Advertisement

ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೆರೆಗಳ ಪುನಶ್ಚೇತನ

03:07 PM Jan 15, 2018 | Team Udayavani |

ಬಂಟ್ವಾಳ: ಪುರಸಭಾ ವ್ಯಾಪ್ತಿಯ 3 ಕೆರೆಗಳನ್ನು ಪುನಶ್ಚೇತನ ಮಾಡುವ ಯೋಜನೆ ಸಿದ್ಧವಾಗುತ್ತಿದ್ದು, ನಗರ ಯೋಜನಾ ಪ್ರಾಧಿಕಾರ 2 ಕೋಟಿ ರೂ. ವೆಚ್ಚದಲ್ಲಿ ಅದಕ್ಕೆ ಕಾಯಕಲ್ಪಕ್ಕೆ ಮುಂದಾಗಿದೆ. ಕೆರೆಗಳ ಅಭಿವೃದ್ಧಿಗಾಗಿ ಸ್ಥಳ ಪರಿಶೀಲನೆ ಮಾಡಿ ಅಂದಾಜು ಪಟ್ಟಿ ತಯಾರಿ ನಡೆದಿದೆ. ಕೆರೆಗಳ ಪುನಶ್ಚೇತನ ಯೋಜನೆಯಿಂದ ಕುಡಿಯುವ ನೀರು ಮತ್ತು ಕೃಷಿ ಉದ್ದೇಶಕ್ಕೆ ಪೂರಕವಾಗುವಂತೆ ವ್ಯವಸ್ಥೆ
ಮಾಡುವುದು ಇದರ ಉದ್ದೇಶ. 

Advertisement

ಪುನಶ್ಚೇತನದಿಂದ ಆಸುಪಾಸಿನ ಕೊಳವೆ ಬಾವಿ, ತೆರೆದ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿಸುವುದಕ್ಕೆ ಪೂರಕವಾಗಿ ಕ್ರಮ
ಆಗಲಿದೆ. ಪರಿಸರದ 200 ಮೀ. ವ್ಯಾಪ್ತಿಯಲ್ಲಿ ಮದಕಗಳಲ್ಲೂ ನೀರಿನ ಹರಿವಿಗೆ ಅನುಕೂಲ ಆಗುವುದಾಗಿ ಯೋಜನೆ ತಿಳಿಸಿದೆ.

ಪರಿಸರ ರಕ್ಷಣೆ
ಕೆರೆ ಪುನಶ್ಚೇತನ ಮಾಡುವ ಸಂದರ್ಭ ಅದರ ಸುತ್ತ ಸೌಂದರ್ಯ ಹೆಚ್ಚಿಸುವ, ಸುವಾಸನೆ ಬೀರುವ ಗಿಡಗಳನ್ನು ನೆಡುವ, ನೆರಳು ನೀಡುವ, ಎತ್ತರಕ್ಕೆ ಬೆಳೆಯದ ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡುವುದು ಮತ್ತು ಆಕಸ್ಮಿಕ ದುರ್ಘ‌ಟನೆಗಳು ಸಂಭವಿಸದಂತೆ ಕೆರೆಗಳ ಸುತ್ತ ಸುರಕ್ಷಾ ವ್ಯವಸ್ಥೆ ಅಳವಡಿಸುವುದು ಕೂಡ ಯೋಜನೆಯಲ್ಲಿ ಇದೆ. ಮಳೆಗಾಲದಲ್ಲಿ ಹೆಚ್ಚುವರಿ ನೀರು ಹೊರ ಹರಿಯುವಂತೆ, ಮಣ್ಣು ಸವಕಳಿ ತಡೆ, ಕೆರೆಗೆ ಮಳೆಯ ನೀರಲ್ಲದೆ ಗುಡ್ಡದ ನೀರು ಹರಿದು ಸೇರುವುದಕ್ಕೆ ಸೂಕ್ತ ವ್ಯವಸ್ಥೆ, ಹೂಳು ಬಾರದಂತೆ ಕ್ರಮಗಳು ಪುನಶ್ಚೇತನ ಯೋಜನೆಯಲ್ಲಿ ಇರಬೇಕಾಗಿದೆ.

