕಿಯ ಮಾದರಿಯ ಗುಣಮಟ್ಟ ಇಲ್ಲಿರುವುದಿಲ್ಲ. ಬಾಸ್ಮತಿ ಅಕ್ಕಿಯಲ್ಲಿ ಕೂಡ ಹಲವು ರೀತಿಯ ತಳಿಗಳಿವೆ. ಆದರೆ ಮಧ್ಯಪ್ರಾಚ್ಯ ರಾಷ್ಟ್ರದವರು ಉತ್ತರ ಭಾರತದ ರಾಜ್ಯಗಳಲ್ಲಿ ಬೆಳೆಯಲಾಗುವ ಬಾಸ್ಮತಿ ಅಕ್ಕಿಯನ್ನು ಅಧಿಕ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ ಎಂದೂ ಲಹೋಟಿ ಹೇಳುತ್ತಾರೆ.

ಕಳೆದ ಒಂದು ತಿಂಗಳಿಂದ ಅಕ್ಕಿಯ ಬೆಲೆ ಹೆಚ್ಚಳವಾಗಿದೆ. ಸೋನಾ ಮಸೂರಿ, ದೋಸೆ ಅಕ್ಕಿ, ರೋಸ್ಮಟ್ಟಾ , ಕೊಲ್ಲಂ ರೈಸ್‌ ಬೆಲೆ ಹೆಚ್ಚಳವಾಗಿದೆ. ಹೊಸ ಬೆಳೆ ಮಾರುಕಟ್ಟೆ ಪ್ರವೇಶಿಸುವವರೆಗೂ ಇದು ಹೀಗೇ ಇರಲಿದೆ.
-ಬಾಲಕೃಷ್ಣ, ಅಕ್ಕಿ ವ್ಯಾಪಾರಿ, ಎಪಿಎಂಸಿ ಮಾರುಕಟ್ಟೆ ಯಶವಂತಪುರ

ಏರಿಕೆಗೆ ಕಾರಣವೇನು?
– ಅಕ್ಕಿ ರಫ್ತು ಹೆಚ್ಚಳ
– ಉತ್ಪಾದನಾ ವೆಚ್ಚ ಏರಿಕೆ
– ದೇಶೀಯ ಉತ್ಪಾದನೆ ಕುಸಿತ
– ರಫ್ತು ಬೇಡಿಕೆ ಹೆಚ್ಚಳ
– ಹಣದುಬ್ಬರದ ಸತತ ಏರಿಕೆ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next