ಬೆಂಗಳೂರು: ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿದ್ದ ಕಳ್ಳನನ್ನು ಆಟೋಚಾಲಕರೊಬ್ಬರು ಚೇಸ್ ಮಾಡಿ ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆ ಮಾರತ್‌ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುನೇಕೊಳಾಲು ನಿವಾಸಿ ಹನುಮಂತು ( 28) ಸಾಹಸ ಮೆರೆದ ಚಾಲಕ. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಾರತ್‌ಹಳ್ಳಿ ಪೊಲೀಸರು, ಹತ್ತು ಸಾವಿರ ರೂ. ನಗದು ನೀಡಿ ಗೌರವಿಸಿದ್ದಾರೆ. ಮಹಿಳೆಯ ಸರ ಕದ್ದ ವಿಗ್ನೇಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಾಣಾಕ್ಷತೆಯಿಂದ ಕಳ್ಳನ ಹಿಡಿದ ಹನುಮಂತು!: ಡಿ.8ರಂದು ಮಾರತ್‌ಹಳ್ಳಿ ಮುಖ್ಯರಸ್ತೆ ಫುಟ್‌ಫಾತ್‌ನಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಆಕೆಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ ದುಷ್ಕರ್ಮಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗ ತೊಡಗಿದ್ದ. ಹಿಂದೇ ಆಟೋದಲ್ಲಿ ಬರುತ್ತಿದ್ದ ಹನುಮಂತು ಇದನ್ನು ಗಮಿಸಿದ್ದು. ದುಷ್ಕರ್ಮಿಯನ್ನು ಬೆನ್ನಟ್ಟಿದ್ದಾರೆ. ಸುಮಾರು ಎರಡು ಕಿ.ಲೋಮೀಟರ್‌ವರೆಗೂ ಆತನನ್ನು ಆಟೋದಲ್ಲಿ ಬೆನ್ನಟ್ಟಿದ್ದ ಹನುಮಂತು ಆತನನ್ನು ಹಿಂದಿಕ್ಕಿ ಆಟೋ ಅಡ್ಡಹಾಕಿದ್ದಾರೆ.
ದುಷ್ಕರ್ಮಿ ಆಟೋಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಕೂಡಲೇ ತಪ್ಪಿಸಿಕೊಳ್ಳಲು ಯತ್ನಿಸಿದ ಆತನನ್ನು ಹಿಡಿದು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸರು ಸರಕಳ್ಳನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಿಘ್ನೇಶ್ ಎಂದು ಹೆಸರು ಹೇಳಿ ಕೃತ್ಯ ಒಪ್ಪಿಕೊಂಡಿದ್ದಾನೆ. ಆತನ ಬಳಿಯಿದ್ದ ಅರ್ಧ ತುಂಡಾದ ಸರವನ್ನು ಮಹಿಳೆಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸರು ಹೇಳಿದರು.