Advertisement

ಮಹಿಳೆಯರಲ್ಲಿ ರುಮಟಾಯ್ಡ ಆರ್ಥೈಟಿಸ್‌ ತಡೆಯಲು ಜೀವನವಿಧಾನ ಬೆಳವಣಿಗೆಗಳು

08:11 PM Nov 06, 2021 | Team Udayavani |

ರುಮಟಾಯ್ಡ ಆರ್ಥೈಟಿಸ್‌ (ಆರ್‌ಎ) ಎಂಬುದು ವಿಶೇಷವಾಗಿ ಸಂಧಿಗಳಲ್ಲಿ ಆದರೆ ದೇಹದ ಇತರ ಭಾಗಗಳಲ್ಲಿಯೂ ಉಂಟಾಗಬಹುದಾದ ದೀರ್ಘ‌ಕಾಲಿಕ ಆಟೊಇಮ್ಯೂನ್‌ ಉರಿಯೂತ ಕಾಯಿಲೆಯಾಗಿದೆ. ಇದರಿಂದ ಬಾಧಿತರಾದ ರೋಗಿಗಳು ಬೆರಳು ಸಂಧಿ, ಮಣಿಕಟ್ಟು, ಭುಜಗಳು, ಮೊಣಕಾಲು, ಮತ್ತು ಪಾದಗಳಲ್ಲಿ ಊತ ಮತ್ತು ತೀವ್ರ ಸಂಧಿನೋವಿಗೆ ತುತ್ತಾಗುತ್ತಾರೆ. ರಾತ್ರಿ ಮತ್ತು ಬೆಳಗಿನ ಜಾವಗಳಲ್ಲಿ ನೋವಿನ ತೀವ್ರತೆ ಹೆಚ್ಚಿದ್ದು, ಸಂಧಿಗಳು ಪೆಡಸಾಗಿರುತ್ತವೆ. ಸರಿಯಾದ ಸಮಯದಲ್ಲಿ ಇದನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡದೆ ಇದ್ದರೆ ಇದರಿಂದ ಅಂಗವೈಕಲ್ಯ, ಚಲನವಲನಗಳಿಗೆ ತೊಂದರೆ ಉಂಟಾಗುತ್ತದೆ ಮತ್ತು ಬಹುತೇಕ ರೋಗಿಗಳಲ್ಲಿ ಸಂಧಿಗಳಿಗೆ ಹಾನಿಯಾಗುತ್ತದೆಯಲ್ಲದೆ ವೈಕಲ್ಯವುಂಟಾಗುತ್ತದೆ. ದಿನನಿತ್ಯದ ಸಾಮಾನ್ಯ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಕೂಡ ಅವರಿಗೆ ಸಾಧ್ಯವಾಗುವುದಿಲ್ಲ.

Advertisement

ಈ ಕಾಯಿಲೆ ಹೃದಯ-ರಕ್ತನಾಳ ವ್ಯವಸ್ಥೆಯನ್ನು ಕೂಡ ಬಾಧಿಸಬಹುದಾಗಿದ್ದು, ಹೃದಯಾಘಾತ ಮತ್ತು ಲಕ್ವಾ ಉಂಟಾಗುವ ಅಪಾಯ ಹೆಚ್ಚುತ್ತದೆ. ನಿಜ ಹೇಳಬೇಕೆಂದರೆ, ಇಂತಹ ರೋಗಿಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಸಾವಿಗೆ ಪ್ರಮುಖ ಕಾರಣಗಳಾಗಿರುತ್ತವೆ. ಆರ್‌ಎ ಒಂದು ಆಟೊಇಮ್ಯೂನ್‌ ಕಾಯಿಲೆ – ಅಂದರೆ ದೇಹದಲ್ಲಿರುವ ರೋಗ ನಿರೋಧಕ ವ್ಯವಸ್ಥೆಯು ತನ್ನದೇ ದೇಹದ ಅಂಗಾಂಶಗಳ ವಿರುದ್ಧ ಕೆಲಸ ಮಾಡುವುದರಿಂದ ಉಂಟಾಗುವ ಕಾಯಿಲೆ. ಆರ್‌ಎ ಮಹಿಳೆಯರಲ್ಲಿಯೇ ಕಾಣಿಸಿಕೊಳ್ಳುವುದು ಹೆಚ್ಚು (ಪ್ರತೀ 10 ಮಂದಿ ಆರ್‌ಎ ರೋಗಿಗಳಲ್ಲಿ 8 ಮಂದಿ ಮಹಿಳೆಯರಾಗಿರುತ್ತಾರೆ).