ಅಸ್ತಿತ್ವದಲ್ಲಿರುವ ಕೆರೆಗಳು
ಪುರಸಭೆ ವ್ಯಾಪ್ತಿಯಲ್ಲಿ ಇರುವಂತಹ ಕೆರೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಧಿಕೃತ ದಾಖಲೆ ಹೊಂದಿರುವುದು ಸರ್ವೆಯಲ್ಲಿ ಕಂಡು ಬಂದಿದೆ. ಬಿ. ಕಸ್ಬಾ ಗ್ರಾಮದ ಬರ್ದೆಲ್‌ನಲ್ಲಿ 4 ಕೆರೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 0.15 ಸೆಂಟ್ಸ್‌, 0.29 ಸೆಂಟ್ಸ್‌, 0.28 ಸೆಂಟ್ಸ್‌, 0.06 ಸೆಂಟ್ಸ್‌ ವಿಸ್ತೀರ್ಣದ ಕೆರೆಗಳು ಇಂದಿಗೂ ಸರಕಾರಿ ಕೆರೆಗಳೆಂದು ಅಧಿಕೃತವಾಗಿ ಗುರುತಿಸಲ್ಪಟ್ಟಿವೆ.

ಮುಡ್ಡಾಲ್‌ಗ‌ುಡ್ಡೆಯಲ್ಲಿ 0.25 ಸೆಂಟ್ಸ್‌, ಗಿರಿಗುಡ್ಡೆಯಲ್ಲಿ 0.29 ಸೆಂಟ್ಸ್‌ನ ಕೆರೆಗಳು ನೂರಾರು ವರ್ಷಗಳ ಹಿಂದಿನಿಂದ ಉಳಿದು ಬಂದಿದ್ದು, ಅಧಿಕೃತ ದಾಖಲೆಯೂ ಇವುಗಳಿಗಿದೆ. ಬಿ. ಮೂಡ ಗ್ರಾಮದ ಕೊಡಂಗೆ- 0. 03 ಸೆಂಟ್ಸ್‌, ಮಠ- 0.08 ಸೆಂಟ್ಸ್‌, ಅಸಬೈಲು -0.06 ಸೆಂಟ್ಸ್‌, ಶಾಂತಿಅಂಗಡಿ-0.12 ಸೆಂಟ್ಸ್‌, ಮದ್ವ -0.10 ಸೆಂಟ್ಸ್‌, ಹದ್ದಾಡಿ-0. 05 ಸೆಂಟ್ಸ್‌, ಪಲ್ಲಮಜಲು -0.04 ಸೆಂಟ್ಸ್‌ ವಿಸ್ತೀರ್ಣದ ಕೆರೆಗಳಿವೆ. ಪಾಣೆಮಂಗಳೂರು ಗ್ರಾಮದಲ್ಲಿ ನರಹರಿನಗರ-0.45 ಸೆಂಟ್ಸ್‌. ಕೌಡೇಲ್‌ನಲ್ಲಿ 0.17ಸೆಂಟ್ಸ್‌, ಬೋಳಂಗಡಿಯಲ್ಲಿ 0.18 ಸೆಂಟ್ಸ್‌, ಮದಕ-0.14 ಸೆಂಟ್ಸ್‌ ವಿಸ್ತೀರ್ಣದ ಕೆರೆಗಳಿವೆ. ಬುಡಾ ಅಧ್ಯಕ್ಷರ ನೇತೃತ್ವದಲ್ಲಿ ಸಣ್ಣ ನೀರಾವರಿ ಇಲಾಖೆಯ
ಸಹಾಯಕ ಎಂಜಿನಿಯರ್‌ ಪ್ರಸನ್ನ, ನಗರ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಷ್‌ ಎಂ.ಪಿ. ಅವರು ಪ್ರಮುಖ ಕೆರೆಗಳನ್ನು ಗುರುತಿಸುವ ಕೆಲಸ ಮಾಡಿದ್ದಾರೆ.

