ಬೆಂಗಳೂರು: ರೈಸ್ ಪುಲ್ಲಿಂಗ್ ಮಿಷನ್ (ಅದೃ ಷ್ಟದ ವಸ್ತು, ಚೊಂಬು ) ನೀಡುವುದಾಗಿ ಸಾರ್ವ ಜನಿಕರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಮಾಜಿ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 2.88 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮಾಜಿ ಕಾನ್‌ಸ್ಟೇಬಲ್ ನಟೇಶ್ (44), ವೆಂಕಟೇಶ್ (47), ಸೋಮಶೇಖರ್ (47) ಬಂಧಿತರು.
ಆರೋಪಿಗಳಿಂದ ರೈಸ್ ಪುಲ್ಲಿಂಗ್ ಯಂತ್ರ, ಬೆಂಝ್, ಫಾರ್ಚುನರ್, ಸ್ಕಾರ್ಪಿಯೋ ಕಾರುಗಳು, 1.332 ಗ್ರಾಂ ಚಿನ್ನಾಭರಣ, 28 ಲಕ್ಷ ರೂ. ನಗದು ಹಣ ಜಪ್ತಿ ಮಾಡಿದ್ದಾರೆ. ಶ್ರೀಮಂತ ಕುಳಗಳನ್ನು ಹುಡುಕುತ್ತಿದ್ದ ಆರೋ ಪಿಗಳು ತಮ್ಮ ಬಳಿ ರೈಸ್ ಪುಲ್ಲಿಂಗ್ ಯಂತ್ರ ಇರುವುದಾಗಿ ನಂಬಿಸುತ್ತಿದ್ದರು. ಇದು ಕೋಟ್ಯಂ ತರ ರೂ. ಬೆಲೆ ಬಾಳುವ ಯಂತ್ರವಾಗಿದ್ದು, ನಮಗೆ ತುರ್ತು ಹಣದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಇದನ್ನು ಕಡಿಮೆ ಬೆಲೆಗೆ ಕೊಡುತ್ತಿದ್ದೇವೆ. ನೀವು ಸೂಕ್ತ ಗ್ರಾಹಕರನ್ನು ಹುಡುಕಿದರೆ ಕೋಟ್ಯಂತರ ರೂ.ಗೆ ಮಾರಾಟ ಮಾಡಬಹುದು ಎಂದು ಹೇಳುತ್ತಿದ್ದರು. ಇವರ ಮಾತನ್ನು ನಂಬಿದ ಹಲವು ಮಂದಿ ಲಕ್ಷಾಂತರ ರೂ. ಮುಂಗಡವಾಗಿ ಕೊಟ್ಟಿದ್ದರು. ಸಾರ್ವಜನಿಕರಿಂದ ಹಣ ಪಡೆದ ಬಳಿಕ ಯಾವುದೇ ರೈಸ್ ಪುಲ್ಲಿಂಗ್ ಯಂತ್ರ ಕೊಡದೇ ಪಡೆದ ಹಣದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿ ದುಂದು ವೆಚ್ಚ ಮಾಡುತ್ತಿದ್ದರು. ಆರೋಪಿಗಳು ಹಲವು ಜನರಿಗೆ ವಂಚಿಸಿರುವುದು ಗೊತ್ತಾಗಿದೆ. ಇತ್ತೀಚೆಗೆ ಆರೋಪಿಗಳಿಂದ ವಂಚನೆಯಾದ ವ್ಯಕ್ತಿಯೊಬ್ಬರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತರು ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದರು. ತಮ್ಮ ಮಾತಿಗೆ ಮರುಳಾಗುವ ವ್ಯಕ್ತಿಗಳಿಗೆ ತೋರಿಸಲೆಂದು ಕಬ್ಬಿಣದ ವಸ್ತುವೊಂದನ್ನು ರೈಸ್ ಪುಲ್ಲಿಂಗ್ ಯಂತ್ರ ಎಂದು ತೋರಿಸುತ್ತಿದ್ದರು. ಆರೋಪಿಗಳ ಮಾತಿನ ಮೋಡಿಗೆ ಮರುಳಾದ ಹಲವಾರು ಮಂದಿ ಹಣ ಕಳೆದುಕೊಂಡು ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾರೆ.
ಏನಿದು ರೈಸ್ ಪುಲ್ಲಿಂಗ್? : ರೈಸ್ ಪುಲ್ಲಿಂಗ್ ದಂಧೆ ನಡೆಸುವವರು ಸಿಡಿಲು ಬಡಿದ ತಾಮ್ರದ ಚೊಂಬಿಗೆ ಅಕ್ಕಿ ಕಾಳು ಸೆಳೆಯುವ ಶಕ್ತಿ ಇದೆ. ರೇಡಿಯೇಶನ್ ಪವರ್ ಇರುವ ಈ ರೈಸ್ ಪುಲ್ಲಿಂಗ್ ಚೊಂಬು ಅಥವಾ ಯಂತ್ರಗಳನ್ನು ಮನೆಯಲ್ಲಿಟ್ಟುಕೊಂಡರೆ ಅದೃಷ್ಟ ನಿಮ್ಮದಾಗಲಿದೆ ಎಂದು ಆರೋಪಿಗಳು ನಂಬಿಸುತ್ತಾರೆ. ಈ ಮೂಢನಂಬಿಕೆಗೆ ಒಳಗಾಗುವ ವ್ಯಾಪಾರಿಗಳು ಹಾಗೂ ಶ್ರೀಮಂತರು ಲಕ್ಷ-ಲಕ್ಷ ಕೊಟ್ಟು ಈ ರೈಸ್ ಪುಲ್ಲಿಂಗ್ ಪ್ರಕರಣದ ಮೂವರು ಆರೋಪಿಗಳು. ಚೊಂಬನ್ನು ಖರೀದಿಸಿ ಮನೆಯಲ್ಲಿಟ್ಟುಕೊಳ್ಳುತ್ತಾರೆ.
ಪೊಲೀಸ್ ಕೆಲಸ ಬಿಟ್ಟು ದಂಧೆಗಿಳಿದ: ಆರೋಪಿ ನಟೇಶ್ 2007ರಲ್ಲಿ ಸಿಎಆರ್‌ನಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕೆಲಸಮಾಡುತ್ತಿದ್ದ. ನಂತರ ರೈಸ್ ಪುಲ್ಲಿಂಗ್ ದಂಧೆಗೆ ಸಿಲುಕಿ ಹಣ ಕಳೆದುಕೊಂಡಿದ್ದ. ನಷ್ಟ ಉಂಟಾದ ಬಳಿಕ ಪೊಲೀಸ್ ಕೆಲಸ ಬಿಟ್ಟು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಬಳಿಕ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಇನ್ನಿಬ್ಬರು ಆರೋಪಿಗಳ ಜೊತೆಗೂಡಿ ರೈಸ್ ಪುಲ್ಲಿಂಗ್ ದಂಧೆಗೆ ಇಳಿದಿದ್ದ.