Advertisement

ಖುಲಾಸೆಗೊಂಡ ಕ್ರಿಮಿನಲ್‌ ಪ್ರಕರಣಗಳಿಗೆ ಮರುಜೀವ

10:54 PM Jan 19, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ಕಾಯ್ದೆಗಳಡಿ ದಾಖಲಾಗಿ ಖುಲಾಸೆಗೊಂಡ ಕ್ರಿಮಿನಲ್‌ ಪ್ರಕರಣಗಳಿಗೆ ಮತ್ತೆ ಜೀವ ಸಿಗಲಿದೆ. ಸುಪ್ರೀಂಕೋರ್ಟ್‌ ಆದೇಶಕ್ಕೆ ತದ್ವಿರುದ್ಧವಾಗಿ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೇರಿ ವಿಶೇಷ ಕಾಯ್ದೆಗಳಡಿ ದಾಖಲಾಗಿ ಖುಲಾಸೆಗೊಂಡ ಕ್ರಿಮಿನಲ್‌ ಪ್ರಕರಣಗಳಿಗೆ “ಮರು ಪರಿಶೀಲನೆಯಿಂದ’ ವಿನಾಯ್ತಿ ನೀಡಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್‌ ಪಡೆದಿದೆ.

Advertisement

ಅದರಂತೆ, ಎಲ್ಲಾ ಖುಲಾಸೆಗೊಂಡ ಕ್ರಿಮಿನಲ್‌ ಪ್ರಕರಣಗಳ ಜತೆಗೆ ವಿಶೇಷ ಕಾಯ್ದೆಗಳಡಿ ಸರ್ಕಾರದ ವಿವಿಧ ಇಲಾಖೆ, ಸಮಿತಿಗಳು, ನಿಗಮಗಳು, ಲೋಕಾ ಯುಕ್ತ ಸಂಸ್ಥೆಗಳಲ್ಲಿ ದಾಖಲಾಗಿ ಖುಲಾಸೆ ಗೊಂಡ ಪ್ರಕರ ಣ ಗಳು ಮರು ಪರಿಶೀಲನೆಗೊಳಪಡಲಿವೆ. ಹಾಗಾಗಿ, 2014ರ ಅ.20ರಿಂದ ಇಲ್ಲಿವರೆಗೆ ವಿಶೇಷ ಕಾಯ್ದೆಗಳಡಿ ದಾಖಲಾಗಿ ಖುಲಾಸೆಗೊಂಡಿರುವ ಕ್ರಿಮಿನಲ್‌ ಪ್ರಕರಣಗಳನ್ನು “ರಾಜ್ಯ ಮಟ್ಟದ ಕ್ರಿಮಿನಲ್‌ ಖುಲಾಸೆ ಪರಿಶೀಲನಾ ಸಮಿತಿ’ಯು ಪರಿಶೀಲನೆಗೆ ಸಜ್ಜಾಗಿದೆ.

ಕ್ರಿಮಿನಲ್‌ ಪ್ರಕರಣಗಳಿಗೆ ಮರು ಪರಿಶೀಲನೆಯಿಂದ ವಿನಾಯ್ತಿ ನೀಡಿ 2015ರ ಆ.10ರಂದು ಹೊರಡಿಸಿದ್ದ ಆದೇಶವನ್ನು ವಾಪಸ್‌ ಪಡೆದುಕೊಂಡಿರುವ ರಾಜ್ಯ ಸರ್ಕಾರ, 2014ರ ಆ.20ರ ಆದೇಶದಂತೆ ಎಲ್ಲಾ ಕ್ರಿಮಿನಲ್‌ ಪ್ರಕರಣಗಳ ಜತೆಗೆ ವಿಶೇಷ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಮರು ಪರಿಶೀಲನೆ ಗೊಳಪಡಿಸುವ ಸಂಬಂಧ 2019ರ ಡಿ.23ರಂದು ಮಾರ್ಪ ಡಿತ ಆದೇಶ ಹೊರಡಿಸಲಾಗಿದೆ. ಆ ಮಾರ್ಪ ಡಿತ ಆದೇಶದ ಪ್ರತಿಯನ್ನು ಪ್ರಮಾಣ ಪತ್ರದೊಂದಿಗೆ 2020ರ ಜ.7ರಂದು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.

