Advertisement

2023 Recap: ಇಹಲೋಕ ತ್ಯಜಿಸಿದ ಪ್ರಮುಖ ರಾಜಕಾರಣಿಗಳು

06:16 PM Dec 30, 2023 | Team Udayavani |

2023ರಲ್ಲಿ ಅಗಲಿದ ಪ್ರಮುಖ ರಾಜಕಾರಣಿಗಳು ಇಹಲೋಕದ ಯಾತ್ರೆ ಮುಗಿಸಿದ್ದು, ಆ ಪೈಕಿ ಪ್ರಮುಖ ಸಾಧಕರ ಕುರಿತು ಕಿರು ವರದಿ ಇಲ್ಲಿದೆ :

Advertisement

ಜನವರಿ-2023

ಮಾಜಿ ರಾಜ್ಯಪಾಲ ತ್ರಿಪಾಠಿ ನಿಧನ(08/01/2023)
ಬಿಜೆಪಿಯ ಹಿರಿಯ ನಾಯಕ, ಪಶ್ಚಿಮ ಬಂಗಾಲ, ಬಿಹಾರ ಸಹಿತ ಒಟ್ಟು 4 ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಕೇಸರಿನಾಥ್‌ ತ್ರಿಪಾಠಿ (88) ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕೊನೆಯುಸಿರೆಳೆದಿದ್ದರು.


1934ರ ನ.10ರಂದು ಅಲಹಾಬಾದ್‌ನಲ್ಲಿ ಜನಿಸಿದ ತ್ರಿಪಾಠಿ ಪಶ್ಚಿಮ ಬಂಗಾಲ, ಬಿಹಾರ,ಮೇಘಾಲಯ, ಮಿಜೋರಾಂ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. 6 ಬಾರಿ ಉತ್ತರಪ್ರದೇಶದ ಶಾಸಕರಾಗಿದ್ದರು.

ಮಾಜಿ ಸಚಿವ ಶರದ್‌ ಯಾದವ್‌ ನಿಧನ(12/01/2023)
ಜನತಾ ದಳ ಯು ಪಕ್ಷದ ಮಾಜಿ ಅಧ್ಯಕ್ಷ ಶರದ್‌ ಯಾದವ್‌ (75) ಅವರು ನಿಧನ ಹೊಂದಿದ್ದರು. ಶರದ್‌ ಯಾದವ್‌ ಅವರು ಪ್ರಧಾನಿ ವಾಜಪೇಯಿ ಅವರ ಸಂಪುಟದಲ್ಲಿ ನಾಗರಿಕ ವಿಮಾನ ಯಾನ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆಯ ಸಚಿವರಾಗಿದ್ದರು.


ಜೆಡಿಯುನಿಂದ ಸ್ಪರ್ಧಿಸಿ ಏಳು ಬಾರಿ ಲೋಕಸಭೆ ಮತ್ತು ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿದ್ದರು. ಜೆಡಿಯುನಿಂದ ಹೊರಬಂದು ತಮ್ಮದೇ ಆದ ಲೋಕತಾಂತ್ರಿಕ ಜನತಾ ದಳ ಪಕ್ಷವನ್ನು ಕಟ್ಟಿದ್ದರು.

31/01/2023
ಮಾಜಿ ಸಚಿವ ಭೂಷಣ್‌ ನಿಧನ
ಕೇಂದ್ರದ ಮಾಜಿ ಕಾನೂನು ಸಚಿವ, ಖ್ಯಾತ ನ್ಯಾಯವಾದಿ ಶಾಂತಿ ಭೂಷಣ್‌(97) ನಿವಾಸದಲ್ಲಿ ಕೊನೆ ಯುಸಿರೆಳೆದಿದ್ದಾರೆ. 1977 ರಿಂದ 1979ರ ವರೆಗೆ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕಾನೂನು ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು.

