ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ಮತ್ತೆ ಸಕ್ರಿಯವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪಡಿತರ ಅಕ್ರಮ ದಾಸ್ತಾನು, ಸಾಗಾಟ ನಿರಾತಂಕವಾಗಿ ಸಾಗಿದೆ.
ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಮಹತ್ವಕಾಂಕ್ಷೆಯೊಂದಿಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಬಡವರ ಅನುಕೂಲಕ್ಕಾಗಿ ಸರ್ಕಾರ ಬಿಪಿಎಲ್ ಪಡಿತರ ಕುಟುಂಬಗಳಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದೆ.
ಯೋಜನೆಯಡಿ ಉಚಿತವಾಗಿ ನೀಡಲಾಗುವ ಅಕ್ಕಿಯನ್ನು ಅನೇಕರು 8-10ರೂಗೆ ಪ್ರತಿ ಕೆಜಿ ದರದಲ್ಲಿ ಕಾಳಸಂತೆಗೆ ಮಾರಾಟ ಮಾಡುತ್ತಿದ್ದಾರೆ. ಹೊಸಪೇಟೆ ನಗರವೊಂದರಲ್ಲೇ ಪ್ರತಿನಿತ್ಯ 100 ಕ್ವಿಂಟಲ್‌ಗಿಂತ ಅ ಧಿಕ ಅಕ್ಕಿಯನ್ನು ಸಂಗ್ರಹಿಸುವ ಖರೀದಿದಾರರು ನಾನಾ ಉದ್ದೇಶಗಳಿಗಾಗಿ ಮಹಾನಗರಗಳಿಗೆ ದಾಟಿಸುತ್ತಿದ್ದಾರೆ. ಇದೇ ಅಕ್ಕಿಯನ್ನು ಪಾಲಿಶ್ ಮಾಡಿ, ಸೋನಾ ಮಸೂರಿ ಸೇರಿದಂತೆ ಇನ್ನಿತರೆ ಅಕ್ಕಿಯಲ್ಲಿ ಮಿಶ್ರಣ ಮಾಡಲಾಗುತ್ತದೆ. ಕಡಿಮೆ ಬೆಲೆಗೆ ದೊರೆಯುವ ಅನ್ನಭಾಗ್ಯ ಅಕ್ಕಿ ಮೇಲೆ ದಂಧೆಕೋರರ ಕಣ್ಣು ಬಿದ್ದಿದೆ ಎನ್ನಲಾಗಿದೆ.
ಮೈಕೊಡವಿದ ದಂಧೆಕೋರರು: ಈ ಹಿಂದೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪಡಿತರ ಅಕ್ಕಿ ಸಾಗಾಟದ ಪ್ರಕರಣಗಳು ಕಂಡು ಬರುತ್ತಿದ್ದವು. ಇತ್ತೀಚೆಗೆ ಜಿಲ್ಲಾ ಕೇಂದ್ರ ಹೊಸಪೇಟೆ ನಗರ, ಅಕ್ಕಪಕ್ಕದ ಹಳ್ಳಿಗಳಲ್ಲೂ ಕಂಡು ಬರುತ್ತಿದೆ. ಪಡಿತರ ಅಕ್ಕಿ ಅಕ್ರಮ ಸಾಗಾಟಕ್ಕೆ ಸಂಬಂ ಧಿಸಿದ ಅಕ್ಟೋಬರ್ ಅಂತ್ಯದಲ್ಲಿ ನಗರದಲ್ಲಿ ಮೂರ್‍ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಇದಾದ ನಂತರ ಕೊಂಚ ಶಾಂತವಾಗಿದ್ದ ಅಕ್ರಮ ದಂಧೆ ಮತ್ತೆ ಮೈಕೊಡವಿದೆ. ಕಳೆದ ಮೂರು ದಿನಗಳಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಭಾನುವಾರ ಬೆಳಗಿನ ಜಾವ ಹೊಸಪೇಟೆ ನಗರದ ನೂರಾನಿ ಮಸೀದಿ ಸಮೀಪ ಮಿನಿ ಗೂಡ್ಸ್ ವಾಹನಕ್ಕೆ ಅಕ್ಕಿ ಲೋಡ್ ಮಾಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಗೂಡ್ಸ್ ವಾಹನ ಸಹಿತ 1.15 ಲಕ್ಷ ರೂ. ಬೆಲೆ ಬಾಳುವ 125 ಚೀಲಗಳಲ್ಲಿ ತುಂಬಿದ್ದ 5 ಟನ್ ಅಕ್ಕಿ ವಶಕ್ಕೆ ಪಡೆದಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸೋಮವಾರ ರಾತ್ರಿ 8.30 ರ ಸುಮಾರಿಗೆ ತಾಲೂಕಿನ ಕಾರಿಗನೂರು ಗ್ರಾಮದ ಆರ್‌ಬಿಎಸ್‌ಎಸ್ ಮೈನ್ಸ್ ಕಚೇರಿ ಸಮೀಪದ ಜಾಲಿಗಿಡಗಳ ಪೊದೆಯಲ್ಲಿ ಅಡಗಿಸಿಟ್ಟಿದ್ದ 39 ಸಾವಿರ ರೂ. ಮೌಲ್ಯದ 26 ಕ್ವಿಂಟಲ್ ಅಕ್ಕಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆದರೆ, ಆರೋಪಿಗಳು ಯಾರೆಂಬುದು ಗೊತ್ತಾಗಿಲ್ಲ
ಎನ್ನಲಾಗಿದೆ.
ಈ ಪೈಕಿ ನಗರದ ನೂರಾನಿ ಮಸೀದಿ ಬಳಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿದ್ದರ ಬಗ್ಗೆ ಮೊದಲು ಎಸ್ಪಿ ಶ್ರೀಹರಿ ಬಾಬುಗೆ ಮಾಹಿತಿ ಸಿಕ್ಕಿತ್ತು. ಅದನ್ನು ಆಧರಿಸಿ ಸಿಬ್ಬಂದಿ ದಾಳಿ ನಡೆಸಿದ್ದರು ಎಂದು ಇಲಾಖೆ ಮೂಲಗಳು ತಿಳಿಸಿವೆ.
ಪೊಲೀಸರಿಂದಲೇ ಹೆಚ್ಚು ದಾಳಿ: ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮ ದಾಸ್ತಾನು, ಸಾಗಾಟದ ಮೇಲೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಡೆಸಿದ ದಾಳಿಗಳು ಬೆರಳಿಣಿಕೆಯಷ್ಟು ಮಾತ್ರ. ಇನ್ನುಳಿದಂತೆ ಪೊಲೀಸ್ ಇಲಾಖೆಯೇ ಅಕ್ರಮ ಅಕ್ಕಿ ದಂಧೆ ಬೇಧಿಸುತ್ತಿದೆ. ಆದರೂ ಕಾಳ ಸಂತೆಗೆ ಪಡಿತರ ಅಕ್ಕಿ ಸಾಗಾಟವನ್ನು ತಡೆಯಬೇಕು ಎಂಬುದು ಸಾರ್ವಜನಿಕರ ಒತ್ತಾಯ
ಜಿಲ್ಲೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗೆ ಅವಕಾಶವಿಲ್ಲ. ಇತ್ತೀಚೆಗೆ ಪಡಿತರ ಅಕ್ಕಿ ದಾಸ್ತಾನು, ಸಾಗಾಟದ ಬಗ್ಗೆ ಮಾಹಿತಿ ಬಂದ ತಕ್ಷಣ ಸಿಬ್ಬಂದಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳ ಅಕ್ಕಿಯನ್ನು ಖಚಿತಪಡಿಸಿದ ಬಳಿಕವೇ ಪ್ರಕರಣ ದಾಖಲಿಸಲಾಗುತ್ತದೆ. ಇಂಥ ಚಟುವಟಿಕೆ ಬಗ್ಗೆ ಸಾರ್ವಜನಿಕರು ಸಂಬಂಧಿ ಸಿ ಠಾಣೆಗೆ ಮಾಹಿತಿ ನೀಡಿ, ಕಾನೂನು ಬಾಹಿರ ಚಟುವಟಿಕೆ ತಡೆಯಲು ಸಹಕರಿಸಬೇಕು.
ಶ್ರೀಹರಿಬಾಬು ಬಿ.ಎಲ್., ಎಸ್ಪಿ