ಖುಲಾಸೆಗೊಂಡ ಪ್ರಕರಣಗಳನ್ನು ಮರು ಪರಿಶೀಲನೆಗೊಳಪಡಿಸುವ ಸಂಬಂಧ ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ಪಾಲನೆ ಮಾಡುತ್ತಿಲ್ಲ ಎಂದು ದೂರಿ ವಕೀಲ ಎಸ್‌. ಉಮಾಪತಿ ಎಂಬುವರು ಹೈಕೋರ್ಟ್‌ನಲ್ಲಿ ದಾಖಲಿಸಿರುವ ಸಾರ್ವಜನಿಕ ಹಿತಾ ಸಕ್ತಿ ವಿಚಾರಣೆ ವೇಳೆ “ವಿಶೇಷ ಕಾಯ್ದೆಗಳಡಿ ದಾಖಲಾಗಿ ಖುಲಾಸೆಗೊಂಡ ಪ್ರಕರಣಗಳಿಗೆ ಮರು ಪರಿಶೀಲನೆ ಯಿಂದ ವಿನಾಯ್ತಿ ನೀಡಿರುವ ಅಂಶವನ್ನು ಗಮನಿಸಿದ್ದ ಹೈಕೋರ್ಟ್‌, ಸುಪ್ರೀಂಕೋರ್ಟ್‌ ಆದೇಶಕ್ಕೆ ತದ್ವಿರುದ್ಧ ವಾಗಿ ರಾಜ್ಯ ಸರ್ಕಾರ ತೀರ್ಮಾನ ತೆಗೆದು ಕೊಂಡಿದ್ದು ಹೇಗೆ? ಎಂದು ಪ್ರಶ್ನಿಸಿತ್ತು. ಆಗ ಹಳೆಯ ಆದೇಶ ವಾಪಸ್‌ ಪಡೆದು ಹೊಸದಾಗಿ ಮಾರ್ಪಡಿತ ಆದೇಶ ಹೊರಡಿಸಲು ಸರ್ಕಾರ ಕಾಲಾವಕಾಶ ಕೇಳಿತ್ತು. ಅದ ರಂತೆ ಇದೀಗ ಹೊಸದಾಗಿ ಆದೇಶ ಹೊರಡಿಸಲಾಗಿದೆ.

ಸುಪ್ರೀಂ ಹೇಳಿದ್ದೇನು?: ದೇಶದಲ್ಲಿ ಕ್ರಿಮಿನಲ್‌ ಪ್ರಕರ ಣ ಗಳ ಖುಲಾಸೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಸ್ಟೇಟ್‌ ಆಫ್ ಗುಜರಾತ್‌ ಆ್ಯಂಡ್‌ ಕಿಶನ್‌ಭಾಯಿ ಹಾಗೂ ಇತರರ ಪ್ರಕರಣದಲ್ಲಿ 2014ರ ಜ.7ರಂದು ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. “ವಿಚಾರಣಾ ನ್ಯಾಯಾಲಯಗಳಲ್ಲಿ ಪ್ರಕರಣವನ್ನು ನಿರ್ವಹಿಸುವ ವೇಳೆ ಪ್ರಾಸಿಕ್ಯೂಷನ್‌ ವತಿಯಿಂದ ಆಗಿರುವ ವೈಫ‌ಲ್ಯಗಳನ್ನು ಆಧರಿಸಿ ಖುಲಾಸೆಗೊಂಡ ಎಲ್ಲ ಪ್ರಕರಣಗಳನ್ನು ಮರುಪರಿಶೀಲನೆಗೊಳಪಡಿಸಬೇಕು. ಇದಕ್ಕಾಗಿ ಪೊಲೀಸ್‌ ಹಾಗೂ ಅಭಿಯೋಜನಾ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ಗಳನ್ನು ರಚಿಸಬೇಕು. ಸಮಿತಿಗಳು ನೀಡುವ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಎಲ್ಲ ರಾಜ್ಯಗಳಿಗೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿತ್ತು.

