Advertisement
ರುಮಟಾಲಜಿಯು ಸಂಧಿಗಳು, ಚರ್ಮ, ಸ್ನಾಯುಗಳು ಮತ್ತು ಎಲುಬುಗಳು ಹಾಗೂ ದೇಹದಲ್ಲಿ ಇರುವ ವಂಶವಾಹಿ ಅಸಹಜತೆಯಿಂದಾಗಿ ದೇಹದ ರೋಗ ನಿರೋಧಕ ವ್ಯವಸ್ಥೆಯು ಪ್ರಮಾದವಶಾತ್ ತನ್ನದೇ ಆರೋಗ್ಯವಂತ ಅಂಗಾಂಶಗಳ ಮೇಲೆ ದಾಳಿ ಎಸಗುವ ಆಟೊಇಮ್ಯೂನ್ ಕಾಯಿಲೆಗಳ ಕುರಿತು ಗಮನ ಹರಿಸುತ್ತದೆ. ರೋಗಿಗಳ ಪಾಲಿಗೆ ಈ ಕಾಯಿಲೆಗಳು ಹಲವು ರೀತಿಯಲ್ಲಿ ಸವಾಲಾಗಿದ್ದು, ದೈನಿಕ ಜೀವನಕ್ಕೆ ಕುಂದು ತರುತ್ತವೆ.
Related Articles
Advertisement
ರುಮಾಟಿಕ್ ಕಾಯಿಲೆಗಳ ನಿಖರ ರೋಗಪತ್ತೆಗೆ ವೈದ್ಯಕೀಯ ಜ್ಞಾನದ ಜತೆಗೆ ವೈದ್ಯಕೀಯ ಪರೀಕ್ಷೆಗಳ ಸಮರ್ಪಕ ಉಪಯೋಗವೂ ಅಗತ್ಯವಾಗಿರುತ್ತದೆ. ರೋಗಿಯ ಆರೋಗ್ಯ ಇತಿಹಾಸ, ದೈಹಿಕ ಪರೀಕ್ಷೆಗಳ ಫಲಿತಾಂಶ, ಇಮೇಜಿಂಗ್ ಅಧ್ಯಯನಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶಗಳನ್ನು ಸಂಯೋಜಿತವಾಗಿ ಉಪಯೋಗಿಸಿಕೊಂಡು ನಾವು ನಿಖರ ರೋಗಪತ್ತೆಯನ್ನು ನಡೆಸುತ್ತೇವೆ. ಆದರೆ ಈ ರೋಗಪತ್ತೆಯು ಯಾವತ್ತು ಕೂಡ ಸುಲಭವಲ್ಲ ಎನ್ನುವುದನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು; ಹೀಗಾಗಿ ಕೆಲವು ರೋಗಿಗಳಲ್ಲಿ ನಿರ್ಣಾಯಕವಾಗಿ ರೋಗಪತ್ತೆಯನ್ನು ನಡೆಸುವುದು ಸ್ವಲ್ಪ ವಿಳಂಬವಾಗಲೂಬಹುದು.
ರೋಗಿಗಳ ಪಾಲಿಗೆ ರೋಗಪತ್ತೆಯ ಅವಧಿ ಹತಾಶೆ ಮತ್ತು ಗೊಂದಲದಿಂದ ಕೂಡಿದ್ದಾಗಿರಬಹುದು. ಲಕ್ಷಣಗಳು ಅಸ್ಪಷ್ಟವಾಗಿರಬಹುದು ಅಥವಾ ಒಂದಕ್ಕೊಂದು ಗೊಂದಲಮಯವಾಗಿ ಸಮರ್ಪಕವಾದ ಚಿಕಿತ್ಸೆ, ಆರೈಕೆಯನ್ನು ಪಡೆಯುವುದು ವಿಳಂಬವಾಗಬಹುದು.
