Advertisement

14 ಕಲ್ಯಾಣಿಗಳ ಪುನಶ್ಚೇತನಕ್ಕೆ ಚಾಲನೆ

05:18 PM Feb 24, 2020 | Suhan S |

ರಾಮನಗರ: ಅಂತರ್ಜಲ ವೃದ್ಧಿಗೆ ರಾಮನಗರ ತಾಲೂಕಿನ ಗ್ರಾಮ ಪಂಚಾಯ್ತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಲ್ಯಾಣಿಗಳು, ಗೋಕಟ್ಟೆಗಳನ್ನು ಗುರುತಿಸಿ ಅಭಿವೃದ್ಧಿ ಹಾಗೂ ಪುನರ್‌ಸ್ಥಾಪನೆ ಕಾರ್ಯಕ್ಕೆ ಮುಂದಾಗಿದ್ದಾರೆ.

Advertisement

ರಾಜ್ಯ ಸರ್ಕಾರ 2019ನೇ ವರ್ಷವನ್ನು ಜಲವರ್ಷ ಎಂದು ನಾಮಕರಣ ಮಾಡಿ ಜಲಾಮೃತ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ರಾಮನಗರ ತಾಲೂಕಿನ ಗ್ರಾಮ ಪಂಚಾಯ್ತಿಗಳ ಪಿಡಿಒಗಳು ಈ ಯೋಜನೆಯನ್ನು ಹೊರತುಪಡಿಸಿ 14 ಕಲ್ಯಾಣಿಗಳನ್ನು ಗುರುತಿಸಿ 4 ಕಲ್ಯಾಣಿಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ದಾನಿಗಳು, ರೈತರ ನೆರವಿನಲ್ಲಿ ತಮ್ಮ ವ್ಯಾಪ್ತಿಯ ಕಲ್ಯಾಣಿಗಳ ದುರಸ್ಥಿಗೆ ಮುಂದಾಗಿದ್ದಾರೆ. ನರೇಗಾ ಯೋಜನೆಯಡಿ ಒಂದು ಕಲ್ಯಾಣಿಯನ್ನು ನಿರ್ಮಾಣ ಮಾಡಿಯಾಗಿದೆ.

ಅಂತರ್ಜಲ ಕಾಪಾಡಿಕೊಳ್ಳಲು ಕಲ್ಯಾಣಿಗಳನ್ನು ನಿರ್ಮಿಸುವ ಪರಿಪಾಠವಿತ್ತು. ಇವು ಸಾಂಪ್ರದಾಯಿಕ ನೀರಿನ ಮೂಲಗಳಾಗಿದ್ದವು. ಕೊಳವೆ ಬಾವಿಗಳ ನಿರ್ಮಾಣ ನಂತರ ಕಲ್ಯಾಣಿಗಳನ್ನು ಸಂರಕ್ಷಿಸುವುದು ನಿಂತು ಹೋಯಿತು. ಕೊಳವೆ ಬಾವಿಗಳ ಮೂಲಕ ನೀರು ಹೀರಿಕೊಂಡ ನಂತರ ಎಚ್ಚೆತ್ತು ಕೊಂಡ ಸ್ಥಳೀಯ ಸಂಸ್ಥೆಗಳು ಕಲ್ಯಾಣಿಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ಈ ವಿಚಾರದಲ್ಲಿ ವಿಶೇಷ ಆಸಕ್ತಿವಹಿಸಿರುವ ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾಣಕಲ್‌ ನಟರಾಜ್‌ ನೇತೃತ್ವದಲ್ಲಿ ದೊಡ್ಡಗಂಗವಾಡಿ, ವಿಭೂತಿಕೆರೆ, ಬಿಳಗುಂಬ ಗ್ರಾಮಗಳಲ್ಲಿರುವ ಕಲ್ಯಾಣಿಗಳ ದುರಸ್ಥಿ ಬಹುತೇಕ ಪೂರ್ಣಗೊಳಿಸಿದ್ದಾರೆ.

