Advertisement

ಭತ್ತದ ಭೂಮಿಯಲ್ಲಿ ಸಮೃದ್ಧ ರಾಗಿ ಫ‌ಸಲು

01:01 PM Sep 22, 2017 | |

ಧಾರವಾಡ: ಸತತ ಬರಗಾಲದಿಂದ ಅರೆ ಮಲೆನಾಡು ಭಾಗದ ರೈತರು ಕಂಗೆಟ್ಟು ಮಳೆ ಇಲ್ಲದೇ ಭತ್ತ ಬೆಳೆಯುವುದು  ಹೇಗೆ ಎನ್ನುತ್ತಿರುವಾಗ ಇಲ್ಲೊಬ್ಬ ರೈತ ಭತ್ತ ಬಿತ್ತುವ ತನ್ನ ಹೊಲಕ್ಕೆಲ್ಲ ರಾಗಿ ಬಿತ್ತಿ ಉತ್ತಮ ಫಸಲು ಪಡೆದುಕೊಂಡು ಇತರ ರೈತರು ಹುಬ್ಬೇರಿಸುವಂತೆ ಮಾಡಿದ್ದಾನೆ. ಹೌದು, ರಾಗಿ ಅಂದ್ರೆ ಹಾಸನ, ಚಿತ್ರದುರ್ಗ, ಚಾಮರಾಜ ನಗರದ ಬೆಳೆ ಎಂದು ಎಲ್ಲರಿಗೂ ಗೊತ್ತು.

Advertisement

ಆದರೆ ಭತ್ತ ಬೆಳೆಯುವ ಹೊಲದಲ್ಲಿ ರಾಗಿ ಬೆಳೆಯುವ ಅನಿವಾರ್ಯತೆ ಮತ್ತು ಸಾಧ್ಯತೆಯ ಬಗ್ಗೆ ಇರುವ ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಟ್ಟಿದ್ದಾನೆ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಗುಂಡೇನಟ್ಟಿಯ ರೈತ ಶಂಕರ ಲಂಗಟಿ. ಅತೀ ಹೆಚ್ಚು ಮಳೆ ಸುರಿಯುವ ಪಶ್ಚಿಮ  ಘಟಕ್ಕೆ ಹೊಂದಿಕೊಂಡ ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ದೇಶಿ ಭತ್ತ ಪ್ರಮುಖ ಬೆಳೆ.

ಆದರೆ ಕಳೆದ ಒಂದು ದಶಕದಿಂದ ಆಗುತ್ತಿರುವ ಅತೀವೃಷ್ಟಿ ಅನಾವೃಷ್ಟಿಯ ಮಧ್ಯೆ ಈ ಭಾಗದಲ್ಲಿ ಮಳೆಯಾಧಾರಿತ ಭತ್ತ ಬೆಳೆಯುವುದು ಕಷ್ಟವಾಗುತ್ತಿದೆ. ಇದರಿಂದ ಬೇಸತ್ತ ಶಂಕರ ಲಂಗಟಿ, ದೇಶಿ ಕೃಷಿ ಜ್ಞಾನ ಆಧಾರಿತ ಪ್ರಯತ್ನಗಳ ಮೂಲಕ ಹೊಸ ಪ್ರಯೋಗ ಮಾಡುತ್ತಲೇ ಇದ್ದಾನೆ.

ಈ ಹಿಂದಿನ ವರ್ಷಗಳಲ್ಲಿ ಭತ್ತದ ಗದ್ದೆಗಳ ದಿಂಬಿಗೆ (ಮ್ಯಾವಳ್ಳಿ)ಬೆಳೆಯುತ್ತಿದ್ದ ರಾಗಿಯನ್ನು ಇಡೀ ಹೊಲದ ತುಂಬಾ ಬೆಳೆದು ಉತ್ತಮ ಫಸಲು ತೆಗೆದು ಸೈ ಎನಿಸಿಕೊಂಡಿದ್ದಾನೆ. ಚಾಮರಾಜ ನಗರ ಜಿಲ್ಲೆಯ ಗುಳಿ ಪದ್ಧತಿ ರಾಗಿ ಬೇಸಾಯವನ್ನು ಮಾಲೂರು ವೆಂಕಟೇಶಪ್ಪ ಎನ್ನುವ ರೈತ ದೇಶಿ ತಂತ್ರಗಳನ್ನು ಬಳಸಿಕೊಂಡು ಬೆಳೆದು ಸೈ ಎನಿಸಿಕೊಂಡಿದ್ದರು.