ಒಮ್ಮೆ ನಿಖರವಾಗಿ ರೋಗಪತ್ತೆಯಾದ ಬಳಿಕ ರೋಗಿಗಳು ವೈವಿಧ್ಯಮಯವಾದ ಚಿಕಿತ್ಸೆಗಳನ್ನು ಆಯ್ದುಕೊಳ್ಳಬಹುದಾಗಿದೆ. ಇವುಗಳಲ್ಲಿ ಔಷಧಗಳು, ದೈಹಿಕ ಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆಗಳು ಒಳಗೊಂಡಿರುತ್ತವೆ. ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ, ಇದೇವೇಳೆ ಅಡ್ಡ ಪರಿಣಾಮಗಳು ಕನಿಷ್ಠವಾಗಿರುವ ಚಿಕಿತ್ಸೆಗಳ ಸರಿಯಾದ ಸಂಯೋಜನೆಯನ್ನು ಕಂಡುಕೊಳ್ಳುವುದು ಕಠಿನವಾಗಿರುತ್ತದೆ. ಇದಕ್ಕೆ ರುಮಟಾಲಜಿಸ್ಟ್‌ಗಳು ಮತ್ತು ಇತರ ಆರೋಗ್ಯ ಸೇವಾ ವೃತ್ತಿಪರರ ನಿಕಟ ಸಂಯೋಜಿತ ಕಾರ್ಯನಿರ್ವಹಣೆ ಅಗತ್ಯವಾಗಿರುತ್ತದೆ.
ರುಮಾಟಿಕ್ ಕಾಯಿಲೆಗಳು ರೋಗಿಗಳಿಗೆ ದೈಹಿಕವಾಗಿ ಸವಾಲುಗಳನ್ನು ಒಡ್ಡುವುದರ ಜತೆಗೆ ಗಮನಾರ್ಹವಾದ ಮಾನಸಿಕ ಬೇಗುದಿಯನ್ನು ಉಂಟು ಮಾಡುತ್ತವೆ. ದೇಹದ ಎಲ್ಲೆಡೆ ನೋವು, ತೀರಾ ದಣಿವು ಮತ್ತು ಸಂಧಿಗಳ ಚಲನ ಸಾಮರ್ಥ್ಯ ಕಡಿಮೆಯಾಗಿರುವುದು ರೋಗಿಯ ಜೀವನ ಗುಣಮಟ್ಟವನ್ನು ಕುಗ್ಗಿಸಬಹುದಲ್ಲದೆ ಪರಾವಲಂಬನೆಯ ಭಾವನೆಯನ್ನು ಉಂಟು ಮಾಡಬಹುದಾಗಿದೆ. ರುಮಾಟಿಕ್ ಕಾಯಿಲೆಗಳನ್ನು ಹೊಂದಿರುವವರಲ್ಲಿ ಚಿಂತೆ ಮತ್ತು ಖನ್ನತೆಗಳು ಸಾಮಾನ್ಯ ಸಮಸ್ಯೆಗಳಾಗಿದ್ದು, ಇದರಿಂದಾಗಿ ರೋಗದ ಜತೆಗೆ ಹೊಂದಾಣಿಕೆಯ ಜೀವನ ನಡೆಸುವುದು ಇನ್ನಷ್ಟು ಕಠಿನವಾಗುತ್ತದೆ.