150 ಮಂದಿ ಶ್ರಮದಾನ: ದೊಡ್ಡಗಂಗವಾಡಿ ಗ್ರಾಮದಲ್ಲಿ ಕೆಂಗಲ್‌ ಹನುಮಂತಯ್ಯನವರು ನಿರ್ಮಿಸಿದ್ದು, ಎನ್ನಲಾದ ಕಲ್ಯಾಣಿಯಲ್ಲಿ ಮುಚ್ಚಿ ಹೋಗಿತ್ತು. ಇಲ್ಲಿ ಕಲ್ಯಾಣಿ ಇದೆಯೇ ಎಂಬ ಅನುಮಾನ ಪಡುವ ಪರಿಸ್ಥಿತಿ ಇತ್ತು. ಜನವರಿ ತಿಂಗಳಲ್ಲಿ ಹ್ಯಾಂಡ್ಸ್‌ ಆನ್‌ ಮತ್ತು ಗುಡೇರಾ ಎಂಬ ಯುವ ಸಮುದಾಯದ ಗುಂಪಿನ ಪ್ರಮುಖರಾದ ರಘುನಂದನ್‌, ಕೃತಿಕ ಮತ್ತು ಸದಸ್ಯರು ಟೊಯೋಟ ಸಂಸ್ಥೆಯ ಸಿಬ್ಬಂದಿ ಹೀಗೆ ಒಟ್ಟು 150 ಸ್ವಯಂ ಸೇವಕರು ಶ್ರಮದಾನ ನೀಡಿದಾಗ ಅಲ್ಲಿ ಕಲ್ಯಾಣಿ ಇರುವುದು ಸ್ಟಷ್ಟವಾಗಿದೆ. ಹೂಳು ಎತ್ತಲು ಜೆಸಿಬಿಯಂತ್ರಗಳನ್ನು ಬಳಸಲಾಗಿದೆ. ಸುತ್ತಮುತ್ತಲಿನ ರೈತರು ಟ್ರಾಕ್ಟರ್‌ಗಳಲ್ಲಿ ಹೂಳು ಹೊತ್ತೂಯ್ದರು. ಸ್ಥಳೀಯ ದಾನಿಗಳು, ತಾಪಂ ಅಧ್ಯಕ್ಷರು ಹಾಗೂ ಜಿಪಂ ಹಿರಿಯ ಅಧಿಕಾರಿಗಳು ತಮ್ಮ ವೈಯಕ್ತಿಕ ನೆರವು ನೀಡಿ ನಾಲ್ಕು ದಿನಗಳಲ್ಲಿ ಕಲ್ಯಾಣಿಯ ಹೂಳೆತ್ತಿದ್ದಾರೆ.

ಗ್ರಾಪಂ ಸಿಬ್ಬಂದಿಯಿಂದ ಶ್ರಮದಾನ: ತಾಲೂಕಿನ ಕೂಟಗಲ್‌ ಹೋಬಳಿ ಬಿಳಗುಂಬ ಪಂಚಾಯ್ತಿ ವ್ಯಾಪ್ತಿಯ ಕುರುಬರಹಳ್ಳಿ ಕಲ್ಯಾಣಿ ಕೂಡ ಗಿಡಗಂಟೆಗಳಿಂದ ಆವೃತ್ತವಾಗಿ ಕಲ್ಯಾಣಿಯ ಅಸ್ತಿತ್ವವನ್ನೇ ಮುಚ್ಚಿ ಹಾಕಿತ್ತು. ಗ್ರಾಮಪಂಚಾಯ್ತಿ ಸಿಬ್ಬಂದಿಗಳು ಜೊತೆಗೂಡಿ ಶ್ರಮದಾನ ನೀಡಿ ಗಿಡಗಂಟೆಗಳನ್ನು ಕಿತ್ತು ಹಾಕಿದ್ದಾರೆ. ಕಲ್ಯಾಣಿಯಲ್ಲಿ ನೀರು ತುಂಬುವ ಮುನ್ನ ಕೆಲವು ಕಾಮಗಾರಿಗಳು ಅಗತ್ಯವಿದೆ. ನರೇಗಾ ಯೋಜನೆಯಲ್ಲಿ ಸಮುದಾಯ ಕಾರ್ಯಕ್ರಮದಲ್ಲಿ ಈ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶ ಗ್ರಾಮ ಪಂಚಾಯ್ತಿಗಿದೆ.

