2021ರ ಕೊನೆಯ ದಿನವಿದು. ಕನ್ನಡ ಚಿತ್ರರಂಗಕ್ಕೆ ಈ ವರ್ಷ ಹೇಗಿತ್ತು ಎಂದು ಒಮ್ಮೆ ಹಿಂದಿರುಗಿ ನೋಡಿದಾಗ ನೋವು-ನಲಿವಿನಲ್ಲಿ ನೋವು ಹೆಚ್ಚು ತೂಗುತ್ತದೆ. ಈ ಸತ್ಯವನ್ನು ಅನಿವಾರ್ಯವಾಗಿ ಸಿನಿಮಾ ಅಭಿಮಾನಿಗಳು, ಚಿತ್ರರಂಗ ಒಪ್ಪಿಕೊಳ್ಳಬೇಕಾಗಿದೆ. ಸಾವು-ನೋವುಗಳ ನಡುವೆಯೇ ಕನ್ನಡ ಚಿತ್ರರಂಗ ಸಿನಿಮಾ ಬಿಡುಗಡೆಯಲ್ಲಿ 100ರ ಗಡಿದಾಟಿದೆ. ಇವತ್ತಿನವರೆಗೆ (ಡಿ.31) ಬಿಡುಗಡೆಯಾದ ಸಿನಿಮಾಗಳನ್ನು ಲೆಕ್ಕ ಹಾಕಿ ಹೇಳುವುದಾದರೆ 106 ಕನ್ನಡ ಸಿನಿಮಾಗಳು ಸಿಗುತ್ತವೆ. ಇದು ನೇರವಾಗಿ ಕನ್ನಡದಲ್ಲೇ ತಯಾರಾಗಿ ಬಿಡುಗಡೆಯಾದ ಚಿತ್ರಗಳು. ಬೇರೆ ಭಾಷೆಗಳಿಂದ ಡಬ್ ಆಗಿ ರಿಲೀಸ್ ಆದ ಸಿನಿಮಾಗಳನ್ನು ಸೇರಿಸಿದರೆ, ಬಿಡುಗಡೆಯ ಸಂಖ್ಯೆಯಲ್ಲಿ ಇನ್ನೂ ಏರಿಕೆಯಾಗುತ್ತದೆ. ಇನ್ನು, ತುಳು ಚಿತ್ರರಂಗದಲ್ಲಿ ಈ ವರ್ಷ 7 ಸಿನಿಮಾ (ಇಂದು ಬಿಡುಗಡೆಯಾಗುತ್ತಿರುವ ಚಿತ್ರ ಸೇರಿ) ಬಿಡುಗಡೆಯಾಗಿವೆ. ಅನೇಕ ಸಿನಿಮಾಗಳು ನಿರ್ಮಾಪಕ, ನಿರ್ದೇಶಕ, ಕಲಾವಿದರಲ್ಲಿ ಮಂದಹಾಸ ಮೂಡಿಸಿದರೆ, ಬಹುತೇಕ ಸಿನಿಮಾಗಳು ಹೊಸಬರ ಕನಸು ಭಗ್ನಗೊಳಿಸಿವೆ. ಹಾಗಂತ ಕನ್ನಡ ಚಿತ್ರರಂಗ ಎದೆಗುಂದಿಲ್ಲ. ದಿನದಿಂದ ದಿನಕ್ಕೆ ಹೊಸ ಹೊಸ ನಿರ್ಮಾಪಕ, ನಿರ್ದೇಶಕರು ಬರುತ್ತಲೇ ಇದ್ದಾರೆ.
