Advertisement

ಪ್ಲಾಸ್ಟಿಕ್‌ ತ್ಯಾಜ್ಯ ತಂದರೆ ಅಕ್ಕಿ ಬಹುಮಾನ!

11:36 PM Dec 08, 2019 | Sriram |

ಕಡಬ: ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿ ಜಾಗೃತಿಗಾಗಿ ಸುಳ್ಯ ತಾಲೂಕಿನ ಪಟ್ನೂರು ಹಾಗೂ ಅಮರ ಪಟ್ನೂರು ಗ್ರಾಮದ ಅಮರ ಸಂಘಟನ ಸಮಿತಿಯ ಆಶ್ರಯದಲ್ಲಿ ರಾಮಕುಂಜದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ರಾಮಕುಂಜ ಗ್ರಾ.ಪಂ. ಸಹಯೋಗದಲ್ಲಿ ಜರಗಿದ ವಿಶಿಷ್ಟ ಕಾರ್ಯಕ್ರಮ ಗಮನ ಸೆಳೆಯಿತು.

Advertisement

ಪ್ಲಾಸ್ಟಿಕ್‌ನ ದುಷ್ಪರಿಣಾಮಗಳು ಮತ್ತು ನಮಗೆ ಬೇಡವಾದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಯಾವ ರೀತಿ ವ್ಯವಸ್ಥಿತವಾಗಿ ವಿಲೇವಾರಿ ಮಾಡಬಹುದೆನ್ನುವ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅಮರ ಸಂಘಟನ ಸಮಿತಿಯ ಕಾರ್ಯಕರ್ತರ ಪರಿಸರ ಕಾಳಜಿ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು.

ವಿದ್ಯಾರ್ಥಿಗಳು ಶಿಕ್ಷಕರ ಪ್ರೋತ್ಸಾಹದಿಂದ ಎಲ್ಲೆಂದರಲ್ಲಿ ಬಿಸುಟ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್‌ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯಾರ್ಥಿಗಳು ನೇರವಾಗಿ ಈ ಕಾರ್ಯ ಕ್ರಮದಲ್ಲಿ ಪಾಲ್ಗೊಂಡರೆ ಅವರ ಮನೆ ಮಂದಿಯೂ ವಿಶೇಷ ಕಾಳಜಿಯಿಂದ ಸ್ಪಂದಿಸಿದ್ದಾರೆ. ತನ್ಮೂಲಕ ವಿದ್ಯಾರ್ಥಿಗಳ ಮನೆ ಹಾಗೂ ಪರಿಸರದಲ್ಲಿಯೂ ಜಾಗೃತಿ ಉಂಟಾಗಿದೆ.

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್‌., ರಾಮಕುಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್‌ ಆರ್‌.ಕೆ., ಪಿಡಿಒ ಜೆರಾಲ್ಡ್‌ ಮಸ್ಕರೇನ್ಹಸ್‌, ಅಮರ ಸಂಘಟನ ಸಮಿತಿಯ ಗೌರವಾಧ್ಯಕ್ಷ ರಜನೀಕಾಂತ್‌, ಅಧ್ಯಕ್ಷ ಶಿವಪ್ರಸಾದ್‌ ದೊಡ್ಡಹಿತ್ಲು, ಕಾರ್ಯದರ್ಶಿ ಶಶಿಕಾಂತ್‌ ಮಿತ್ತೂರು, ಶಾಲಾ ಮುಖ್ಯ ಶಿಕ್ಷಕ ಸತೀಶ್‌ ಭಟ್‌ ಉದ್ಘಾಟನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಬಾಲಚಂದ್ರ ಮುಚ್ಚಿಂತಾಯ ಪ್ಲಾಸ್ಟಿಕ್‌ ದುಷ್ಪರಿಣಾಮಗಳ ಕುರಿತು ಮಾತನಾಡಿದರು.

