ಲಿಂಗಸುಗೂರು: ಸಂಪೂರ್ಣ ಸ್ಥಗಿತಗೊಂಡಿದ್ದ ತಾಲೂಕಿನ ಜಲದುರ್ಗ ಏತ ನೀರಾವರಿ ಯೋಜನೆಯ ಪುನಶ್ಚೇತನಕ್ಕಾಗಿ 3.50 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈಗ ಯೋಜನೆಗೆ ಮರುಜೀವ ಬಂದಿದೆ. ತಾಲೂಕಿನ ಜಲದುರ್ಗ ಗ್ರಾಮದ ಬಳಿಯ ಕೃಷ್ಣಾ ನದಿಗೆ ತಡೆಗೋಡೆ ನಿರ್ಮಿಸಿ ಪಂಪ್ ಮೂಲಕ ನೀರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯನ್ನು 1980ರಲ್ಲಿ ಆರಂಭಿಸಿ 1984ರಿಂದ ನಾಲ್ಕು ವರ್ಷಗಳ ಕಾಲ ರೈತರ ಭೂಮಿಗೆ ನೀರುಣಿಸಲಾಗಿತ್ತು. ಎಡದಂಡೆ ನಾಲೆ 2.31 ಕಿ.ಮೀ. ಉದ್ದ ಹಾಗೂ ಬಲದಂಡೆ ನಾಲೆ 0.93 ಕಿ.ಮೀ. ಉದ್ದವಿದೆ. ಈ ಯೋಜನೆಯಿಂದ ಒಟ್ಟು 182 ಹೆಕ್ಟೇರ್ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಸುವ ಈ ಯೋಜನೆಯಾಗಿದೆ.
ಮತ್ತೆ ಚಾಲನೆ: 1988ರವರಿಗೆ ಯೋಜನೆಯಿಂದ ರೈತರ ಜಮೀನಿಗೆ ನೀರು ಹರಿಸಲಾಗಿತ್ತು. ವಿವಿಧ ಕಾರಣಗಳನ್ನು ಒಡ್ಡಿ ಯೋಜನೆ ಸ್ಥಗಿತಗೊಳಿಸಲಾಗಿತ್ತು. ಆದರೆ, 2011ರಲ್ಲಿ ಈ ಯೋಜನೆಗೆ ಮರುಚಾಲನೆ ನೀಡಿ 71.68 ಲಕ್ಷ ರೂ. ಬಿಡುಗಡೆಗೊಳಿಸಿ ಮೋಟಾರು ಪಂಪ್‌ಗ್ಳ ದುರಸ್ತಿ, ಯಂತ್ರೋಪಕರಣಗಳ ಖರೀದಿ, ವಿದ್ಯುತ್ ಸಂಪರ್ಕ, ಟಿಸಿ ಅಳವಡಿಕೆ ಹಾಗೂ ಇನ್ನಿತರ ಸಿವಿಲ್ ಕೆಲಸಗಳನ್ನು ಮಾಡಲಾಗಿತ್ತು. ಇಷ್ಟು ಹಣ ನೀರಿನಂತೆ ಖರ್ಚು ಮಾಡಿದರೂ ಬಲದಂಡೆ ಹಾಗೂ ಎಡದಂಡೆ ನಾಲೆಗಳನ್ನು ದುರಸ್ತಿ ಮಾಡದೇ ತರಾತುರಿಯಲ್ಲಿ 2012 ಜನವರಿ 27ರಂದು ಆಗಿನ ಶಾಸಕ ಮಾನಪ್ಪ ವಜ್ಜಲ ಯೋಜನೆಯನ್ನು ಮರು ಉದ್ಘಾಟಿಸಿದರು. ಉದ್ಘಾಟನೆ ದಿನದಂದು ಮಾತ್ರ ನೀರು ಹರಿಸಿದ್ದು ಬಿಟ್ಟರೆ ಇಲ್ಲಿವರೆಗೂ ನಾಲೆಗೆ ನೀರು ಹರಿಸಿಲ್ಲ ಎಂಬದೇ ರ್ದುದೈವ ಸಂಗತಿ.
ಪ್ರವಾಹಕ್ಕೆ ತುತ್ತು: ಜಲದುರ್ಗ ನೀರಾವರಿ ಯೋಜನೆಗಾಗಿ ಕೃಷ್ಣಾ ನದಿಯಲ್ಲಿ ತಡೆಗೋಡೆ ಹಾಗೂ ಪೈಪ್‌ಲೈನ್ ಮಾಡಲಾಗಿತ್ತು. ಆದರೆ ಪ್ರವಾಹ ಬಂದ ಸಂದರ್ಭದಲ್ಲಿ ತಡೆಗೋಡೆ ಮತ್ತು ಪೈಪ್ ಲೈನ್ ಕೊಚ್ಚಿಹೋಗಿತ್ತು. ಇದುಲ್ಲದೆ ಯೋಜನೆ ಸ್ಥಗಿತಗೊಂಡಿದ್ದರಿಂದ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ಖರೀದಿಸಿದ ಪಂಪ್‌ಗ್ಳು ಧೂಳು ತಿನ್ನುತ್ತಿವೆ.
3.50 ಕೋಟಿ ಬಿಡುಗಡೆ: ಈ ಯೋಜನೆಯನ್ನು ಪುನಶ್ಚೇತನಗೊಳಿಸಲು ಸರ್ಕಾರ 3.50 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಈ ಅನುದಾನದಲ್ಲಿ
ಹೊಸದಾಗಿ ಜಾಕ್‌ವೆಲ್, ಎತ್ತರದ ತಡೆಗೋಡೆ ನಿರ್ಮಾಣ, ಪಂಪ್‌ಗ್ಳ ಖರೀದಿಗೆ ಅಂದಾಜು ವೆಚ್ಚ ಪತ್ರಿಕೆ ತಯಾರಿಸಲಾಗುತ್ತಿದೆ. ಈ ಯೋಜನೆಯಿಂದ ರೈತರಿಗೆ
ಯಾವುದೇ ಅನುಕೂಲವಾಗಿಲ್ಲ. ಇದರಿಂದ ಈ ಯೋಜನೆಗೆ ಮರುಜೀವ ಬಂದಿದೆ. ಅನುದಾನ ಬಿಡುಗಡೆ ಯಾಗಿದ್ದರಿಂದ ಪುನಶ್ಚೇತನಗೊಳಿಸಿ ಆದಷ್ಟು ಬೇಗ ರೈತರ ಜಮೀನಿಗೆ ನೀರುಣಿಸುವುದು ಅಗತ್ಯವಾಗಿದೆ.
ಜಲದುರ್ಗ ಯೋಜನೆಯನ್ನು ಪುನಶ್ಚೇತನಕ್ಕಾಗಿ 3.50 ಕೋಟಿ ರೂಪಾಯಿ ಬಿಡುಡೆಯಾಗಿದೆ. ಇದಕ್ಕೆ ಎಸ್ಟೀಮೇಟ್ ಮಾಡಿ ಟೆಂಡರ್ ಕರೆದು ಕಾಮಗಾರಿ ಆರಂಭಗೊಳಿಸಲಾಗುವುದು.
ಪ್ರಲ್ಹಾದ್ ಬಿಜ್ಜೂರು, ಜೆಇ ಸಣ್ಣ ನೀರಾವರಿ ಇಲಾಖೆ
ಶಿವರಾಜ ಕೆಂಭಾವಿ