ದಾವಣಗೆರೆ: ರಾಜ್ಯ ಸರ್ಕಾರದ ಕೆರೆ ಸಂಜೀವಿನಿ ಯೋಜನೆಯಡಿ ಬೆಳವನೂರು, ತುರ್ಚಘಟ್ಟ ಸೇರಿದಂತೆ ಈ ಭಾಗದ ಕೆರೆಗಳ ಅಭಿವೃದ್ಧಿಗೆ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು. ಭಾನುವಾರ ತಾಲೂಕಿನ ಬೆಳವನೂರು ಗ್ರಾಮದ ಕೆರೆ ಹೂಳು ಎತ್ತುವ ಕಾಮಗಾರಿಗೆ ಚಾಲನೆನೀಡಿದ ನಂತರ ಮಾತನಾಡಿದರು.
ಬೆಳವನೂರು ಕೆರೆ 32 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. 12 ಎಕರೆ ಜಾಗ ಒತ್ತುವರಿಮಾಡಲಾಗಿತ್ತು. ಇದೀಗ ರೈತರೇ ಸ್ವತಃ ಕೆರೆ ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿಗೆ ಅನುವುಮಾಡಿಕೊಟ್ಟಿದ್ದಾರೆ. ಈಗ 18 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ರೈತರು ಸಹ ಇದಕ್ಕೆ ಸಹಕಾರ ಕೊಡಬೇಕು.
ಕೆರೆಯ ಹೂಳನ್ನು ತಮ್ಮ ತಮ್ಮ ಹೊಲಗಳಿಗೆ ಸಾಗಿಸಿಕೊಳ್ಳುವ ಮೂಲಕ ಕೆರೆ ಹೂಳೆತ್ತುವ ಕೆಲಸ ಪೂರ್ಣಗೊಳ್ಳಲು ನೆರವಾಗಬೇಕು ಎಂದರು. ಕೆರೆಯ ಸಂಪೂರ್ಣ ಅಭಿವೃದ್ಧಿ ಕೈಗೊಳ್ಳುವ ಉದ್ದೇಶ ಸಹ ಇದೆ. 1.5 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಸರ್ಕಾರ ಸಮ್ಮತಿ ಸೂಚಿಸಿದೆ. ಶೀಘ್ರದಲ್ಲಿಯೇ ಕೆರೆಯ ಸಂಪೂರ್ಣ ಅಭಿವೃದ್ಧಿ ಮಾಡಿ, ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗುವುದು.
ಇದೇ ಕೆರೆಯಿಂದ ದಾವಣಗೆರೆಯ ಕೆಲ ಭಾಗಗಳಿಗೂ ನೀರು ಒದಗಿಸುವ ಉದ್ದೇಶ ಇದೆ ಎಂದು ತಿಳಿಸಿದರು. ತುರ್ಚಘಟ್ಟ ಕೆರೆ ಅಭಿವೃದ್ಧಿಗೆ 1 ಕೋಟಿ ಬಿಡುಗಡೆ ಮಾಡಲಾಗಿದೆ. 22 ಕೆರೆ ತುಂಬಿಸುವ ಮಾದರಿಯಲ್ಲಿ ಯಾವುದೇ ಕೆರೆ ಅಭಿವೃದ್ಧಿ ಮಾಡಲ್ಲ. ಸ್ವಾಭಾವಿಕವಾಗಿ ನೀರು ಹರಿದುಬಂದು ತುಂಬುವಂತೆ ಕೆರೆಗಳ ಅಭಿವೃದ್ಧಿ ಮಾಡಲಾಗುವುದು.
ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಇದಕ್ಕಾಗಿ ನಮ್ಮ ಸರ್ಕಾರ ಹಿಂದೆ ಮುಂದೆ ನೋಡದೆ ಅನುದಾನ ನೀಡುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಉಮಾ ರಮೇಶ್, ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ,
ಜಿಲ್ಲಾ ಪಂಚಾಯತ್ ಸದಸ್ಯ ಜಿ.ಸಿ. ನಿಂಗಪ್ಪ, ತಾಲೂಕು ಪಂಚಾಯತ್ ಸದಸ್ಯ ಮಂಜಪ್ಪ, ಬೆಳವನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಲಮ್ಮ, ಎಪಿಎಂಸಿ ಸದಸ್ಯ ಈರಣ್ಣ, ಮುಖಂಡರಾದ ಬಸವರಾಜ, ಚಂದ್ರಪ್ಪ, ರತ್ನಬಾಯಿ, ಉಜ್ಜಪ್ಪ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ಎಲ್.ಎಸ್. ಪ್ರಭುದೇವ್ ಇತರರು ಈ ವೇಳೆ ಹಾಜರಿದ್ದರು.