ಬಿಝಿನೆಸ್‌ನಲ್ಲಿ ಮಿಂಚಿದ ಸಿನಿಮಾಗಳು
ಪ್ರತಿ ವರ್ಷ ಸಿನಿಮಾಗಳ ಸೋಲು-ಗೆಲುವಿನ ಲೆಕ್ಕಾಚಾರದೊಂದಿಗೆ ಚಿತ್ರರಂಗ ಹೊಸ ವರ್ಷಕ್ಕೆ ತೆರೆದುಕೊಳ್ಳುತ್ತಿತ್ತು. ಆದರೆ, ಈ ವರ್ಷ ಆ ರೀತಿ ಲೆಕ್ಕಾಚಾರ ಹಾಕೋದು ಕಷ್ಟ. ಏಕೆಂದರೆ ಮೆಚ್ಚುಗೆ ಪಡೆದ ಅದೆಷ್ಟೋ ಸಿನಿಮಾಗಳು ಚಿತ್ರಮಂದಿರದಲ್ಲಿ ಹೆಚ್ಚು ದಿನ ನಿಲ್ಲಲಿಲ್ಲ. ಇನ್ನು ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಓಡದಿದ್ದರೂ ಆ ನಂತರ ಓಟಿಟಿ ಫ್ಲಾಟ್‌ಫಾರಂಗಳಲ್ಲಿ ಸೂಪರ್ ಹಿಟ್ ಆದವು. ಮತ್ತೂಂದಿಷ್ಟು ಸ್ಟಾರ್ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವ ಮುನ್ನವೇ ದೊಡ್ಡ ಮಟ್ಟದಲ್ಲಿ ಬಿಝಿನೆಸ್ ಮಾಡಿ ಸದ್ದು ಮಾಡಿದ್ದವು. ಹಾಗಾಗಿ, ಚಿತ್ರರಂಗದ ಸೋಲು-ಗೆಲುವಿನ ಲೆಕ್ಕಾಚಾರ ಕಷ್ಟ. ಜೊತೆಗೆ ವರ್ಷದ ನಾಯಕ, ನಾಯಕಿ ಯಾರೂ ಎನ್ನುವುದನ್ನು ನಿರ್ಧರಿಸುವುದು ಕೂಡಾ ಸುಲಭವಲ್ಲ. “ಪೊಗರು’, “ರಾಬರ್ಟ್’, “ಯುವರತ್ನ’, “ಸಲಗ’, “ಕೋಟಿಗೊಬ್ಬ-3′, “ಭಜರಂಗಿ-2′, “ಮದಗಜ’, “ಸಖತ್’, “ಬಡವ ರಾಸ್ಕಲ್’, “ರೈಡರ್’ ಚಿತ್ರಗಳು ಕಲೆಕ್ಷನ್ ವಿಷಯದಲ್ಲಿಚಿತ್ರರಂಗಕ್ಕೆ ಹುಮ್ಮಸ್ಸು ನೀಡಿವೆ. ಇನ್ನು, ರಮೇಶ್ ಅರವಿಂದ್ ನಟನೆಯ “100′, “ಹೀರೋ’, “ಗರುಡ ಗಮನ ವೃಷಭ ವಾಹನ’ ಸೇರಿದಂತೆ ಅನೇಕ ಸಿನಿಮಾಗಳು ನಿರ್ಮಾಪಕರ ಜೇಬು ತುಂಬಿಸಿ, ಗೆಲುವಿನ ನಗೆ ಬೀರಿವೆ.
2021ರಲ್ಲಿ ದರ್ಶನ ನೀಡಿದ ನಟರು
2021ರಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿಮಾಗಳ ಮೂಲಕ ಬಹುತೇಕ ನಾಯಕ ನಟರು ಅಭಿಮಾನಿಗಳಿಗೆ ದರ್ಶ ನೀಡಿದ್ದಾರೆ. ಆ ನಾಯಕ ನಟರೆಂದರೆ ದರ್ಶನ್, ರವಿಚಂದ್ರನ್, ಧನಂಜಯ್, ಪ್ರಜ್ವಲ್, ಅಜೇಯ್ ರಾವ್, ರಿಷಭ್ ಶೆಟ್ಟಿ, ಶಿವರಾಜ ಕುಮಾರ್, ಪುನೀತ್ ರಾಜಕುಮಾರ್, ಸುದೀಪ್, ಶ್ರೀಮುರಳಿ, ಗಣೇಶ್, ದುನಿಯಾ ವಿಜಯ್, ಧ್ರುವ ಸರ್ಜಾ, ರಮೇಶ್ ಅರವಿಂದ್, ಪ್ರೇಮ್, ನಿಖೀಲ್, ಕೃಷ್ಣ, ಅನೀಶ್ ತೇಜೇಶ್ವರ್, ವಿನೋದ್ ಪ್ರಭಾಕರ್, ಆದಿತ್ಯ,ಚಿರಂಜೀವಿ ಸರ್ಜಾ, ವಿಜಯ್ ರಾಘವೇಂದ್ರ, ಯೋಗಿ, ದಿಗಂತ್, ಪ್ರಮೋದ್ ಸಿನಿಮಾಗಳು ಈ ವರ್ಷ ತೆರೆಕಂಡಿವೆ.
