ಸಾಸಿವೆ, ಉದ್ದಿನಬೇಳೆ ಒಗ್ಗರಣೆಯಲ್ಲಿ, ಈರುಳ್ಳಿ, ಮೆಣಸಿನಕಾಯಿ, ಕರಿಬೇವು ಹಾಕಿ, ಚೆನ್ನಾಗಿ ಬಾಡಿಸಿದೆ. ನಂತರ, ಅಳತೆಗೆ ತಕ್ಕಷ್ಟು ನೀರು, ಉಪ್ಪು ಹಾಕಿ, ಅದು ಕುದಿ ಬರುತ್ತಲೇ ಶ್ಯಾವಿಗೆಯನ್ನು ನೀರಿಗೆ ಹಾಕಿದೆ. ಅರೆ, ಇದೇನಾಯಿತು? ನೋಡನೋಡುತ್ತಿದ್ದಂತೆ ಶ್ಯಾವಿಗೆ ಕರಗಿ ಹಿಟ್ಟಾಗಬೇಕೆ ?
ಶ್ಯಾವಿಗೆ ಉಪ್ಪಿಟ್ಟು,ಅದರಲ್ಲೂ ಗೋಧಿ ಶ್ಯಾವಿಗೆ ಉಪ್ಪಿಟ್ಟು ತಯಾರಿಸುವುದು ನನಗೆ ಸುಲಭದ ಕೆಲಸ ಮತ್ತು ನಾಲಗೆಗೆ ಅದೇ ಹಿತ. ಅಂಗಡಿಯಿಂದ ಹುರಿದ ಶ್ಯಾವಿಗೆ ತರುವುದರಿಂದ, ದಿಢೀರನೆ ಅತಿಥಿಗಳು ಬಂದರೂ ರವೆ ಉಪ್ಪಿಟ್ಟಿಗಿಂತ, ಗೋಧಿ ಶ್ಯಾವಿಗೆ ಉಪ್ಪಿಟ್ಟನ್ನೇ ಮಾಡುತ್ತೇನೆ.
ಒಮ್ಮೆ ನಮ್ಮ ನೆರೆಮನೆಯವರು (ಆಕೆಯೂ ಪಾಕಪ್ರಿಯೆ )ಖಾರದ ಅಕ್ಕಿ ಶ್ಯಾವಿಗೆ ನೀಡಿದರು. “ಒಂದಕ್ಕೆ ಒಂದು ಫ್ರೀ ಆಫರ್‌ನಲ್ಲಿ ಎರಡು ಪ್ಯಾಕೆಟ್ ಬಂದಿತ್ತು. ನೀವೂ ಮಾಡಿ ನೋಡಿ. ಮಾಮೂಲಿ ಉಪ್ಪಿಟ್ಟು ಮಾಡ್ತೀರಲ್ಲ, ಹಾಗೇ ಮಾಡುವುದು’ ಎಂದು ಸೂಚನೆಯನ್ನೂ ಕೊಟ್ಟರು.
ಎರಡು ದಿನ ಕಳೆದ ನಂತರ ಹೊಸ ರುಚಿ ತಯಾರಿಸಲು ಸಿದ್ಧಳಾದೆ. ಸಾಸಿವೆ, ಉದ್ದಿನಬೇಳೆ ಒಗ್ಗರಣೆಯಲ್ಲಿ, ಈರುಳ್ಳಿ, ಮೆಣಸಿನಕಾಯಿ, ಕರಿಬೇವು ಹಾಕಿ, ಚೆನ್ನಾಗಿ ಬಾಡಿಸಿ ಅಳತೆಗೆ ತಕ್ಕಷ್ಟು ನೀರು, ಉಪ್ಪು ಹಾಕಿ, ಅದು ಕುದಿ ಬರುತ್ತಲೇ ಶ್ಯಾವಿಗೆಯನ್ನು ನೀರಿಗೆ ಹಾಕಿದೆ. ಅರೆ, ಇದೇನಾಯಿತು? ನೋಡನೋಡುತ್ತಿದ್ದಂತೆ ಶ್ಯಾವಿಗೆ ಕರಗಿ ಹಿಟ್ಟಾಗಿಬಿಟ್ಟಿತು! ಓಹ್ ದೇವರೇ, ನಾನು ನಿರೀಕ್ಷಿಸಿದ, ಅಪೇಕ್ಷಿಸಿದ ಎಳೆಎಳೆ ಶ್ಯಾವಿಗೆಯ ಬದಲು ಅಕ್ಕಿ ಮುದ್ದೆಯಂತಾಗಿತ್ತು ಅದು!
“ನಾ ನಿನ್ನ ಬಿಡಲಾರೆ’ ಎಂದು ಗಟ್ಟಿಯಾಗಿ ಅಂಟಿ ಕುಳಿತಿದ್ದ ಹಿಟ್ಟನ್ನು ಬಾಣಲಿಯಿಂದ ಬೇರ್ಪಡಿಸಿ ತೊಳೆಯುವ ಹೊತ್ತಿಗೆ ಬೆವತು ಬೆಂಡಾಗಿದ್ದೆ. ಅದ್ಯಾಕೆ ಹಾಗಾಯಿತೋ ಗೊತ್ತಿಲ್ಲ. ಆದರೆ, ಪ್ರಥಮ ಚುಂಬನಕ್ಕೇ ದಂತ ಭಗ್ನ ಎನ್ನುವಂತೆ ಮುಂದೆಂದೂ ಅಕ್ಕಿ ಶ್ಯಾವಿಗೆ ಮಾಡುವ ಸಾಹಸಕ್ಕೇ ಇಳಿಯಲಿಲ್ಲ ನಾನು.
ನಿಮ್ಮ ಬರಹಗಳನ್ನು ಕಳಿಸಲು: uv.avalu@ gmail.com
-ಕೆ.ವಿ.ರಾಜಲಕ್ಷ್ಮಿ