ಇಷ್ಟೆಲ್ಲ ಸವಾಲುಗಳ ನಡುವೆಯೂ ಆಶಾಕಿರಣ ಇದ್ದೇ ಇದೆ. ನೆರವು ಗುಂಪುಗಳು ಮತ್ತು ಆನ್‌ಲೈನ್ ಸಮುದಾಯಗಳು ಅಮೂಲ್ಯ ಸಂಪನ್ಮೂಲ ಮತ್ತು ಬೆಂಬಲದ ಮೂಲಕ ಇಂತಹುದೇ ಬಿಕ್ಕಟ್ಟನ್ನು ಎದುರಿಸುತ್ತಿರುವ ರೋಗಿಗಳಿಗೆ ಬೆಂಗಾವಲಾಗುತ್ತವೆ. ವೈದ್ಯಕೀಯ ಸಂಶೋಧನೆ ಮತ್ತು ಚಿಕಿತ್ಸೆಯಲ್ಲಿ ನಡೆಯುತ್ತಿರುವ ಪ್ರಗತಿ ರುಮಾಟಿಕ್ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇನ್ನಷ್ಟು ಉತ್ತಮ ಫಲಿತಾಂಶ ಮತ್ತು ಉನ್ನತ ಗುಣಮಟ್ಟದ ಜೀವನವನ್ನು ಖಾತರಿಪಡಿಸುವ ಭರವಸೆ ನೀಡುತ್ತಿವೆ.
ಅಂತಿಮವಾಗಿ ಹೇಳುವುದಾದರೆ, ರುಮಟಾಲಜಿ ಎಂಬುದು ಕೇವಲ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ; ರೋಗಿಗಳು ಎದುರಿಸುತ್ತಿರುವ ಅಪೂರ್ವ ಸವಾಲುಗಳು ಮತ್ತು ಅನುಭವಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಕಾಯಿಲೆಗೆ ತುತ್ತಾಗಿದ್ದರೂ ಎಷ್ಟು ಸಾಧ್ಯವೋ ಅಷ್ಟು ಸಂತೃಪ್ತ ಜೀವನವನ್ನು ನಡೆಸುವುದಕ್ಕಾಗಿ ರೋಗಿಗಳನ್ನು ಸಶಕ್ತಗೊಳಿಸುವುದು. ತಿಳಿವಳಿಕೆಯನ್ನು ಹೆಚ್ಚಿಸುವುದು ಹಾಗೂ ಇನ್ನಷ್ಟು ಉತ್ತಮ ಚಿಕಿತ್ಸೆ ಮತ್ತು ಆರೈಕೆಗಳ ಮೂಲಕ ರುಮಾಟಿಕ್ ಕಾಯಿಲೆಗಳಿಗೆ ತುತ್ತಾಗಿರುವವರ ಜೀವನದಲ್ಲಿ ನಾವು ಅರ್ಥವತ್ತಾದ
ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿರುವ ಅತ್ಯಂತ ಮುಖ್ಯ ವಿಷಯ ಎಂದರೆ, ಔಷಧ ಮತ್ತು ಚಿಕಿತ್ಸೆಗಳ ಮೂಲಕ ಈ ರುಮಟಲಾಜಿಕಲ್ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದಾದರೂ ಇವುಗಳನ್ನು ಪೂರ್ಣವಾಗಿ ಗುಣಪಡಿಸಲು ಆಗುವುದಿಲ್ಲ. ಹೀಗಾಗಿ ಆರ್ಥ್ರೈಟಿಸ್‌ನ್ನು ಗುಣಪಡಿಸುತ್ತೇವೆ ಎಂದು ಆಮಿಷವೊಡ್ಡುವ ಮದ್ದುಗಳ ಬಗ್ಗೆ ಎಚ್ಚರವಿರಲಿ. ಇಂತಹವುಗಳ ಆಮಿಷಕ್ಕೆ ಬಲಿಯಾದರೆ ವಿಷಕಾರಿ, ಅಪಾಯಕಾರಿ ಅಡ್ಡಪರಿಣಾಮಗಳು ಉಂಟಾಗಬಹುದು ಎಂಬ ಬಗ್ಗೆ ಎಚ್ಚರಿಕೆ ಇರಲಿ.
-ಡಾ| ಪ್ರತ್ಯೂಷಾ ಮಣಿಕುಪ್ಪಮ್
ಕನ್ಸಲ್ಟಂಟ್ ರುಮಟಾಲಜಿ
ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರುಮಟಾಲಜಿ ವಿಭಾಗ, ಕೆಎಂಸಿ, ಮಂಗಳೂರು)