2021ರಲ್ಲಿ ದರ್ಶನ ನೀಡದ ನಟರು
ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಹುತೇಕ ಎಲ್ಲಾ ನಟರ ಸಿನಿಮಾಗಳು ಬಿಡುಗಡೆಯಾಗಿವೆ. ಆದರೆ, ಮುಂಚೂಣಿ ಯಲ್ಲಿರುವ ಕೆಲವೇ ಕೆಲವು ನಟರು ಈ ವರ್ಷ ಸಿನಿಪ್ರೇಮಿಗಳಿಗೆ ದರ್ಶನ ನೀಡಿಲ್ಲ. ಮುಖ್ಯವಾಗಿ ನಟ ಯಶ್ ಅವರ ಚಿತ್ರ ಈ ವರ್ಷವೂ ತೆರೆಕಂಡಿಲ್ಲ. ಅಲ್ಲಿಗೆ ಯಶ್ ಸಿನಿಮಾ ತೆರೆಕಾಣದೇ ಬರೋಬ್ಬರಿ 3 ವರ್ಷ ಆದಂತಾಗಿದೆ. “ಕೆಜಿಎಫ್-1′ 2018 ಡಿಸೆಂಬರ್ 21ರಂದು ತೆರೆಕಂಡಿತ್ತು. ಆ ನಂತರ ಯಶ್ ಅವರ ಸಿನಿಮಾ ಬಿಡುಗಡೆಯಾಗಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಕೆಜಿಎಫ್-2′ 2021ಕ್ಕೆ ಬರಬೇಕಾಗಿತ್ತು. ಆದರೆ, ಆ ಚಿತ್ರ ಏಪ್ರಿಲ್ 14, 2022ಕ್ಕೆ ತೆರೆಕಾಣಲಿದೆ. ಇನ್ನು, ನಟ ಉಪೇಂದ್ರ ಅವರ ಯಾವ ಚಿತ್ರವೂ ಈ ವರ್ಷ ತೆರೆಕಂಡಿಲ್ಲ. ಉಳಿದಂತೆ ರಕ್ಷಿತ್ ಶೆಟ್ಟಿ ಹಾಗೂ ಶರಣ್ ಅವರ ಚಿತ್ರಗಳು ಈ ವರ್ಷ ತೆರೆಕಾಣಲೇ ಇಲ್ಲ. ರಕ್ಷಿತ್ ನಟನೆಯ “777 ಚಾರ್ಲಿ’ ಇಂದು ತೆರೆಕಾಣಬೇಕಿತ್ತು. ಆದರೆ, ಅದೀಗ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಡಿಸೆಂಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಶರಣ್ ಅವರ “ಅವತಾರ್ ಪುರುಷ’ ಮುಂದಕ್ಕೆ ಹೋಗಿದೆ.
