ಕನ್ನಡ ಚಿತ್ರರಂಗಕ್ಕೆ ಈ ವರ್ಷ “ರಿಯಾ’ ಚಿತ್ರದ ಮೂಲಕ ವಿಜಯಾ ನರೇಶ್ ಎನ್ನುವ ನಿರ್ದೇಶಕಿ ಪರಿಚಯವಾಗುತ್ತಿದ್ದಾರೆ. ಆಂಧ್ರ ಪ್ರದೇಶ ಮೂಲದ ವಿಜಯಾ ನರೇಶ್, ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದವರು. ಉತ್ತಮ ಕಥೆ ಸಿಕ್ಕರೆ ಚಿತ್ರವೊಂದನ್ನು ನಿರ್ದೇಶಿಸುವ ಆಸೆ ಹೊತ್ತಿದ್ದ ವಿಜಯಾ ನರೇಶ್, ಈಗ “ರಿಯಾ’ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.
ಇನ್ನು ವಿಜಯಾ ನರೇಶ್ ತೆಲುಗು ಮಾತೃ ಭಾಷೆಯಾಗಿದ್ದರೂ, ಕನ್ನಡದ ಮೇಲಿನ ಪ್ರೀತಿಯಿಂದ ತಮ್ಮ ಚೊಚ್ಚಲ ಚಿತ್ರವನ್ನು ಕನ್ನಡದಲ್ಲೇ ನಿರ್ದೇಶಿಸುತ್ತಿದ್ದಾರೆ. ವಿಜಯಾ ಅವರ ಪತಿ ಕನಿಗೊಂಡ ನರೇಶ್ “ರಿಯಾ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
“ರಿಯಾ’ ಚಿತ್ರದ ಪ್ರಮುಖ ಕಲಾವಿದರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರ್ತಿಕ್ ವರ್ಣೇಕರ್, ಸಾವಿತ್ರಿ, ಅನನ್ಯಾ, ವಿಕಾಸ್, ವಿಲಾಸ್ ಕುಲಕರ್ಣಿ, ಆರ್ಗವಿ ರಾಯ್, ಸುಧೀರ್, ರಣ್ವೀರ್, ಶ್ವೇತಾ, ರೋಹಿಣಿ, ರಾಜ್ ಉದಯ್, ನಾಗಭೂಷಣ್, ನಾಗರತ್ನ ಮುಂತಾದವರು “ರಿಯಾ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕೆ. ಮಂಜು ಅಂದ್ರೆ ಯಾರೂ ಅಂತಾನೆ ನನಗೆ ಗೊತ್ತಿಲ್ಲ : ಸುಧಾಕರ್
“ರಿಯಾ’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕಿ ವಿಜಯಾ ನರೇಶ್. “ಇದೊಂದು ಹಾರರ್, ಸಸ್ಪೆನ್ಸ್-ಥ್ರಿಲ್ಲರ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳ ಕಥೆಯುಳ್ಳ ಸಿನಿಮಾ. ಕನ್ನಡದ ಪ್ರೇಕ್ಷಕರಿಗೆ ಇದೊಂದು ಹೊಸಥರದ ಅನುಭವ ಕೊಡುವ ಸಿನಿಮಾ’ ಎಂದರು.
ಚಿತ್ರದ ಎರಡು ಹಾಡುಗಳಿಗೆ ಹೇಮಂತ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಎ.ಟಿ.ರವೀಶ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸುರೇಶ್ ಅಚ್ಚು ಛಾಯಾಗ್ರಹಣವಿದೆ. ಇತ್ತೀಚೆಗೆ ಚಿತ್ರತಂಡ “ರಿಯಾ’ ಚಿತ್ರದ ಹಾಡುಗಳನ್ನು ಹೊರತಂದಿದ್ದು, ಹಿರಿಯ ನಟ ಬ್ಯಾಂಕ್ ಜನಾರ್ದನ್, ನಟ ಕಂ ನಿರ್ಮಾಪಕ ಕೃಷ್ಣೇಗೌಡ ಮೊದಲಾದ ಗಣ್ಯರು ಹಾಡುಗಳನ್ನು ಬಿಡುಗಡೆಗೊಳಿಸಿದರು.