Advertisement

ರೋಗಗ್ರಸ್ಥ ಕೈಗಾರಿಕೆ ಪುನಶ್ಚೇತನಗೊಳಿಸಿ

10:55 AM Aug 25, 2019 | Suhan S |

ಗದಗ: ನಿರುದ್ಯೋಗ ಸಮಸ್ಯೆ ಎಂಬುದು ವಿಶ್ವಕ್ಕೆ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಆದರೆ, ಕೈಗಾರಿಕೆ ಮತ್ತು ಉತ್ಪಾದನಾ ವಲಯ ಹೆಚ್ಚುವುದರಿಂದ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೋಗಗ್ರಸ್ಥ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಬೇಕಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.

Advertisement

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್‌ ಹಾಗೂ ನಬಾರ್ಡ್‌ ಆಶ್ರಯದಲ್ಲಿ ಆ. 27ರ ವರೆಗೆ ಐದು ದಿನಗಳ ಕಾಲ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿರುವ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟದ ‘ಗದಗ ಉತ್ಸವ-2019’ದಲ್ಲಿ ಅವರು ಮಾತನಾಡಿದರು.

ಇಂದು ಬಹುತೇಕ ಕೈಗಾರಿಕೆಗಳು ರೋಗಗ್ರಸ್ಥವಾಗಿವೆ. ಸರ್ಕಾರದಿಂದ ಜಾಗ ಮತ್ತು ಸಬ್ಸಿಡಿ ನೀಡುವ ಕಾರಣದಿಂದ ಉದ್ಯಮ ಆರಂಭಿಸುವ ಬದಲು ಉತ್ಪಾದನೆಗೆ ಬೇಡಿಕೆ, ಕಚ್ಚಾ ವಸ್ತು ಲಭ್ಯತೆ, ಅವುಗಳ ಮಾರಾಟಕ್ಕೆ ವ್ಯವಸ್ಥೆ ಸೇರಿ ಹಲವುಗಳ ಬಗ್ಗೆ ಪೂರ್ವಾಪರ ಯೋಚನೆ ಮತ್ತು ಯೋಜನೆ ಹಾಕಿಕೊಂಡಾಗ ಮಾತ್ರ ಓರ್ವ ಯಶಸ್ವಿ ಉದ್ಯಮಿಯಾಗಲು ಸಾದ್ಯ ಎಂದರು.

ಯುವಪೀಳಿಗೆ ಹೊಸ ಉದ್ಯಮ ಆರಂಭಕ್ಕೆ ನಿಗದಿಪಡಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ಸರಳೀಕರಣಗೊಳಿಸಬೇಕು. ಗದಗ ಜಿಲ್ಲೆಗೆ ಪರಿಸರ ಪೂರಕ ಮತ್ತು ಕೃಷಿ ಆಧಾರಿತ ಹೊಸ ಹೊಸ ಉದ್ಯಮಗಳು, ಕೈಗಾರಿಕೆಗಳು ಬರಬೇಕು. ಜನತೆ ಇಂದು ಗುಣಮಟ್ಟ ಮತ್ತು ಸ್ಪರ್ಧಾತ್ಮಕ ದರಕ್ಕೆ ಆದ್ಯತೆ ನೀಡುತ್ತಿದ್ದು, ಉದ್ಯಮಿದಾರರು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಕೈಗಾರಿಕಾ ವಸ್ತು ಪ್ರದರ್ಶನದ ಮೂಲಕ ಸಣ್ಣ ಹಾಗೂ ಗುಡಿ ಕೈಗಾರಿಕೆ ಉತ್ಪನ್ನ ಮತ್ತು ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಉತ್ತಮ ವೇದಿಕೆ ಸಿಗಲಿದೆ ಎಂದರು.

ಜಿ.ಪಂ. ಅಧ್ಯಕ್ಷ ಎಸ್‌.ಪಿ. ಬಳಿಗಾರ ಮಾತನಾಡಿ, ಒಂದು ಪ್ರದೇಶ ಅಭಿವೃದ್ಧಿಯಲ್ಲಿ ಕೈಗಾರಿಕೆಗಳು ಮಹತ್ತರ ಪಾತ್ರವಹಿಸುತ್ತವೆ. ಗದಗನಲ್ಲಿ ಕೈಗಾರಿಕೆಗೆ ಅಗತ್ಯವಿರುವ 214 ಎಕರೆ ಜಮೀನನ್ನು ಖರೀದಿಸುವ ಪ್ರಕ್ರಿಯೆ ಸರ್ಕಾರದಲ್ಲಿ ಶೀಘ್ರ ಪೂರ್ಣಗೊಳ್ಳಲಿ ಎಂದರು.

Advertisement

ಜ| ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಉದ್ಘಾಟಿಸಿದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಬಿ. ಸುರಕೋಡ ಅಧ್ಯಕ್ಷತೆ ವಹಿಸಿದ್ದರು.

ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಚೇರಮನ್‌ ಆನಂದ ಎಲ್. ಪೊತ್ನೀಸ್‌, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಟಿ. ದಿನೇಶ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ಶರಣಬಸಪ್ಪ ಕುರಡಗಿ, ಅರವಿಂದ ಪಟೇಲ, ಆರ್‌.ಬಿ. ದಾನಪ್ಪಗೌಡ್ರ, ಗೌರವ ಕಾರ್ಯದರ್ಶಿ ಮಧುಸೂದನ ಪುಣೇಕರ, ಈಶ್ವರಪ್ಪ ಮುನವಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next