ಕನ್ನಡ ಚಿತ್ರರಂಗದ ಮೇಲೆ ಪರಭಾಷಾ ಕಣ್ಣು
ಸದ್ಯ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಚ್ಚು ಸದ್ದು ಮಾಡುತ್ತಿದೆ. ಈ ಮೂಲಕ ಪರಭಾಷೆಯ ಚಿತ್ರಗಳು ಕರ್ನಾಟಕ, ಕನ್ನಡ ಚಿತ್ರರಂಗವನ್ನು ಈ ವರ್ಷ ಹೆಚ್ಚೇ ಟಾರ್ಗೆಟ್ ಮಾಡಿದ್ದವು. ಅದರ ಪರಿಣಾಮವಾಗಿ ಸಿನಿಮಾಗಳ ಪ್ರಮೋಶನ್ ಜೋರಾಗಿಯೇ ನಡೆಯುತ್ತಿದೆ. ಇತ್ತೀಚಿನ ಕೆಲವು ಉದಾಹರಣೆಗಳನ್ನು ಹೇಳುವುದಾದರೆ ರಾಜ್‌ಮೌಳಿ ನಿರ್ದೇಶನದ “ಆರ್‌ಆರ್‌ಆರ್’, ಅಲ್ಲು ಅರ್ಜುನ್ ನಟನೆಯ “ಪುಷ್ಪ’ ಹಾಗೂ ರಣವೀರ್ ಸಿಂಗ್ ಅವರ “83′ ಈ ಎಲ್ಲಾ ಚಿತ್ರಗಳು ಇಡೀ ತಂಡದೊಂದಿಗೆ ಬಂದು ಬೆಂಗಳೂರಿನಲ್ಲಿ ಸಿನಿಮಾ ಪ್ರಮೋಶನ್ ಮಾಡಿವೆ. ಈ ಮೂಲಕ 2021ರಲ್ಲಿ ಪರಭಾಷೆಯ ಕಣ್ಣು ಕನ್ನಡ ಚಿತ್ರರಂಗದ ಮೇಲೆ ಹೆಚ್ಚೇ ಬಿದ್ದಿದೆ ಎನ್ನಬಹುದು.
ಓಟಿಟಿಯಲ್ಲಿ ನಾಲ್ಕು ಸಿನಿಮಾ
2020ರಲ್ಲಿ ಚಿತ್ರರಂಗದ ಮಂದಿ ಕಂಡುಕೊಂಡು ಮತ್ತು ಮೊರೆಹೋದ ಹೊಸ ವೇದಿಕೆ ಎಂದರೆ ಅದು ಓಟಿಟಿಯಾಗಿತ್ತು. 2021ರಲ್ಲೂ ಕನ್ನಡದ 4 ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾದವು. “ರತ್ನನ್ ಪ್ರಪಂಚ’, “ಇಕ್ಕಟ್’, “1980′ ಹಾಗೂ ರವಿಚಂದ್ರನ್ ನಟನೆಯ “ಕನ್ನಡಿಗ’ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗಿವೆ.
ಸುದೀಪ್ @ 25
ನಟ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಸಂಭ್ರಮವೂ 2021ರಲ್ಲಿ ನಡೆಯಿತು. ಕಿಚ್ಚನ 25 ವರ್ಷದ ಜರ್ನಿಯನ್ನು ಸಿನಿಮಾ ಮಂದಿ, ಅಭಿಮಾನಿಗಳು ಸಂಭ್ರಮಿಸಿದರು. ಜೊತೆಗೆ ಅವರ ಬಹುನಿರೀಕ್ಷಿತ “ವಿಕ್ರಾಂತ್ ರೋಣ’ ಚಿತ್ರದ ಫಸ್ಟ್‌ಲುಕ್, ಟೈಟಲ್, ಕನ್ನಡ ಬಾವುಟ ದುಬೈನ ಬುರ್ಜ್ ಖಲೀಫಾದಲ್ಲಿ ಅನಾವರಣಗೊಂಡು ಕನ್ನಡದ ಹಿರಿಮೆ ಸಾರಿತು
