ಮುಂಬಯಿ: ಈರುಳ್ಳಿ ರಫ್ತಿಗೆ ವಿಧಿಸಿರುವ ನಿಷೇಧವನ್ನು ತೆಗೆದು ಹಾಕುವಂತೆ ಕೋರಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಿದೆ ಎಂದು ಮುಖ್ಯ
ಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಹೇಳಿದ್ದಾರೆ.
ಈರುಳ್ಳಿ ರಫ್ತು ನಿಷೇ ಧಿಸುವ ನಿರ್ಧಾರದ ಬಗ್ಗೆ ರಾಜ್ಯ ಸಚಿವರು ಅಸಮಾಧಾನ ವ್ಯಕ್ತಪಡಿಸಿದ ಅನಂತರ ಠಾಕ್ರೆ ಅವರು ಕ್ಯಾಬಿನೆಟ್ ಸಭೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಕೇಂದ್ರ ಸರಕಾರದ ಈ ಕ್ರಮದ ವಿರುದ್ಧ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಬುಧವಾರ ಪ್ರತಿಭಟನೆಗಳು ಕೂಡ ನಡೆದಿವೆ. ಮಹಾರಾಷ್ಟ್ರದ ಹೆಚ್ಚಿನ ಸಂಖ್ಯೆಯ ಈರುಳ್ಳಿ ಬೆಳೆಗಾರರ ಮೇಲೆ ಪರಿಣಾಮ ಬೀರುವ ಈ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಕೋರಿ ತಮ್ಮ ಸರಕಾರ ಕೇಂದ್ರಕ್ಕೆ ಪತ್ರ ಬರೆಯಲಿದೆ
ಎಂದು ಸಿಎಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2018-19ರಲ್ಲಿ 21.83 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಮಹಾರಾಷ್ಟ್ರದಿಂದ ರಫ್ತು ಮಾಡಲಾಗಿದ್ದು, 2019-20ರಲ್ಲಿ ಹೊರಹೋಗುವ ಸಾಗಣೆ 18.50 ಲಕ್ಷ ಮೆಟ್ರಿಕ್ ಟನ್‌ನಷ್ಟಿದೆ ಎಂದು ಪ್ರಧಾನ ಕಾರ್ಯದರ್ಶಿ ಅನುಪ್ ಕುಮಾರ್ ಅವರು ಸಂಪುಟಕ್ಕೆ ತಿಳಿಸಿದರು. ಮುಂಬಯಿಯ ಜೆಎನ್‌ಪಿಟಿ ಬಳಿ ನಾಲ್ಕು ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಇದೆ. ಅಲ್ಲದೆ ರಾಜ್ಯದಿಂದ ಹೊರಟ ಈರುಳ್ಳಿ ತುಂಬಿದ 500 ಲಾರಿಗಳು ನೇಪಾಳ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಸಿಲುಕಿಕೊಂಡಿವೆ ಎಂದು ಸಚಿವ ಏಕನಾಥ್ ಶಿಂಧೆ ಅವರು ಮಾಹಿತಿ ನೀಡಿದ್ದಾರೆ.
ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಲಭ್ಯತೆ ಹೆಚ್ಚಿಸಲು ಮತ್ತು ಸರಕುಗಳ ಬೆಲೆಯನ್ನು ನಿಗ್ರಹಿಸಲು ಕೇಂದ್ರ ಸರಕಾರವು ಸೋಮವಾರ ತತ್‌ಕ್ಷಣವೇ ಜಾರಿಗೆ ಬರುವಂತೆ ಎಲ್ಲ ರೀತಿಯ ಈರುಳ್ಳಿಯನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ. ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಎಂವಿಎ ಸರಕಾರದ ಘಟಕವಾದ ಕಾಂಗ್ರೆಸ್ ಬುಧವಾರ ಕೇಂದ್ರದ ನಿರ್ಧಾರದ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದೆ.
ರಾಜ್ಯದ ರೈತರು ಕೋವಿಡ್ ನಷ್ಟದಿಂದ ಚೇತರಿಸಿಕೊಳ್ಳಲು ಪ್ರಾರಂಭಿಸಿದ್ದರೂ ಮೋದಿ ಸರಕಾರವು ಅವರ ಭರವಸೆಯನ್ನು ಮತ್ತೂಮ್ಮೆ ಹುದುಗಿಸಿದೆ. ಈರುಳ್ಳಿ ಬೆಳೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುತ್ತಿರುವ ಸಮಯದಲ್ಲಿ ಮೋದಿ ಸರಕಾರ ಇದ್ದಕ್ಕಿದ್ದಂತೆ ಅದರ ರಫ್ತು ನಿಷೇಧಿಸಲು ನಿರ್ಧರಿಸಿದೆ. ಇದರಿಂದ ರೈತರಿಗೆ ಭಾರೀ ನಷ್ಟವಾಗಿದೆ ಎಂದು ರಾಜ್ಯ ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ.