ಮುಂಬೈ: ಒಂದೇ ಒಂದು ಸೊನ್ನೆ ವ್ಯತ್ಯಾಸವಾದರೆ ಎಂತಹ ಪರಿಣಾಮವಾಗಬಹುದು ಎನ್ನುವುದಕ್ಕೆ ಈ ಘಟನೆಯನ್ನು
ಉದಾಹರಣೆಯಾಗಿ ನೀಡಬಹುದು. ವಿಚ್ಛೇದನದ ಅಂಚಿನಲ್ಲಿರುವ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಮತ್ತು ಪತ್ನಿ ರಿಯಾ ಪಿಳ್ಳೆ„ ನಡುವೆ ಇಂತಹ ವಿಚಿತ್ರ ಪ್ರಕರಣ ನಡೆದಿದೆ.
ಪೇಸ್‌ರಿಂದ ತಮಗೆ ಅನ್ಯಾಯವಾಗಿದೆ, ಆದ್ದರಿಂದ 1 ಕೋಟಿ ರೂ. ಪರಿಹಾರ ನೀಡಬೇಕೆಂದು ಅವರು ಅರ್ಜಿ ಸಲ್ಲಿಸಿದ್ದರಂತೆ. ಆದರೆ ವಕೀಲರು ಬರೆಯುವಾಗ ಒಂದು ಸೊನ್ನೆಯನ್ನು ಕೈಬಿಟ್ಟಿದ್ದರಿಂದ ಅದು 10 ಲಕ್ಷ ರೂ. ಆಗಿಬಿಟ್ಟಿದೆ, ದಯವಿಟ್ಟು ಅದನ್ನು ಒಂದು ಕೋಟಿ ರೂ. ಎಂದು ಪರಿಗಣಿಸಿ ಎಂದು ರಿಯಾ ವಕೀಲರು ಮನವಿ ಮಾಡಿದ್ದಾರೆ!
ಸದ್ಯ ಇಬ್ಬರ ವಿಚ್ಛೇದನ ಪ್ರಕರಣ ಮುಂಬೈನ ಬಾಂದ್ರಾದಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದೆ. 3 ವರ್ಷದಿಂದ ಪ್ರಕರಣ ಎಳೆದಾಡುತ್ತಲೇ ಇದೆ. ಇದೀಗ ಸರ್ವೋಚ್ಚ ನ್ಯಾಯಾಲಯ ಎಲ್ಲ ವಿಚ್ಛೇದನ ಪ್ರಕರಣಗಳನ್ನು 6 ತಿಂಗಳಲ್ಲಿ ಮುಗಿಸಿಬಿಡಬೇಕು ಎಂದು ತೀರ್ಪು ನೀಡಿರುವುದರಿಂದ ಪೇಸ್ ಪ್ರಕರಣವೂ ಇತ್ಯರ್ಥ ಮಾಡಲೇಬೇಕಾದ ಹಂತದಲ್ಲಿದೆ.
ರಿಯಾ ಪಿಳ್ಳೆ„ ಅರ್ಜಿಯಲ್ಲಿ ಭಾರೀ ಪ್ರಮಾಣದ ಪರಿಹಾರವನ್ನು ಕೋರಿದ್ದಾರೆ. ಪೇಸ್ ಮನೆಯ ಜವಾಬ್ದಾರಿಯನ್ನೇ ನೋಡಿಕೊಳ್ಳುತ್ತಿರಲಿಲ್ಲ. ತಂದೆಯಾಗಿ ಮನೆ ಮತ್ತು ಮಗಳ ಅವಶ್ಯಕತೆಗಳ ಬಗ್ಗೆ ಗಮನಹರಿಸುತ್ತಿರಲಿಲ್ಲ. ಅವೆಲ್ಲ ಖರ್ಚನ್ನು ನಾನೇ ನೋಡಿಕೊಳ್ಳಬೇಕಾಗಿ ಬಂತು. ಆದರೆ ತಾನು 2014ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಕೆಲವೇ ತಿಂಗಳ ಮುನ್ನ ಇದ್ದಕ್ಕಿದ್ದಂತೆ ಮಗಳ ಶಿಕ್ಷಣಕ್ಕೆ ಹಣ ನೀಡಲಾರಂಭಿಸಿದರು ಎಂದು ಆರೋಪಿಸಿದ್ದಾರೆ.