Advertisement

ಪುನಶ್ಚೇತನಕ್ಕೆ ಮೂರು ಕೆರೆಗಳ ಆಯ್ಕೆ 
ಪುರಸಭಾ ವ್ಯಾಪ್ತಿಯ ಬಿ ಕಸ್ಬಾ ಗ್ರಾಮದ 2 ಎಕ್ರೆ ಪ್ರದೇಶದ ಗಿರಿಗುಡ್ಡೆ ಕೆರೆ, ಪಾಣೆಮಂಗಳೂರು ಗ್ರಾಮದ 18 ಸೆಂಟ್ಸ್‌ನಲ್ಲಿರುವ ಕೌಡೇಲು ಕೆರೆ, ಬೋಳಂಗಡಿ ನರಹರಿ ನಗರದ 40 ಸೆಂಟ್ಸ್‌ ಪಾಳುಬಿದ್ದ ಜಮೀನಿನಲ್ಲಿರುವ ಕೆರೆಗಳನ್ನು ಪುನಶ್ಚೇತನ ಉದ್ದೇಶಕ್ಕೆ ಆಯ್ದುಕೊಳ್ಳಲಾಗಿದೆ.

ಕೆರೆಗಳ ಪುನಶ್ಚೇತನ ಬಗ್ಗೆ ಈಗಾಗಲೇ ಸರ್ವೆ ಕಾರ್ಯ ನಡೆದಿದೆ. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮೂಲಕ ಅವುಗಳನ್ನು ಯೋಜಿತವಾಗಿ ಕಾಲಮಿತಿಯಲ್ಲಿ ಪುನಶ್ಚೇತನ ಮಾಡುವ ಬಗ್ಗೆ ರೂಪುರೇಖೆಗಳನ್ನು ತಯಾರಿಸಲಾಗಿದೆ. ಇದಲ್ಲದೆ ಸರಕಾರಿ ಜಮೀನಿನಲ್ಲಿ ಇರುವಂತಹ ಇತರ 14 ಕೆರೆಗಳನ್ನು ಗುರುತಿಸಿದ್ದು, ಅವುಗಳ ಹೂಳು ತೆಗೆದು ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳುವ ಯೋಜನೆ ಕೂಡ ಮಾಡಲಾಗಿದೆ. ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ, ಮಣ್ಣಿನ ಸವಕಳಿ ತಪ್ಪಿಸಲು, ಅಂತರ್ಜಲ ಮಟ್ಟ ಹೆಚ್ಚಿಸಲು ಇದರಿಂದ ಸಾಧ್ಯವಾಗಲಿದೆ.

ಕೆರೆಗಳ ಪುನಶ್ಚೇತನದಿಂದ ಸಕಲ ಜೀವರಾಶಿಗೆ ಪ್ರಯೋಜನ ಆಗಲಿದೆ. ಜತೆಗೆ ಅಂತರ್ಜಲ ಮಟ್ಟವೂ ಹೆಚ್ಚುವುದು. ದೀರ್ಘ‌ ಅವಧಿವರೆಗೆ ನೀರು ನಿಲುಗಡೆಯಾಗಿ ಪರಿಸರದಲ್ಲಿ ಹಸುರು ಪ್ರದೇಶ ವಿಸ್ತರಿಸುವುದು. ಕಾಲಮಿತಿಯಲ್ಲಿ ಪುನಶ್ಚೇತನ ಕೆಲಸದ ಅನುಷ್ಠಾನ ಆಗಲಿದೆ.
ಸದಾಶಿವ ಬಂಗೇರ,ಅಧ್ಯಕ್ಷರು
 ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ 

ರಾಜಾ ಬಂಟ್ವಾಳ 

Advertisement

Udayavani is now on Telegram. Click here to join our channel and stay updated with the latest news.

Next