ಈ ಪ್ರಕ್ರಿಯೆಗೆ ಖಚಿತವಾದ ಕಾರಣ ತಿಳಿದುಬಂದಿಲ್ಲ. ಆದರೆ ಈ ಕಾಯಿಲೆ ಹೇಗೆ ಉದ್ಭವಿಸುತ್ತದೆ ಎಂಬ ಬಗ್ಗೆ ನಡೆಯುತ್ತಿರುವ ಇತ್ತೀಚೆಗಿನ ಅಧ್ಯಯನಗಳು ವಂಶವಾಹಿಯಾಗಿ ಹರಿದುಬಂದಿರುವ ಪ್ರತಿಸ್ಪಂದಕ ಅಂಶಗಳು (ಸ್ವತಃ ಕಾಯಿಲೆ ಉಂಟಾಗಲು ಕಾರಣವಾಗುವಷ್ಟು ಶಕ್ತಿಶಾಲಿಯಲ್ಲದವು) ಪಾರಿಸರಿಕ ಅಂಶಗಳ ಜತೆಗೆ ಸೇರಿ (ಸಂಭಾವ್ಯ ಸೋಂಕುಗಳು, ಆಹಾರಶೈಲಿ, ಹಾರ್ಮೋನ್‌ ಬದಲಾವಣೆಗಳು ಮತ್ತು ಜೀವನಶೈಲಿಗೆ ಸಂಬಂಧಿಸಿದ ಅಂಶಗಳು) ಕಾಯಿಲೆ ಉಂಟಾಗಿ ಪ್ರಗತಿ ಹೊಂದಲು ಕಾರಣವಾಗುತ್ತವೆ. ಆರ್‌ಎ ಉಂಟಾಗಲು ಯಾವುದೇ ಒಂದು ನಿರ್ದಿಷ್ಟ ಅಂಶ ಅಥವಾ ಸಿದ್ಧಾಂತ ನಿಖರ ಕಾರಣ ಎಂಬುದಾಗಿ ಹೇಳಲಾಗುವುದಿಲ್ಲ. ಆದರೆ ಕಳೆದ ಇಷ್ಟು ವರ್ಷಗಳಲ್ಲಿ ನಡೆದ ಅಧ್ಯಯನಗಳಿಂದ ಕಂಡುಕೊಂಡಿರುವ ವೈಜ್ಞಾನಿಕ ದತ್ತಾಂಶಗಳು ಇದಕ್ಕೆ ಪೂರಕವಾಗಿವೆ.

ಆರ್‌ಎ ಬೆಳವಣಿಗೆಯಾಗಲು ನಿಖರ ಕಾರಣಗಳ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇರುವುದರಿಂದ ಇದು ಉಂಟಾಗದೆ ಹಾಗೆ ಕೈಗೊಳ್ಳುವ ಮುನ್ನೆಚ್ಚರಿಕೆಯ ಕ್ರಮಗಳು ಕೇವಲ ಊಹಾತ್ಮಕವಾಗಿವೆ ಮತ್ತು ಪ್ರಯೋಜನಕ್ಕೆ ಬರುವುದು ಸಾಬೀತಾಗಿಲ್ಲ. ಆದರೆ ಜೀವನಶೈಲಿಗೆ ಸಂಬಂಧಿಸಿದ ಕೆಲವು ಅಂಶಗಳು ಆರ್‌ಎ ಉಂಟಾಗುವ ಸಾಧ್ಯತೆಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಆದ್ದರಿಂದ ಅವುಗಳನ್ನು ಉತ್ತಮಪಡಿಸುವುದಕ್ಕೆ ಪ್ರಜ್ಞಾಪೂರ್ವಕವಾಗಿ ಪ್ರಯತ್ನ ನಡೆಸಿದರೆ ಮತ್ತು ಇಂತಹ ಕಾಯಿಲೆಗಳು ಉಂಟಾಗದಂತೆ ಪ್ರಯತ್ನಿಸುವುದು ಉತ್ತಮ. ಜತೆಗೆ ದುರದೃಷ್ಟವಶಾತ್‌ ಈಗಾಗಲೇ ಈ ಕಾಯಿಲೆ ಉಂಟಾಗಿದ್ದರೆ ಕಾಯಿಲೆಯ ಮೇಲೆ ಉತ್ತಮ ನಿಯಂತ್ರಣವನ್ನು ತಂದುಕೊಳ್ಳಬಹುದಾಗಿದೆ.

ವ್ಯಾಯಾಮ
ನಿಯಮಿತವಾಗಿ ವ್ಯಾಯಾಮ ಮಾಡುವುದು ಸ್ನಾಯು ಮತ್ತು ಎಲುಬುಗಳ ಆರೋಗ್ಯವನ್ನು ಉತ್ತಮಪಡಿಸುವುದು ಸಾಬೀತಾಗಿದೆ. ಹೀಗಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು ಅನೇಕ ಅನಾರೋಗ್ಯಗಳು ಉಂಟಾಗದಂತೆ ತಡೆಯುತ್ತದೆ. ಆರ್‌ಎ ಕೂಡ ಇದಕ್ಕೆ ಹೊರತಾಗಿಲ್ಲ. ದಿನಕ್ಕೆ ಕನಿಷ್ಠ 30 ನಿಮಿಷಗಳಂತೆ ವಾರಕ್ಕೆ ಐದು ದಿನಗಳ ಕಾಲ ಏರೋಬಿಕ್‌ ವ್ಯಾಯಾಮಗಳನ್ನು ನಡೆಸುವುದು ಉತ್ತಮ. ಸಂಧಿಗಳಲ್ಲಿ ಮತ್ತು ಸುತ್ತಲಿನ ಸ್ನಾಯುಗಳಲ್ಲಿ ನಮನೀಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ರೇಂಜ್‌-ಇನ್‌-ಮೋಶನ್‌ ವ್ಯಾಯಾಮಗಳು, ಸ್ನಾಯುಗಳನ್ನು ಬೆಳೆಸುವ ಮತ್ತು ಸಂಧಿಗಳಲ್ಲಿ ಸ್ಥಿರತೆ ತರುವ ದೇಹದಾಡ್ಯì ತರಬೇತಿ ಈಗಾಗಲೇ ಆರ್‌ಎ ಇರುವವರಿಗೆ ನೆರವಾಗಬಲ್ಲುದು. ನಡಿಗೆ, ಸೈಕಲ್‌ ಸವಾರಿ, ಈಜು ಮತ್ತು ಯೋಗಾಭ್ಯಾಸ ದೇಹದ ಶಕ್ತಿ ಸಾಮರ್ಥ್ಯಗಳನ್ನು ವೃದ್ಧಿಸುವುದರಿಂದ ಇವುಗಳನ್ನು ಕೂಡ ಶಿಫಾರಸು ಮಾಡಲಾಗಿದೆ.

Advertisement

ಮದ್ಯಪಾನ
ಎಲ್ಲ ಬಗೆಯ ಮದ್ಯ ಸೇವನೆಯನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಬೇಕು ಅಥವಾ ತ್ಯಜಿಸಬೇಕು. ನಿಯಮಿತವಾಗಿ ಮದ್ಯಸೇವನೆ ಮಾಡುವವರಲ್ಲಿ ಆರ್‌ಎಗೆ ನೀಡುವ ಔಷಧಗಳು ಪಿತ್ತಕೋಶಕ್ಕೆ ಹಾನಿ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ.

ಧೂಮಪಾನ ತ್ಯಜಿಸಿ
ಧೂಮಪಾನವು ಆರ್‌ಎ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿವೆ. ಹೀಗಾಗಿ ಆರ್‌ಎಗೆ ತುತ್ತಾಗುವ ಕೌಟುಂಬಿಕ ಇತಿಹಾಸ ಇದ್ದವರು ಧೂಮಪಾನವನ್ನು ತ್ಯಜಿಸಲೇಬೇಕು. ಆರ್‌ಎ ಉಂಟಾದ ಬಳಿಕವೂ ಧೂಮಪಾನವನ್ನು ಮುಂದುವರಿಸುವುದರಿಂದ ಕಾಯಿಲೆ ಉಲ್ಬಣಿಸುವ ಸಾಧ್ಯತೆಗಳು ಅಧಿಕವಾಗುತ್ತವೆ ಮತ್ತು ಗಮನಾರ್ಹ ಸಂಧಿ ಹಾನಿ ಉಂಟಾಗುವ ಅಪಾಯ ಹೆಚ್ಚುತ್ತದೆ.