Advertisement

ಇತ್ತೀಚಿನವರೆಗೂ ಸಕ್ರಿಯರಾಗಿದ್ದ ಶಾಂತಿ ಭೂಷಣ್‌ ಅವರು, ರಫೇಲ್‌ ಯುದ್ಧ ವಿಮಾನ ಒಪ್ಪಂದ ಪ್ರಕರಣವನ್ನು ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂಬ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು.

ಇಂದಿರಾಗಾಂಧಿಯವರು ಚುನಾವಣ ಅಕ್ರಮ ಎಸಗಿ ಚುನಾವಣೆ ಗೆದ್ದಿದ್ದರು ಎಂಬ ಎಸ್‌ಎಸ್‌ಪಿ ನಾಯಕ ರಾಜ್‌ ನರೈನ್‌ ಅವರ ಪರ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ವಾದಿಸಿದ್ದ ಶಾಂತಿಭೂಷಣ್‌ ಅವರು ಇಂದಿರಾರ ಪದಚ್ಯುತಿಗೂ ಕಾರಣರಾಗಿದ್ದರು. ಭ್ರಷ್ಟಾಚಾರದ ವಿರುದ್ಧ ಸದಾ ಧ್ವನಿಯೆತ್ತುತ್ತಿದ್ದ ಶಾಂತಿಭೂಷಣ್‌ ಅವರು ಕೆಲವು ಕಾಲ ಆಮ್‌ ಆದ್ಮಿ ಪಕ್ಷದ ಜತೆಗೂ ಗುರುತಿಸಿಕೊಂಡಿದ್ದರು.

ಫೆಬ್ರವರಿ-2023

ಪಾಕ್‌ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ(05/02/2023)
ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ (79) ನಿಧನರಾಗಿದ್ದರು.

1943ರಲ್ಲಿ ದಿಲ್ಲಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಮುಷರ್ರಫ್ 1947ರಲ್ಲಿ ದೇಶ ವಿಭಜನೆಯ ಬಳಿಕ ಪಾಕಿಸ್ಥಾನಕ್ಕೆ ವಲಸೆ ಹೋಗಿದ್ದರು. 1999ರಲ್ಲಿ ಕಾರ್ಗಿಲ್‌ ಯುದ್ಧ ದುಸ್ಸಾಹಸದಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದರು.

ಮಾಜಿ ಶಾಸಕ ಶಿವಾನಂದ ನಿಧನ(09/02/2023)
ವೀರಶೈವ ಸಮಾಜದ ಹಿರಿಯ ಮುಖಂಡ,ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಶಿವಾನಂದ ರುದ್ರಪ್ಪ ಅಂಬಡಗಟ್ಟಿ (73) ಹೃದಯಾಘಾತದಿಂದ ನಿಧನ ಹೊಂದಿದ್ದರು.

1999ರ ಚುನಾವಣೆಯಲ್ಲಿ ಶಿವಾನಂದ ಅಂಬಡಗಟ್ಟಿ ಅವರು ಕಾಂಗ್ರೆಸ್‌ ಟಿಕೆಟ್‌ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು.ಬಳಿಕ ಅಂದಿನ ಸಿಎಂ ಎಸ್‌. ಎಂ. ಕೃಷ್ಣ, ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. 2008ರಲ್ಲಿ ಕಲಘಟಗಿ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದರು. 2018ರಲ್ಲಿ ಕಲಘಟಗಿ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಇತ್ತೀಚೆಗೆ ಮತ್ತೆ ಕಾಂಗ್ರೆಸ್‌ ಸೇರಿದ್ದರು.

ಮಾರ್ಚ್ 2023

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನ(11/03/2023)
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷ, ಚಾಮರಾಜನಗರ ಮಾಜಿ ಲೋಕಸಭಾ ಸದಸ್ಯ ಆರ್‌. ಧ್ರುವನಾರಾಯಣ (61) ಶನಿವಾರ ಬೆಳಗಿನ ಜಾವ ಇಲ್ಲಿನ ನಿವಾಸದಲ್ಲಿ ರಕ್ತಸ್ರಾವಹಾಗೂ ತೀವ್ರ ಹೃದಯಾಘಾತ  ದಿಂದ ನಿಧನ ಹೊಂದಿದ್ದರು.