Advertisement

ಅಕ್ಕಿ ಬಹುಮಾನ
“ಒಂದು ಕೆಜಿ ಪ್ಲಾಸ್ಟಿಕ್‌ತ್ಯಾಜ್ಯ ತಂದರೆ ಒಂದು ಕೆಜಿ ಅಕ್ಕಿ ಬಹುಮಾನ’ ಘೋಷಣೆಯೊಂದಿಗೆ ಸಂಘಟಿಸಲಾದ ಈ ಕಾರ್ಯಕ್ರಮದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ 400 ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಭಾಗವಹಿಸಿದರು. ಸ್ಪರ್ಧಿಗಳಿಂದ ಒಟ್ಟು 280 ಕೆಜಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾಯಿತು. 1 ಕೆಜಿಗಿಂತ ಕಡಿಮೆ ಪ್ಲಾಸ್ಟಿಕ್‌ ತಂದ ಸ್ಪರ್ಧಿಗೂ 1 ಕೆಜಿ ಅಕ್ಕಿ ವಿತರಿಸಲಾಯಿತು. ಸ್ಪರ್ಧೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿ ಹೃತಿಕ್‌ ಅತೀ ಹೆಚ್ಚು (27 ಕೆಜಿ) ಪ್ಲಾಸ್ಟಿಕ್‌ ಸಂಗ್ರಹಿಸಿದರು. 8ನೇ ತರಗತಿಯ ಲಿಕಿತ್‌ ಗೌಡ 23 ಕೆಜಿ ಪ್ಲಾಸ್ಟಿಕ್‌ ಸಂಗ್ರಹಿಸಿದರು. ಬಹುಮಾನವಾಗಿ ಒಟ್ಟು 350 ಕೆಜಿ ಅಕ್ಕಿ ವಿತರಣೆಯಾಯಿತು.

 ವಿಶಿಷ್ಟ ಕಾರ್ಯಕ್ರಮ
ಎಂಜಿನಿಯರ್‌, ಡಾಕ್ಟರ್‌, ಡ್ರೈವರ್‌, ಫೂಟೋಗ್ರಾಫರ್‌, ಕೂಲಿ, ಸರಕಾರಿ ಉದ್ಯೋಗಿಗಳು ಹೀಗೆ ಎಲ್ಲ ವರ್ಗಗಳ, ಎಲ್ಲ ವಯೋಮಾನದ ಸುಮಾರು 60 ಮಂದಿ ಸಮಾನ ಮನಸ್ಕರು ಇರುವ ಸಂಘಟನೆ ನಮ್ಮದು. ಎರಡು ವರ್ಷಗಳಿಂದ ನಾವು ಶಿಕ್ಷಣ, ಕ್ರೀಡೆ, ಸೇವೆ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಕೊಡಗು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿಯೂ ನಾವು ಆಹಾರ, ಆರ್ಥಿಕ ನೆರವು ಹಾಗೂ ಸೇವೆ ನೀಡಿದ್ದೇವೆ.
-ರಜನೀಕಾಂತ್‌,ಗೌರವಾಧ್ಯಕ್ಷ,ಅಮರ ಸಂಘಟನ ಸಮಿತಿ

ವಾಹನ ಮಾಡಿ ತಂದಿದ್ದಾರೆ
ಮಕ್ಕಳು ಖುಷಿಯಿಂದಲೇ ಪಾಲ್ಗೊಂಡಿದ್ದಾರೆ. ಬಹಳ ಆಸಕ್ತಿಯಿಂದ ಪ್ಲಾಸ್ಟಿಕ್‌ ಹೆಕ್ಕಿ ಸಂಗ್ರಹಿಸಿದ್ದಾರೆ. ಕೆಲವು ಮಕ್ಕಳಂತೂ ತಾವು ಸಂಗ್ರಹಿಸಿದ ಪ್ಲಾಸ್ಟಿಕ್‌ನ್ನು ವಾಹನ ಮಾಡಿಕೊಂಡು ಶಾಲೆಗೆ ತಂದಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಸ್ವತ್ಛತೆಯ ಕುರಿತು ಮತ್ತು ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿಯ ಮಹತ್ವದ ಅರಿವು ಮೂಡಿಸುವ ಕೆಲಸ ಆಗಿದೆ.
– ಪ್ರಶಾಂತ್‌ ಆರ್‌.ಕೆ.
ಅಧ್ಯಕ್ಷ, ರಾಮಕುಂಜ ಗ್ರಾ.ಪಂ.

-ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next