2023 ಮುಗಿಯುತ್ತಾ ಬಂದಿದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿವೆ. ಡಿಸೆಂಬರ್ 15ರವರೆಗೆ ಬಿಡುಗಡೆಯಾಗಿರುವ ಸಿನಿಮಾಗಳನ್ನು ಲೆಕ್ಕ ಹಾಕಿದಾಗ ಈ ವರ್ಷ 211 ಪ್ಲಸ್ ಚಿತ್ರಗಳು ಸಿಗುತ್ತವೆ. ಈ ಸಂಖ್ಯೆ ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳಷ್ಟೇ ಹತ್ತಿರದಲ್ಲಿದೆ. 211 ಪ್ಲಸ್ ಸಿನಿಮಾಗಳಲ್ಲಿ ಸ್ಟಾರ್‌ಗಳ ಹಾಗೂ ಪರಿಚಿತ ಮುಖಗಳ, ಚಿತ್ರರಂಗದ ಮುಂಚೂಣಿ ನಟರ ಸಿನಿಮಾಗಳೆಂದು ಲೆಕ್ಕ ಹಾಕುತ್ತಾ ಹೋದರೆ ಸಿಗುವ ಸಂಖ್ಯೆ 25ರ ಹಾಸುಪಾಸಿನಲ್ಲೇ ಇದೆ. ಮಿಕ್ಕಂತ 186ಕ್ಕೂ ಹೆಚ್ಚು ಹೊಸಬರ ಚಿತ್ರಗಳು ಬಿಡುಗಡೆಯಾಗಿರೋದು ಸ್ಪಷ್ಟ. ಅಲ್ಲಿಗೆ ಒಂದು ಸಾಬೀತಾಗಿದೆ, ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ಚಿತ್ರರಂಗವನ್ನು ಸದಾ ಚಟುವಟಿಕೆಯಲ್ಲಿ ಇಟ್ಟಿರೋದು ಹೊಸಬರೇ.
ಯಾವುದೇ ಚಿತ್ರರಂಗವನ್ನಾದರೂ ತೆಗೆದು ನೋಡಿ, ಅಲ್ಲಿನ ಚಿತ್ರರಂಗವನ್ನು ಸದಾ ಹಸಿರಾಗಿರುವಂತೆ ಹಾಗೂ ನಿರಂತರ ಕೆಲಸ ಕಾರ್ಯಗಳು ನಡೆಯುವಂತೆ ಮಾಡುವುದು ಹೊಸಬರೇ. ಆದರೆ, ಇಂತಹ ಹೊಸಬರಿಗೆ ಗೆಲುವಿನ ಕೊರತೆ ಮಾತ್ರ ಕಾಡುತ್ತಲೇ ಇರುತ್ತದೆ.
ಭಿನ್ನ- ವಿಭಿನ್ನ ಪ್ರಯತ್ನ
ಚಿತ್ರರಂಗಕ್ಕೆ ಸ್ಟಾರ್ ಸಿನಿಮಾಗಳು ಎಷ್ಟು ಮುಖ್ಯವೋ ಹೊಸಬರ ಸಿನಿಮಾಗಳು ಅಷ್ಟೇ ಮುಖ್ಯ. ಸ್ಟಾರ್ ಸಿನಿಮಾಗಳು ವರ್ಷದ ಜಾತ್ರೆಯಾದರೆ, ಹೊಸಬರ ಸಿನಿಮಾಗಳು ಊರ ದಿನಸಿ ಅಂಗಡಿಯಂತೆ. ನಿರಂತರವಾಗಿ ಚಿತ್ರರಂಗಕ್ಕೆ ಕೆಲಸ ನೀಡುತ್ತಲೇ ಇರುತ್ತವೆ. 2023ರಲ್ಲೂ 185ಕ್ಕೂ ಹೆಚ್ಚು ಹೊಸಬರ ಸಿನಿಮಾಗಳು ಬಿಡುಗಡೆಯಾಗಿವೆ. ಇಲ್ಲಿ ಲವ್‌ಸ್ಟೋರಿ, ಆ್ಯಕ್ಷನ್, ಹಾರರ್, ಥ್ರಿಲ್ಲರ್, ಸಸ್ಪೆನ್ಸ್, ಸೇರಿದಂತೆ ಬೇರೆ ಬೇರೆ ಜಾನರ್‌ಗಳನ್ನು ಪ್ರಯತ್ನಿಸಿದ್ದಾರೆ. ಬಹುತೇಕ ಸಿನಿಮಾಗಳು ಅನುಭವದ ಹಾಗೂ ಪೂರ್ವತಯಾರಿಯ ಕೊರತೆಯಿಂದ ಸದ್ದಿಲ್ಲದೇ ಚಿತ್ರಮಂದಿರದಿಂದ ಮಾಯವಾದರೆ, ಒಂದಷ್ಟು ಚಿತ್ರಗಳು ಮೆಚ್ಚುಗೆಗೆ ಪಾತ್ರವಾಗಿವೆ. ಆದರೆ, ಸೂಕ್ತ ಪ್ರೋತ್ಸಾಹ, ಸಿನಿಮಾ ಮಂದಿರದಲ್ಲಿ ಸಿನಿಮಾಗಳನ್ನು ನಿಲ್ಲಿಸುವ ಸಾಮರ್ಥ್ಯದ ಕೊರೆತೆಯಿಂದಾಗಿ ತಣ್ಣಗಾಗಿವೆ.