ಸಣ್ಣಗೆ ಸದ್ದು ಮಾಡಿದ ವಿವಾದಗಳು
ಯಾವುದೇ ಕ್ಷೇತ್ರವಾದರೂ ಅಲ್ಲೊಂದಿಷ್ಟು ವಿವಾದಗಳು ಇದ್ದೇ ಇರುತ್ತದೆ. ಇದರಿಂದ ಕನ್ನಡ ಚಿತ್ರರಂಗ ಕೂಡಾ ಹೊರತಾಗಿಲ್ಲ. ಈ ವರ್ಷವೂ ಕನ್ನಡ ಚಿತ್ರರಂಗದಲ್ಲಿ ಕೆಲವು ಕಾಂಟ್ರಾವರ್ಸಿಗಳು ಸದ್ದು ಮಾಡಿವೆ. ಆದರೆ, ಆ ವಿವಾದಗಳು ಯಾವುವು ತೀವ್ರ ಸ್ವರೂಪಕ್ಕೆ ಹೋಗದೇ, ಬೇಗನೇ ತಣ್ಣಗಾಗಿವೆ ಎಂಬುದು ಸಮಾಧಾನಕರ ಸಂಗತಿ
ನಿರ್ದೇಶಕರಾಗಿ ಗೆದ್ದ ವಿಜಯ್
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ವಿಭಿನ್ನ ಸಿನಿಮಾಗಳನ್ನು ಮಾಡಿ, ಆ್ಯಕ್ಷನ್ ಹೀರೋ ಎನಿಸಿಕೊಂಡಿದ್ದ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿದ “ಸಲಗ’ ಈ ವರ್ಷವೇ ತೆರೆಕಂಡು ಹಿಟ್‌ಲಿಸ್ಟ್ ಸೇರಿದೆ. ಈ ಮೂಲಕ ವಿಜಯ್ ಕೂಡಾ ನಿರ್ದೇಶಕರಾಗಿ 2021ರಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ನಿರ್ಮಾಪಕರಾಗಿ ಡಾಲಿ ಮೊಗದಲ್ಲಿ ಗೆಲುವಿನ ನಗು
ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿ ಬಂದ ಅನೇಕರು ನಿರ್ಮಾಪಕರಾಗಿದ್ದಾರೆ. ಅದೇ ರೀತಿ 2021ರಲ್ಲಿ ನಿರ್ಮಾಪಕರಾಗಿ ಗೆದ್ದ ನಟರಲ್ಲಿ ಡಾಲಿ ಧನಂಜಯ್ ಕೂಡಾ ಸಿಗುತ್ತಾರೆ. ತಮಗೆ ಗೆಲುವು ಹಾಗೂ ಜನಪ್ರಿಯತೆ ತಂದುಕೊಟ್ಟ “ಟಗರು’ ಚಿತ್ರದ ಡಾಲಿ ಪಾತ್ರವನ್ನೇ ತಮ್ಮ ಬ್ಯಾನರ್‌ಗೆ ಇಟ್ಟು “ಡಾಲಿ ಪಿಕ್ಚರ್’ನಡಿ ನಿರ್ಮಿಸಿದ “ಬಡವ ರಾಸ್ಕಲ್’ ಈಗ ಹಿಟ್‌ಲಿಸ್ಟ್ ಸೇರಿದೆ. ಈ ಮೂಲಕ 2021ರಲ್ಲಿ ಧನಂಜಯ್ ನಿರ್ಮಾಪಕರಾಗಿ ಗೆಲುವಿನ ನಗೆ ಬೀರಿದ್ದಾರೆ.