Advertisement

ಮೂರು ಹಂತದ ಸಮಿತಿಗಳು: ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಖುಲಾಸೆಗೊಂಡ ಪ್ರಕರಣಗಳ ಮರು ಪರಿಶೀಲನೆಗೆ ಸರ್ಕಾರ 3 ಹಂತದ “ಖುಲಾಸೆ ಮರು ಪರಿಶೀಲನಾ ಸಮಿತಿಗಳನ್ನು’ ರಚಿ ಸಿತ್ತು. ಅದ ರಂತೆ, ರಾಜ್ಯಮಟ್ಟದ ಕ್ರಿಮಿನಲ್‌ ಖುಲಾಸೆ ಪರಿಶೀಲನಾ ಸಮಿತಿ, ವಲಯ ಮಟ್ಟದ ಕ್ರಿಮಿನಲ್‌ ಖುಲಾಸೆ ಪರಿಶೀಲನೆ ಸಮಿತಿ, ಜಿಲ್ಲಾ ಮಟ್ಟದ ಕ್ರಿಮಿನಲ್‌ ಖುಲಾಸೆ ಪರಿಶೀಲನೆ ಸಮಿತಿಗಳನ್ನು ರಚಿಸಲಾಗಿತ್ತು. ರಾಜ್ಯ ಮಟ್ಟದ ಸಮಿತಿ ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಜಿಲ್ಲಾ ಮತ್ತು ವಲಯದ ಮಟ್ಟದ ಸಮಿತಿಗಳು ಪ್ರತಿ ತಿಂಗಳು ಸಭೆ ನಡೆಸಿ ಖುಲಾಸೆ ಪ್ರಕರಣಗಳ ಬಗ್ಗೆ ಮರು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿ ಪೊಲೀಸ್‌ ಇಲಾಖೆಗೆ ವರದಿ ಸಲ್ಲಿಸಬೇಕು.

ಸಮಿತಿಗಳ ಕಾರ್ಯಪ್ರಗತಿ: ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಮೂರು ಹಂತದ ಖುಲಾಸೆ ಪರಿಶೀಲನಾ ಸಮಿತಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ, ವಲಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರು ಹಂತದ ಸಮಿತಿಗಳನ್ನು ರಚಿಸಲಾಗಿದೆ. 2015ರಿಂದ ಈವರೆಗೆ ರಾಜ್ಯ ಮಟ್ಟದ 8 ವಲಯ ಮಟ್ಟದ 143 ಹಾಗೂ ಜಿಲ್ಲಾ ಮಟ್ಟದ 697 ಪರಿಶೀಲನಾ ಸಭೆ ನಡೆಸಲಾಗಿದೆ. ಈ ಅವಧಿಯಲ್ಲಿ ವಲಯ ಮಟ್ಟದ 19,574, ಜಿಲ್ಲಾ ಮಟ್ಟದ 67,605 ಸೇರಿ ರಾಜ್ಯ ಮಟ್ಟದಲ್ಲಿ ಒಟ್ಟು 86, 187 ಖುಲಾಸೆ ಪ್ರಕರಣಗಳ ಮರು ಪರಿಶೀಲನೆ ನಡೆಸಲಾಗಿದೆ’. ಈ ಅವಧಿಯಲ್ಲಿ ಕರ್ತವ್ಯ ಲೋಪವೆಸಗಿದ ವಲಯ ಮಟ್ಟದಲ್ಲಿ 1,271 ಹಾಗೂ ಜಿಲ್ಲಾ ಮಟ್ಟದಲ್ಲಿ 974 ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಯಾವುದೇ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ಸರಿ ಇದ್ದು, ನ್ಯಾಯಾಲಯಗಳಿಂದ ವ್ಯತಿರಿಕ್ತ ತೀರ್ಪುಗಳು ಬಂದಾಗ ಮೇಲ್ಮನವಿ ಸಲ್ಲಿಸಿ ನೊಂದವರಿಗೆ ನ್ಯಾಯ ಒದಗಿಸುವುದು “ಅಭಿಯೋಜನಾಲಯ’ದ (ಪ್ರಾಸಿಕ್ಯೂಷನ್‌) ಮುಖ್ಯ ಉದ್ದೇಶ. ನೊಂದವರಿಗೆ ನ್ಯಾಯ ಕೊಡಿಸುವ ದೃಷ್ಟಿಯಿಂದ ಅವಶ್ಯಕ ಎಂದು ಕಂಡು ಬಂದಲ್ಲಿ ಪ್ರಕರಣಗಳ ಮರು ಪರಿಶೀಲನೆ ಉತ್ತಮವಾದದ್ದು.
-ಬಿ.ಎಸ್‌. ಪಾಟೀಲ್‌, ಸರ್ಕಾರಿ ಅಭಿಯೋಜಕರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next