ಆಹಾರಾಭ್ಯಾಸ
ಯಾವುದೇ ನಿರ್ದಿಷ್ಟ ಆಹಾರಾಭ್ಯಾಸ ಆರ್‌ಎ ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಆದರೆ ಆ್ಯಂಟಿ ಓಕ್ಸಿಡೆಂಟ್‌ಗಳು ಹೆಚ್ಚು ಪ್ರಮಾಣದಲ್ಲಿರುವ ಹಣ್ಣುಹಂಪಲುಗಳು, ತರಕಾರಿಗಳು ಹೆಚ್ಚಿರುವ ಸಮತೋಲಿತ ಆಹಾರಾಭ್ಯಾಸ ಒಳ್ಳೆಯದು. ಉರಿಯೂತವನ್ನು ಹೆಚ್ಚಿಸಬಲ್ಲ ಮಾಂಸ, ಸಂಸ್ಕರಿತ ಸಕ್ಕರೆಗಳು, ಫಾಸ್ಟ್‌ಫ‌ುಡ್‌ ಸಹಿತ ಸಂಸ್ಕರಿತ ಆಹಾರಗಳು, ಸ್ಯಾಚುರೇಟೆಡ್‌ ಕೊಬ್ಬುಗಳನ್ನು ವರ್ಜಿಸಬೇಕು.

ಒತ್ತಡ
ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಅನೇಕ ಕಾಯಿಲೆಗಳು ದೂರವಿರುತ್ತವೆ ಎಂದರೆ ಅತಿಶಯೋಕ್ತಿಯಲ್ಲ. ಸತತವಾದ ಮಾನಸಿಕ ಒತ್ತಡವು ನಮ್ಮ ದೇಹದಲ್ಲಿ ಅನೇಕ ಬಗೆಯ ಉರಿಯೂತಗಳು ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಒತ್ತಡಯುಕ್ತ ಸನ್ನಿವೇಶಗಳಿಂದ ದೂರವಿರುವುದು, ಕೆಲಸದ ನಡುವೆ ಆಗಾಗ ವಿರಾಮಗಳನ್ನು ತೆಗೆದುಕೊಳ್ಳುವುದು, ಮನಸ್ಸನ್ನು ಹಗುರಗೊಳಿಸುವ ಹವ್ಯಾಸ ರೂಢಿಸಿಕೊಳ್ಳುವುದು, ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಳ್ಳುವುದು ಹಾಗೂ ಗೆಳೆಯ ಗೆಳತಿಯರು, ಕುಟುಂಬ ಸದಸ್ಯರ ಜತೆಗೆ ಸಮಯ ಕಳೆಯು ವುದರಿಂದ ಒತ್ತಡ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ.

ದೇಹತೂಕ
ಅತಿಯಾದ ದೇಹತೂಕವು ಸಂಧಿಗಳ ಕಾರ್ಯಭಾರವನ್ನು ಹೆಚ್ಚಿಸುತ್ತದೆ (ವಿಶೇಷವಾಗಿ ಬೆನ್ನು ಮತ್ತು ಕಾಲಿನ ಕೆಳಭಾಗದ ಸಂಧಿಗಳು). ಇದರಿಂದಾಗಿ ಸಂಧಿಗಳಲ್ಲಿ ಬೇಗನೆ ನೋವು ಉಂಟಾಗುತ್ತದೆ ಮತ್ತು ಗಾಯ- ಹಾನಿ ಕಂಡುಬರುತ್ತದೆ. ಸರಿಯಾದ ಆಹಾರಾ ಭ್ಯಾಸ ಮತ್ತು ವ್ಯಾಯಾಮಗಳಿಂದ ದೇಹತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಅಗತ್ಯ.

ರುಮಟಾಲಜಿಸ್ಟ್‌ರನ್ನು ಕಂಡು ಸಮಾಲೋಚಿಸಿ
ಸಂಧಿನೋವು, ಸಂಧಿಗಳಲ್ಲಿ ಊತ ಕಂಡುಬಂದರೆ ರುಮಟಾಲಜಿಸ್ಟ್‌ ಅವರನ್ನು ಕಂಡು ಸಲಹೆ ಪಡೆಯಲು ಹಿಂಜರಿಕೆ ಬೇಡ. ಇಂತಹ ಅನಾ ರೋಗ್ಯಗಳಲ್ಲಿ ಆದಷ್ಟು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದು ನಿರ್ಣಾಯಕವಾಗಿರುತ್ತದೆ. ಸರಿಯಾದ ಚಿಕಿತ್ಸೆಯ ಜತೆಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಆರ್‌ಎ ರೋಗಿಗಳು ರೋಗಪೂರ್ವಕ್ಕೆ ನಿಕಟವಾದ ಜೀವನಮಟ್ಟವನ್ನು ಹೊಂದುವುದು ಸಾಧ್ಯವಾಗುತ್ತದೆ.

-ಡಾ| ಸಜ್ಜನ್‌ ಶೆಣೈ
ಕನ್ಸಲ್ಟಂಟ್‌ ರುಮಟಾಲಜಿಸ್ಟ್‌ ಮತ್ತು ಇಮ್ಯುನಾಲಜಿಸ್ಟ್‌
ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next