Advertisement

ರೀ ಮೇಡಂ, ನಾ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

06:00 AM May 22, 2018 | |

ನೀನು ನನ್ನ ಹೃದಯವನ್ನೇ ಕದ್ದಿರುವುದು ಅಪರಾಧವಲ್ಲ ಅಂದಮೇಲೆ, ನೋಟ್‌ಬುಕ್ಕಿನಿಂದ ನಿನ್ನ ಹಳೆಯ ಫೋಟೊ ಕದಿಯೋದು ಹೇಗೆ ತಪ್ಪಾಗುತ್ತೆ?

Advertisement

ಹೇ ಕುಳ್ಳಿ… ನಿನ್ನಪ್ಪಣೆ ಇಲ್ಲದೇ ನಿನಗೆ ನಾನಿಟ್ಟ ಹೆಸರಿದು. ಹೀಗೆ ಕರೆದಾಗಲೆಲ್ಲಾ, ಕೆನ್ನೆಗಳನ್ನು ಕೆಂಗುಲಾಬಿಯಂತೆ ಮಾಡಿಕೊಂಡು ಕೋಪದಿಂದ ಕಣ್ಣಲ್ಲೇ ಕೊಲ್ಲುವಂತೆ ದುರುಗುಟ್ಟುತ್ತೀಯ. ಆದರೂ ಪರವಾಗಿಲ್ಲ ಬಿಡು. ಯಾಕಂದ್ರೆ, ಹಾಗೆ ಕರೆದಾಗಲೆಲ್ಲ  ನನ್ನ ಮುಂದೆ ತೋರಿಸುವ ಕೋಪಕ್ಕಿಂತ, ತಿರುಗಿ ಹೋಗುವಾಗ ನೀನು ಬೀರುವ ಮುಗುಳುನಗೆಯೇ ನನಗಿಷ್ಟ. “ನನ್ನನ್ನು ಹೀಗೆ ಕರೆಯಲು ನೀ ಯಾವೂರ ದೊಣ್ಣೆ ನಾಯಕನೋ?’ ಎಂದು ಮುನಿಸಿಂದ ಕೇಳ್ತೀಯಲ್ಲ ಆಗೆಲ್ಲ, “ನಿನ್ನ ಪ್ರೀತಿಗಾಗಿ ಹಂಬಲಿಸಿ, ನೆರಳಿನಂತೆ ನಿನ್ನನ್ನೇ ಹಿಂಬಾಲಿಸುವ ಪ್ರೇಮಿ’ ಅನ್ನಬೇಕು ಅನಿಸುತ್ತದೆ. ನಾನಂತೂ ನಿನ್ನ ನೋಟಕ್ಕೆ ಮರುಳಾಗಿ, ಆಗಸದಲ್ಲಿ ಮೂಡುವ ಮೋಡಗಳ ಮಧ್ಯೆ ಪ್ರೇಮ ಚಿತ್ತಾರ ಬರೆಯಲು ಯತ್ನಿಸುವ ಹುಚ್ಚು ಪ್ರೇಮಿಯಾಗಿರುವೆ.

ನಮ್ಮಿಬ್ಬರ ಭೇಟಿಯಾದ ಶುಭಗಳಿಗೆ ನೆನಪಿದೆಯಾ? ಆ ದಿನ ಕಾಲೇಜಿಗೆ ತಡವಾಗಿತ್ತು. ಅವಸರದಿಂದ ಹೋಗುತ್ತಿದ್ದಾಗ ಕಾಲೇಜಿನ ಕಾರಿಡಾರ್‌ ತಿರುವಿನಲ್ಲಿ ನಿನಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದೆ. ತಪ್ಪು ನನ್ನದೇ ಇದ್ದರೂ, ನಿನ್ನನ್ನೇ ಏರುದನಿಯಲ್ಲಿ ಬೈದಿದ್ದೆ. ಪಾಪ, ನನ್ನ ಜೋರು ದನಿಗೆ ಕಂಗಾಲಾಗಿ ನೀನು ಒಂದೂ ಮಾತಾಡದೆ ಸೈಲೆಂಟಾಗಿ ನಿಂತುಬಿಟ್ಟಿದ್ದೆ. ನಿನ್ನ ಅಂದಿನ ಭಯಭೀತ ಮೊಗವನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ. ಅದೇ ನಮ್ಮ ಮೊದಲ ಭೇಟಿ. ಎಂದೂ ಮೂಡದ ಭಾವನೆಯೊಂದು ಅಂದು ಹೃದಯದಲ್ಲಿ ಜಾಗ ಮಾಡಿಕೊಳ್ಳಲು ಆರಂಭಿಸಿತ್ತು. ಅಂದು ಡಿಕ್ಕಿ ಹೊಡೆದು ಕೆಳಗೆ ಬಿದ್ದಾಗ ಪುಸ್ತಕಗಳು ಅದಲು ಬದಲಾಗಿದ್ದವು.ಆಗ ನಿನ್ನ ಪುಸ್ತಕದಲ್ಲಿದ್ದ ಗ್ರೂಫ್ ಫೋಟೋ ಕದ್ದಿದ್ದು ನಾನೇ. ಹಾಗೆಂದು ನನ್ನನ್ನು ದೊಡ್ಡ ಕಳ್ಳನೆಂದು ಅಂದುಕೊಳ್ಳಬೇಡ ಮಾರಾಯ್ತಿ. ನೀನು ನನ್ನ ಹೃದಯವನ್ನೇ ಕದ್ದಿರುವಾಗ, ನಾನು ಮಾಡಿದ ಕಳ್ಳತನ ಅಷ್ಟೇನೂ ದೊಡ್ಡದಲ್ಲ ಆಯ್ತಾ!