ಇದೇ ಪದ್ಧತಿಯನ್ನು ಅರೆ ಮಲೆನಾಡು ಪ್ರದೇಶವಾದ ಬ್ಯಾಡಗಿಯಲ್ಲಿ ನಾಟಿ ಪದ್ಧತಿ ಮೂಲಕ ಬೆಳೆಯಲಾಗುತ್ತಿತ್ತು. ಇದೀಗ ಉತ್ತರ ಕರ್ನಾಟಕ ಭಾಗದ ಅಪ್ಪಟ ಮಲೆನಾಡು ಖಾನಾಪುರ ತಾಲೂಕಿನಲ್ಲಿ ರೈತ ಶಂಕರಪ್ಪ, ರಾಗಿ ಬೆಳೆಯಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿ ಕೊಟ್ಟಿದ್ದಾನೆ.

Advertisement

ಕೆಲಸ ಮಾಡಿದ ದೇಶಿ ತಂತ್ರ: ಸಾಮಾನ್ಯವಾಗಿ ಭತ್ತ ಬಿತ್ತಿದಂತೆಯೇ ಕೂರಿಗೆಯಲ್ಲಿ ರಾಗಿಯನ್ನೂ ಬಿತ್ತುವ ಪದ್ಧತಿ ಇದೆ. ಇದನ್ನು ಬಿಟ್ಟು ಶಂಕರ ಅವರು ಗುಳಿ ಪದ್ಧತಿಯಡಿ ಎರಡು ಅಡಿ ಉದ್ದ ಹಾಗೂ ಅಗಲದ ಚೌಕಾಕಾರದ ಬನಿಗಳನ್ನಬಿಟ್ಟು, ರಾಗಿ ನಾಟಿ ಮಾಡಿದರು.

ಈ ಮೊದಲೇ 25 ದಿನಗಳ ಕಾಲ ಒಂದೆಡೆ  ನೆಟ್ಟು ಪೋಷಿಸಿದ್ದ ನಾಟಿ ರಾಗಿ (ಭತ್ತ, ಮೆಣಸಿನಕಾಯಿಯಂತೆ) ಸಸಿಗಳನ್ನೇ ಗುಳಿ ಪದ್ಧತಿಯಲ್ಲಿ ನೆಟ್ಟರು. ಒಂದು ತಿಂಗಳ ನಂತರ ಭತ್ತದ ಮಾದರಿಯಲ್ಲೇ ಇಡೀ ರಾಗಿ ಬೆಳೆಯ ಮೇಲೆ ಕೊಡ್ಡ (ಮರದ ದಿಮ್ಮೆ) ಹೊಡೆದರು.  ಇದರಿಂದ ಮುರಿತಕ್ಕೆ ಒಳಗಾದ ರಾಗಿ ಗಟ್ಟಿಯಾಗಿ ಬೇರೂರಿ ಮಧ್ಯಭಾಗದಲ್ಲಿ ಒಂದಕ್ಕೆ ಹತ್ತಾಗಿ ಟಿಸಳೊಡೆಯ ತೊಡಗಿತು. 

ಮುಂದಿನ ಒಂದು ತಿಂಗಳಿನಲ್ಲಿ ಪ್ರತಿ ಸಸಿಯೂ 15-20 ಟಿಸಳುಗಳಾಗಿ ರಾಗಿ ಬೆಳೆ ಗಡ್ಡೆಯಾಕಾರದಲ್ಲಿ ಬೆಳೆದು ನಿಂತಿತು. ಈ ಬೆಳೆ ಬೆಳೆಯುವವರೆಗೂ ದೇಶಿ ಪದ್ಧತಿಯ ಭೂಮಿ ನಿರ್ವಹಣೆ, ಸಾವಯವ ಪದ್ಧತಿಯಲ್ಲಿ ಜೀವಾಮೃತ ಕೊಟ್ಟಿಗೆ ಗೊಬ್ಬರವನ್ನೇ ಬಳಕೆ ಮಾಡಿದರು. ಅಂತಿಮವಾಗಿ ಇದೀಗ ಎರಡು ಎಕರೆಯಲ್ಲಿ 35 ಕ್ವಿಂಟಲ್‌ನಷ್ಟು ರಾಗಿ ಬೆಳೆದು ನಿಂತಿದೆ.  

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next