ಕಾಂಗ್ರೆಸ್‌ ಮೂಲಕ ರಾಜಕೀಯ ಪ್ರವೇಶಿಸಿ ಅನಂತರ ಬಿಜೆಪಿ ಸೇರಿ ವಾಪಸ್‌ ಕಾಂಗ್ರೆಸ್‌ಗೆ ಬಂದು ಎರಡು ಬಾರಿ ವಿಧಾನಸಭಾ ಸದಸ್ಯರು ಹಾಗೂ ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದರು.

ಏಪ್ರಿಲ್- 2023

ಪಂಜಾಬ್‌ ಮಾಜಿ ಸಿಎಂ ಪ್ರಕಾಶ್‌ ಬಾದಲ್‌ ನಿಧನ(25/04/2023)
ರಾಜಕೀಯ ಹಿರಿಯ ಮುತ್ಸದ್ಧಿ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌(95) ಅನಾರೋಗ್ಯದಿಂದ ನಿಧನ ಹೊಂದಿದ್ದರು.


ಬಾದಲ್‌, ಸತತ 5 ಬಾರಿ ಸಿಎಂ ಗಾದಿಗೇರಿ ದವರು. ಅಲ್ಲದೇ 1952ರಲ್ಲಿ ಬಾದಲ್‌ ಗ್ರಾಮದ ಮೂಲಕ ಆಯ್ಕೆಯಾದ ಅತೀ ಕಿರಿಯ ವಯಸ್ಸಿನ ಸರಪಂಚ್‌ ಎನ್ನುವ ಖ್ಯಾತಿಯಿಂದ ಶುರುವಾಗಿ, ರಾಜ್ಯದ ಅತೀ ಕಿರಿಯ ವಯಸ್ಸಿನ ಸಿಎಂ ಹಾಗೂ 2012ರ ವೇಳೆ ಅತ್ಯಂತ ಹಿರಿಯ ವಯಸ್ಸಿನ ಸಿಎಂ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು.

ರಾಷ್ಟ್ರ ರಾಜಕಾರಣದಲ್ಲೂ ತಮ್ಮ ಹೆಜ್ಜೆ ವಿಸ್ತರಿಸಿ, ಕೆಲವು ಸಮಯ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು, 1 ಬಾರಿ ಲೋಕಸಭೆ ಸದಸ್ಯರೂ ಆಗಿದ್ದರು.

ಮೇ -2023

ಉಡುಪಿಯ ಮಾಜಿ ಶಾಸಕ ಯು.ಆರ್‌. ಸಭಾಪತಿ ನಿಧನ(21/05/2023)
ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ, ವಿವಿಧ ಸ್ತರದ ಜನ ಪ್ರತಿನಿಧಿಯಾಗಿ ಜನ ಪ್ರಿಯರಾಗಿದ್ದ ಮಾಜಿ ಶಾಸಕ ಯು.ಆರ್‌.ಸಭಾಪತಿ (71) ಅವರು ಮೇ 21ರಂದು ಉಡುಪಿ ಬಡಗುಪೇಟೆಯ ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನ ಹೊಂದಿದ್ದರು.

ಸದಾ ಕಾರ್ಯನಿರತ ಸಮಾಜ ಸೇವಕರಾಗಿದ್ದ ಸಭಾಪತಿ 1980-90ರ ದಶಕದಲ್ಲಿ ಪ್ರಭಾವಿ ನಾಯಕರಾಗಿದ್ದರು. 1987ರಲ್ಲಿ ದ.ಕ. ಜಿಲ್ಲಾ ಪರಿಷತ್‌ನ ಉದ್ಯಾವರ ಕ್ಷೇತ್ರದ ಸದಸ್ಯರಾಗಿ, ಪರಿಷತ್‌ನ ಶಿಕ್ಷಣ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅದೇಸಂದರ್ಭದಲ್ಲಿ ದ.ಕ. ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಉಡುಪಿಯ ಶಾಸಕರಾಗಿದ್ದ ಅವಧಿಯಲ್ಲಿ ಮೊತ್ತ ಮೊದಲ ಬಾರಿಗೆ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಿದ್ದರು.