2021ರಲ್ಲಿ ತೆರೆಮೇಲೆ ಬಂದ ಪ್ರಮುಖ ನಾಯಕಿಯರು
ನಾಯಕಿ ನಟಿಯರ ವಿಚಾರದಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆಯಾಗಿದ್ದು ಭಾವನಾ ಮೆನನ್ ಅವರದ್ದು. ಅವರು ನಟಿಸಿದ 4 ಚಿತ್ರಗಳು 2021ರಲ್ಲಿ ತೆರೆಕಂಡವು. “ಭಜರಂಗಿ-2′, “ಶ್ರೀಕೃಷ್ಣಜಿಮೇಲ್.ಕಾಮ್”, “ಗೋವಿಂದ ಗೋವಿಂದ’ ಮತ್ತು ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರಗಳು ಬಿಡುಗಡೆಯಾದರೆ, ರಚಿತಾ ರಾಮ್ ನಟಿಸಿರುವ “100′ ಮತ್ತು “ಲವ್ ಯೂ ರಚ್ಚು’, ಸಂಜನಾ ಆನಂದ್ “ಸಲಗ’, “ಕುಷ್ಕಾ’ ,ನಿಶ್ವಿಕಾ ನಾಯ್ಡು ಅವರ “ರಾಮಾರ್ಜುನ’ ಮತ್ತು “ಸಖತ್’, ಅದಿತಿ ನಟಿಸಿರುವ “ಆನ’, ಆಶಿಕಾ ಅವರ “ಮದಗಜ’ ಚಿತ್ರಗಳು ಬಿಡುಗಡೆಯಾದವು. ಇನ್ನು, ಹರಿಪ್ರಿಯಾ ಸೇರಿದಂತೆ ಅನೇಕ ನಟಿಯರು 2021ರಲ್ಲಿ ಚಿತ್ರೀಕರಣದಲ್ಲಿ ಬಿಝಿಯಾಗಿದ್ದರು. ಅವರ ಸಿನಿಮಾಗಳು ಯಾವುವು ಬಿಡುಗಡೆಯಾಗಿಲ್ಲ.
ಅದೃಷ್ಟ ಪರೀಕ್ಷಿಸಿದ ಹೊಸಬರು
2021ರಲ್ಲಿ ಸ್ಟಾರ್‌ಗಳ ಬೆರಳೆಣಿಕೆಯಷ್ಟು ಸಿನಿಮಾಗಳು ಬಿಡುಗಡೆಯಾದರೆ ಮಿಕ್ಕಂತೆ ಚಿತ್ರಮಂದಿರಗಳನ್ನು ಅಲಂಕರಿಸಿದ್ದು ಹೊಸಬರೇ. ಪ್ರತಿ ವಾರ ಸಾಕಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯಾಗಿ ಅದೃಷ್ಟ ಪರೀಕ್ಷಿಸಿಕೊಂಡಿವೆ. ಆದರೆ, ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಹೊಸಬರ ಕೈ ಹಿಡಿದಿಲ್ಲ ಎಂಬುದು ಬೇಸರದ ವಿಚಾರ. “ಮಹಿಷಾಸುರ’, “ನಾನು ನನ್ನ ಜಾನು’, “ಮಂಗಳವಾರ ರಜಾದಿನ’, “ಅಣ್ತಮ್ಮ’, “ಸೈನೈಡ್ ಮಲ್ಲಿಕಾ’, “ಸಾಲ್ಟ್’, “ಸ್ಕೇರಿ ಫಾರೆಸ್ಟ್’, “ಟಾಮ್ ಅಂಡ್ ಜೆರ್ರಿ’, “ಗ್ರೂಫಿ’, “ಒಂದು ಗಂಟೆಯ ಕಥೆ’, “ಅನಘ’, “ಕೊಡೆ ಮುರುಗ’, “ರಿವೈಂಡ್’, “ಜೀವನ ನಾಟಕ ಸ್ವಾಮಿ’, “ಓಶೋ’… ಹೀಗೆ ಸಾಕಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯಾಗಿವೆ. ಇದರಲ್ಲಿ ಒಂದಷ್ಟು ಸಿನಿಮಾಗಳಿಗೆ ಮೆಚ್ಚುಗೆ ವ್ಯಕ್ತವಾದರೂ ಆರ್ಥಿಕವಾಗಿ ನಿರ್ಮಾಪಕರಿಗೆ ಖುಷಿ ನೀಡಿಲ್ಲ.
ಪಡೆದಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು
2021 ಕನ್ನಡ ಚಿತ್ರರಂಗದ ಶೋಕಕ್ಕೆ ಕಾರಣವಾಗಿದೆ. ಸಾಕಷ್ಟು ಕನಸುಗಳನ್ನು ಕಂಡಿದ್ದ, ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಿದ್ದ, ತಮ್ಮ ಅಭಿನಯದ ಮೂಲಕ ಕಲಾಪ್ರೇಮಿಗಳ ಪ್ರೀತಿ ಪಾತ್ರರಾಗಿದ್ದ ಅನೇಕರರು 2021ರಲ್ಲಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಒಂದಷ್ಟು ಮಂದಿಯನು ಕೊರೊನಾ ಮಹಾಮಾರಿ ಬಲಿಪಡೆದರೆ, ಇನ್ನು ಕೆಲವರು ಬೇರೆ ಬೇರೆ ಕಾರಣಗಳಿಂದ ನಿಧನ ಹೊಂದಿದ್ದಾರೆ.