ಅಂದಿನಿಂದ ನೀನು ಕಂಡಲ್ಲೆಲ್ಲಾ ಸತಾಯಿಸುವುದು ಪರಿಪಾಠವಾಯಿತು. ನೆನಪಿದೆಯಾ? ಕಾಲೇಜಿನ ಲೈಬ್ರರಿಯಲ್ಲಿ ಏರುದನಿಯಲ್ಲಿ “ಸಾರಿ ರೀ ಮೇಡಂ’ ಎಂದು ಕೂಗಿ ಲೈಬ್ರರಿಯನ್‌ ಹತ್ತಿರ ಬೈಸಿಕೊಂಡಿದ್ದು, ಆಗ ನೀನು ಮೂಗು ಮುರಿದು ಅಣಕಿಸಿದ್ದು ಇಂದಿಗೂ ಹೃದಯದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಆ ಅಣಕು ನೋಟಕ್ಕಾಗಿಯೇ  ಮತ್ತೆ ಮತ್ತೆ ನಿನ್ನನ್ನು ನೋಡುಬೇಕೆನ್ನುವ ಆಸೆ ಮೂಡುವುದು.

“ಇದೆಲ್ಲವನ್ನು ಏಕೆ ಹೇಳುತ್ತಿದೆ ಈ ಕಪಿ’ ಎಂದು ನೀನು ಬೈದುಕೊಂಡರೂ ಬೇಜಾರಿಲ್ಲ. ಏಕೆಂದರೆ ನನ್ನ ಜೀವ, ಜೀವನ ಎಲ್ಲವೂ ನೀನೇ ಎನ್ನುವಷ್ಟು ನಿನ್ನ ಮೇಲೆ ಲವ್‌ ಆಗಿದೆ. ಇಷ್ಟೆಲ್ಲ ಆದರೂ ನಿನ್ನ ಎದುರಿಗೆ ನಿಂತು “ಐ ಲವ್‌ ಯು’ ಎಂದು ಹೇಳ್ಳೋಕೆ ಧೈರ್ಯವೇ ಸಾಲುತ್ತಿಲ್ಲ. ಅದಕ್ಕೆ ಈ ಪತ್ರದ ಮೂಲಕ ಪ್ರೇಮ ನಿವೇದನೆ ಮಾಡುತ್ತಿರುವೆ.

Advertisement

ಇವನೇನು ನನ್ನ ಮೇಲೆ ಇಷ್ಟು ಹಕ್ಕು ಚಲಾಯಿಸುತ್ತಿದ್ದಾನೆ ಅಂದುಕೊಳ್ಳಬೇಡ. ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ, ಅದಕ್ಕೆ ನನ್ನವಳೆಂಬ ಅಧಿಕಾರದಿಂದ ಮಾತಾಡುತ್ತಿದ್ದೇನೆ ಅಷ್ಟೆ. ಇದನ್ನು ನೋಡಿ ನಿನಗೆ ಕೋಪ ಬಂದರೆ, ನಾನು ಸಿಕ್ಕಾಗೊಮ್ಮೆ ಸಮಾಧಾನ ಆಗುವಷ್ಟು ಬೈದುಬಿಡು. ಅದರಿಂದ ನನಗೇನು ಬೇಜಾರಾಗುವುದಿಲ್ಲ, ಯಾಕೆಂದರೆ ನಾನೂ ನಿನ್ನವನಲ್ಲವೇ? ಕೊನೆಯದಾಗಿ ನನ್ನದೂ ಒಂದು ಪಿಸುಮಾತು “ಲವ್‌ ಯು ಡಿಯರ್‌ ಕುಳ್ಳಿ’

ಮಹಾಂತೇಶ ದೊಡವಾಡ ಪತ್ರಿಕೋದ್ಯಮ ವಿದ್ಯಾರ್ಥಿ ರಾಣಿಚನ್ನಮ್ಮ ವಿವಿಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next