ವರ್ಷದ ಮೊದಲ ಬ್ರೇಕ್ ನೀಡಿದ್ದೇ ಹೊಸಬರು
ಸಿನಿಮಾದ ಗೆಲುವನ್ನು ಊಹಿಸೋದು ಕಷ್ಟ. ಸೂಪರ್ ಹಿಟ್ ಆಗಬಹುದೆಂದು ಅಭಿಮಾನಿಗಳು ಕಾಯುತ್ತಿದ್ದ ಸ್ಟಾರ್ ಸಿನಿಮಾ ಇನ್ನಿಲ್ಲದಂತೆ ಸೋಲಬಹುದು. ಅದೇ ಸದ್ದಿಲ್ಲದೇ ಬಂದ ಹೊಸಬರು ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು. ಈ ವರ್ಷ ಕನ್ನಡ ಚಿತ್ರರಂಗಕ್ಕೆ ಮೊದಲ ಗೆಲುವು ಕೊಟ್ಟಿದ್ದೇ ಹೊಸಬರು. ಅದು “ಡೇರ್ ಡೆವಿಲ್ ಮುಸ್ತಫಾ’ ಚಿತ್ರದ ಮೂಲಕ. ಸಂಪೂರ್ಣ ಹೊಸಬರೇ ಸೇರಿ ಮಾಡಿದ ಈ ಚಿತ್ರಕ್ಕೆ ಬೆನ್ನೆಲುಬಾಗಿ ಇದ್ದಿದ್ದು ನಟ ಧನಂಜಯ್ ಮಾತ್ರ. ಆದರೆ, ಈ ಚಿತ್ರ ಒಂದು ಮಟ್ಟದ ಯಶಸ್ಸನ್ನು ತಂದುಕೊಟ್ಟು ನಿಟ್ಟುಸಿರು ಬಿಡುವಂತೆ ಮಾಡಿತು.
ಇದರ ಜೊತೆಗೆ “ಹೊಂದಿಸಿ ಬರೆಯಿರಿ’ ಚಿತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಕಮರ್ಷಿಯಲ್ ಆಗಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು ಕೂಡಾ ಹೊಸಬರೇ ಸೇರಿ ಮಾಡಿದ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ. ಈ ಚಿತ್ರದ ಮೂಲಕ ಇಡೀ ಚಿತ್ರರಂಗಕ್ಕೊಂದು ಭರವಸೆ ಬಂದಿತ್ತು. ಹಾಗಾಗಿ, ಈ ವರ್ಷ ಆರಂಭದ ಗೆಲುವು ನೀಡಿದ್ದು ಕೂಡಾ ಹೊಸಬರೇ. ಹಾಗಂತ ಸ್ಟಾರ್ ಸಿನಿಮಾಗಳು ಗೆದ್ದಿಲ್ಲ ಎಂದಲ್ಲ, ಸ್ಟಾರ್ ಸಿನಿಮಾಗಳು ಕೂಡಾ ಕಲೆಕ್ಷನ್‌ನಲ್ಲಿ ಜೋರು ಸೌಂಡ್ ಮಾಡಿವೆ.
ರವಿಪ್ರಕಾಶ್ ರೈ