Advertisement

ಬ್ಯಾಲೆಕೊಳದೊಡ್ಡಿ ಕಲ್ಯಾಣಿಯ ದುರಸ್ಥಿ: ವಿಭೂತಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಲೆಕೊಳೆದೊಡ್ಡಿಯಲ್ಲಿ ಬಸವೇಶ್ವರ ಕಲ್ಯಾಣಿಯನ್ನು ಗ್ರಾಮ ಪಂಚಾಯ್ತಿ ಸಿಬ್ಬಂದಿ ಮತ್ತು ಗ್ರಾಮದ ಆಸಕ್ತ ನಾಗರಿಕರು ಸ್ವತ್ಛಗೊಳಿಸಿದ್ದಾರೆ. ಹೂಳು ಎತ್ತಿರುವುದರಿಂದ ಕಲ್ಯಾಣಿಯ ಸ್ವರೂಪ ಗೋಚರವಾಗಿದೆ. ಜೆಸಿಬಿ ಯಂತ್ರದ ಮೂಲಕ ಹೂಳೆತ್ತಲಾಗಿದೆ.

ಯೋಜನೆಯಡಿ ಕಲ್ಯಾಣಿ ನಿರ್ಮಾಣ: ತಾಲೂಕಿನ ಕೈಲಾಂಚ ಹೋಬಳಿ ಕವಣಾಪುರ ಗ್ರಾಮದಲ್ಲಿದ್ದ ಗೋಕಟ್ಟೆ ಕಲ್ಯಾಣಿಯಾಗಿ ನರೇಗಾ ಯೋಜನೆಯಡಿ ನಿರ್ಮಾಣವಾಗಿದೆ. ಕಲ್ಯಾಣಿಯಲ್ಲಿ ನೀರನ್ನು ತುಂಬಿಸಿದ್ದು, ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.

 ಕಲ್ಯಾಣಿಗಳು ಗುರುತಿಸಿರುವುದೆಲ್ಲಿ ? : ಬೈರಮಂಗಲ ಗ್ರಾಮದ ಮಠ ಕಲ್ಯಾಣಿ, ಕೈಲಾಂಚದ ಹಾಸ್ಟೆಲ್‌ ಮುಂದೆ ಇರುವ ಕಲ್ಯಾಣಿ, ಹೊನ್ನಗಂಗ ಛತ್ರದ ಕಲ್ಯಾಣಿ, ಎಸ್‌ ಆರ್‌ ಎಸ್‌ ಬೆಟ್ಟದಲ್ಲಿನ ಸೊಣೆ ಮತ್ತು ಕಲ್ಯಾಣಿ, ವಡ್ಡರಹಳ್ಳಿ , ಅರೇಹಳ್ಳಿ, ಕೆಂಪನದೊಡ್ಡಿ, ಅಂಕನಹಳ್ಳಿ, ತಡಿಕವಾಗಿಲು, ತಾಳವಾಡಿ, ಸುಗ್ಗನಹಳ್ಳಿ, ಜಾಲಮಂಗಲ, ಚಾಮನಹಳ್ಳಿ ಗ್ರಾಮಗಳಲ್ಲಿ ಕಲ್ಯಾಣಿಗಳನ್ನು ಗುರುತಿಸಲಾಗಿದೆ.

ತಾಲೂಕಿನಲ್ಲಿ ಕಲ್ಯಾಣಿಗಳ ಅಭಿವೃದ್ಧಿಗೆ ಗ್ರಾಪಂ ಅಧಿಕಾರಿಗಳು ಮುಂದಾಗಿದ್ದಾರೆ. 14 ಗ್ರಾಮಗಳಲ್ಲಿ ಕಲ್ಯಾಣಿ ಹಾಗೂ ಗೋಕಟ್ಟೆಗಳನ್ನು ಅಭಿವೃದ್ಧಿಗೆ ಗುರುತಿಸಲಾಗಿದೆ. ಸ್ಥಳೀಯ ದಾನಿಗಳು ನೆರವಿನಲ್ಲಿ ಈ ಕಾರ್ಯ ನಡೆಯುತ್ತಿದೆ. ಪಂಚಾಯ್ತಿ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಲ್ಯಾಣಿ ಸ್ವಚ್ಚತೆಗೆ ಹ್ಯಾಂಡ್ಸ್‌ ಆನ್‌ ಗುಂಪಿನ ಸದಸ್ಯರು ಶ್ರಮದಾನ ನೀಡಿದ್ದಾರೆ. -ಗಾಣಕಲ್‌ ನಟರಾಜು, ಅಧ್ಯಕ್ಷರು, ರಾಮನಗರ ತಾಪಂ ಅಧ್ಯಕ್ಷ

 

-ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next