ಅದರಲ್ಲಿ ಎಲ್ಲರನ್ನು ಕಾಡಿದ, ಕನ್ನಡ ನಾಡಿಗೆ ಸೂತಕದ ಛಾಯೆಗೆ ದೂಡಿದ ಸಾವೆಂದರೆ ಅದು ಪುನೀತ್ ರಾಜ್‌ಕುಮಾರ್ ಅವರ ಸಾವು. ದೈಹಿಕವಾಗಿ ಸದೃಢವಾಗಿದ್ದ, ಅನೇಕರಿಗೆ ಸಹಾಯ ಮಾಡುತ್ತಾ, ಸಾಮಾಜಿಕ ಕಳಕಳಿ ಮೆರೆಯುತ್ತಿದ್ದ ಪುನೀತ್ ಹೃದಯಾಘಾತದಿಂದ ಸಾವಿಗೀಡಾಗಿದ್ದನ್ನು ಇವತ್ತಿಗೂ ಕನ್ನಡ ನಾಡು ಒಪ್ಪುತ್ತಿಲ್ಲ. ಪುನೀತ್ ಸಾವಿನ ನಂತರ ಅವರು ಮಾಡಿದ ಒಂದೊಂದೇ ಸತ್ಕಾರ್ಯಗಳು ಬೆಳಕಿಗೆ ಬರುತ್ತಿದೆ. ಅವರ ಸಮಾಧಿ ಮುಂದೆ ಅಭಿಮಾನಿಗಳ ದಂಡು ಕಡಿಮೆಯಾಗಿಲ್ಲ. ರಾಜಕುಮಾರನನ್ನು ಕಳೆದುಕೊಂಡ ನೋವಲ್ಲಿ ಕರುನಾಡು ಇದೆ. ಇದರ ಜೊತೆಗೆ ಯುವ ನಟ ಸಂಚಾರಿ ವಿಜಯ್, ಕೋಟಿ ನಿರ್ಮಾಪಕ ಎಂದೇ ಕರೆಸಿಕೊಂಡಿರುವ ರಾಮು, ಕೆಸಿಎನ್ ಚಂದ್ರಶೇಖರ್, ಕುಪ್ಪುಸ್ವಾಮಿ, ಅಣ್ಣಯ್ಯ ಚಂದ್ರು, ಹಿರಿಯ ನಟರಾದ ಕೃಷ್ಣೇಗೌಡ, ಶಿವರಾಂ, ಸತ್ಯಜಿತ್, ಶಂಖನಾದ ಅರವಿಂದ್, ಹಿರಿಯ ನಟಿಯರಾದ ಜಯಂತಿ, ಬಿ.ಜಯಾ, ನಿರ್ದೇಶಕರಾದ ರೇಣುಕಾ ಶರ್ಮಾ, ಕೆ.ವಿ.ರಾಜು, ತಿಪಟೂರು ರಘು, ನಿರ್ಮಾಪಕ ಮಂಜುನಾಥ್, ನಿರ್ದೇಶಕ ಅಭಿರಾಮ್, ಡಿಸೈನರ್ ಮಸ್ತಾನ್, ಮೇಕಪ್ ಸೀನ, … ಹೀಗೆ ಅನೇಕರು ನಮ್ಮನ್ನು ಅಗಲಿದ್ದಾರೆ. ತಮ್ಮವರನ್ನು ಕಳೆದುಕೊಂಡ ಸೂತಕದ ಛಾಯೆ ಚಿತ್ರರಂಗದಲ್ಲಿ ಮನೆ ಮಾಡಿದೆ.