“ಮಹಾ’ ಕೈ ಸಂಸದ ಬಾಲು ನಿಧನ(30/05/2023)


ಮಹಾರಾಷ್ಟ್ರದಿಂದ ಕಾಂಗ್ರೆಸ್‌ನ ಏಕೈಕ ಲೋಕಸಭಾ ಸದಸ್ಯರಾಗಿದ್ದ, ಸಂಸದ ಬಾಲು ಧನೋರ್ಕರ್‌ (47) ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.

ಜುಲೈ -2023

ಮಾಜಿ ಶಾಸಕ ನಿಂಬಣ್ಣವರ್‌ ನಿಧನ(09/07/2023)
ಕಲಘಟಗಿಯ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ್‌ (76) ಬೆಂಗಳೂರಿನಲ್ಲಿ ನಿಧನ ಹೊಂದಿದ್ದರು.

ನ್ಯಾಯವಾದಿಯಾಗಿ, ತಾಲೂಕಿನ ಮಿಶ್ರಿಕೋಟಿಯ ಸಹಕಾರ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದ ಅವರು ವಿಆರ್‌ಎಸ್‌ ಪಡೆದು ಅದೇ ಸಂಸ್ಥೆಯ ಚೇರ್ಮನ್‌ ಆಗಿ ಸೇವೆ ಸಲ್ಲಿಸಿದ್ದರು.


ಮೂರು ದಶಕಗಳಿಂದ ರಾಜಕೀಯದಲ್ಲಿದ್ದ ಅವರು ಬಿಜೆಪಿಯ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.

ಅಕ್ಟೋಬರ್- 2023

ಚೀನ ಮಾಜಿ ಪ್ರಧಾನಿ ಲೀ ನಿಧನ(27/10/2023)
ಚೀನದ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಲೀ ಕೆಖೀಯಾಂಗ್‌(68) ಹೃದಯಾಘಾತದಿಂದ ನಿಧನ ಹೊಂದಿದ್ದರು.
ಕಮ್ಯೂನಿಸ್ಟ್‌ ಪಾರ್ಟಿ ಆಫ್ಚೀ ನದ(ಸಿಪಿಸಿ) ಮುಖ್ಯಸ್ಥ ಸ್ಥಾನಕ್ಕೆ ಕ್ಸಿ ಜಿನ್‌ಪಿಂಗ್‌ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

ಅನಂತರ 2012ರ ಮಾರ್ಚ್‌ನಿಂದ 2023ರ ಮಾರ್ಚ್‌ವರೆಗೆ ಪ್ರಧಾನಿಯಾಗಿ ಅಧಿಕಾರ ವಹಿಸಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ರಾಜಕೀಯದಿಂದ ಅವರು ನಿವೃತ್ತರಾಗಿದ್ದರು.

ನವೆಂಬರ್-2023

ಮುತ್ಸದ್ದಿ ಚಂದ್ರೇಗೌಡ ಇನ್ನಿಲ್ಲ(07/11/2023)
ಮಾಜಿ ಸಚಿವ, ಹಿರಿಯ ನಾಯಕ ಡಿ.ಬಿ. ಚಂದ್ರೇಗೌಡ (87)ಅವರು ಮಂಗಳವಾರ ನಿಧನ ಹೊಂದಿದ್ದರು.
ಪ್ರಜಾಪ್ರಭುತ್ವದ ನಾಲ್ಕು ಮನೆಗಳಾದ ವಿಧಾನಸಭೆ, ವಿಧಾನಪರಿಷತ್‌, ಲೋಕಸಭೆ ಹಾಗೂ ರಾಜ್ಯಸಭೆಗಳ ಸದಸ್ಯರಾದ ಕೆಲವೇ ಕೆಲವು ನಾಯಕರಲ್ಲಿ ಚಂದ್ರೇಗೌಡ ಒಬ್ಬರು.


ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮಕ್ಕೆ ಕಾರಣರಾಗಿದ್ದ‌ರು.

ನಿವೃತ್ತ ರಾಜ್ಯಪಾಲ ಪಿ.ಬಿ. ಆಚಾರ್ಯ ವಿಧಿವಶ(10/11/2023)
ಈಶಾನ್ಯ ರಾಜ್ಯಗಳ ನಿವೃತ್ತ ರಾಜ್ಯಪಾಲ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪ್ರಮುಖರಾಗಿದ್ದ ಉಡುಪಿಯ ಪದ್ಮನಾಭ ಬಾಲಕೃಷ್ಣ ಆಚಾರ್ಯ (ಪಿ.ಬಿ. ಆಚಾರ್ಯ) (92) ಮುಂಬಯಿಯ ಅಂಧೇರಿ ನಿವಾಸದಲ್ಲಿ ನ. 10ರಂದು ನಿಧನ ಹೊಂದಿದ್ದರು.  ಆಚಾರ್ಯರು ಉಡುಪಿ ತೆಂಕಪೇಟೆಯ ಆಚಾರ್ಯ ಮಠದಲ್ಲಿ 1931ರ ಅ. 8ರಂದು ಜನಿಸಿದರು. ಪದವಿ ವಿದ್ಯಾಭ್ಯಾಸದ ಬಳಿಕ ಮುಂಬಯಿಗೆ ತೆರಳಿದ ಅವರು ಶಿಕ್ಷಣ, ಉದ್ಯೋಗ ನಿರ್ವಹಿಸುತ್ತ ಎಬಿವಿಪಿ, ಬಿಜೆಪಿ ಸದಸ್ಯರಾದರು.

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ರಾಜ್ಯಗಳ ಅಭಿವೃದ್ಧಿ ಮತ್ತು ಶೈಕ್ಷಣಿಕ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದ ಅವರು ಬುಡಕಟ್ಟು, ಗುಡ್ಡಗಾಡು ಜನಾಂಗಗಳ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದರು.

ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ 2014ರಲ್ಲಿ ನಾಗಾಲ್ಯಾಂಡ್‌ ರಾಜ್ಯಪಾಲರಾದರು. ಅನಂತರ ತ್ರಿಪುರಾ,ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರಗಳ ಹಂಗಾಮಿ ರಾಜ್ಯಪಾಲರಾಗಿದ್ದರು. ಉನ್ನತ ಸ್ಥಾನಕ್ಕೇರಿದ ಬಳಿಕವೂ ಉಡುಪಿ, ಮಂಗಳೂರಿನ ನಂಟನ್ನು ಹಸುರಾಗಿ ಇರಿಸಿಕೊಂಡಿದ್ದರು.

ಡಿಸೆಂಬರ್-2023

ಕುವೈಟ್‌ನ ದೊರೆ ಶೇಖ್‌ ನವಾಫ್ ನಿಧನ(17/12/2023)
ಕುವೈಟ್‌ನ ದೊರೆ ಶೇಖ್‌ ನವಾಫ್ ಅಲ್‌ ಅಲ್‌ ಅಹ್ಮದ್‌ ಅಲ್‌ ಸಭಾ(86) ನಿಧನ ಹೊಂದಿದ್ದರು.

1937ರಲ್ಲಿ ಜನಿಸಿದ್ದ ಶೇಖ್‌ ನವಾಫ್ ತಮ್ಮ 25ನೇ ವಯಸ್ಸಿನಲ್ಲಿ ರಾಜಕೀಯ ಜೀವನ ಆರಂಭಿಸಿ, ಹವಾಲಿ ಪ್ರಾಂತದ ಗವರ್ನರ್‌ ಆಗಿದ್ದರು. ಬಳಿಕ ವಿವಿಧ ಸಚಿವ ಸ್ಥಾನ ಗಳನ್ನು ನಿಭಾಯಿಸಿ, 2020ರಿಂದ ಕುವೈಟ್‌ ದೊರೆಯಾಗಿದ್ದರು ಹೆಸರುವಾಸಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next