– 2011ರಲ್ಲಿ ಸದಾನಂದಗೌಡ ನೀಡಿದ್ದ ಭರವಸೆ
– 2013ರಲ್ಲಿ ಕಾಂಗ್ರೆಸ್ ಸರ್ಕಾರ ಪ್ರಸ್ತಾಪ ತಿರಸ್ಕರಿಸಿತ್ತು
– ರಾಯಚೂರು ಕೃಷಿ ವಿವಿ ನಾಮ ನಿರ್ದೇಶಿತ ಸದಸ್ಯರ ಜಿ. ಶ್ರೀಧರ ವಿಶೇಷ ಕಾಳಜಿ
– ಶಾಸಕ ಪರಣ್ಣ ಮುನವಳ್ಳಿ, ಸಂಸದ ಸಂಗಣ್ಣ ಕರಡಿ ಸಾಥ್
ಗಂಗಾವತಿ: ಹಲವು ದಶಕಗಳ ಬೇಡಿಕೆಯಾಗಿರುವ ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ಮರುಚಾಲನೆ ಸಿಕ್ಕಿದೆ. ತುಂಗಭದ್ರಾ ಡ್ಯಾಂ ನಿರ್ಮಾಣ ಆದಾಗಿನಿಂದಲೂ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಕೃಷಿ ಸಂಬಂ ಧಿಸಿದ ಶಿಕ್ಷಣ ನೀಡುವ ಯೋಜನೆ ಆರಂಭವಾಗಿದ್ದು, ರಾಯಚೂರಿನಲ್ಲಿ ಕೃಷಿ ವಿವಿ ಸ್ಥಾಪನೆ ಗಂಗಾವತಿ, ಸಿಂಧನೂರು, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿಯಲ್ಲಿ ಕೃಷಿ ಸಂಬಂಧ ಅಧ್ಯಯನ ಸಂಶೋಧನೆ ಕೇಂದ್ರ ಆರಂಭಿಸಲಾಗಿದೆ.
ಗಂಗಾವತಿಯಲ್ಲಿ ಕೃಷಿ ವಿವಿ ಸ್ಥಾಪಿಸುವ ಪ್ರಸ್ತಾಪ ಹಲವು ವರ್ಷಗಳಿಂದ ಇದ್ದರೂ ಇದುವರೆಗೆ ಮಂಜೂರಿಯಾಗಿಲ್ಲ. 2011ರಲ್ಲಿ ಗಂಗಾವತಿಯಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಪರಣ್ಣ ಮುನವಳ್ಳಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವಂತೆ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ಪ್ರಸ್ತಾವನೆ ಸಲ್ಲಿಸಿದಾಗ ಸಮ್ಮೇಳನ ಉದ್ಘಾಟನಾ ಭಾಷಣದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಗಂಗಾವತಿಯಲ್ಲಿ ಅಗ್ರಿ ಕಾಲೇಜು ಆರಂಭ ಮಾಡುವುದಾಗಿ ಭರವಸೆ ನೀಡಿದ್ದರು.
ನಿಯೋಗದಿಂದ ಸ್ಥಳ ಪರಿಶೀಲನೆ: ಕಲಬುರ್ಗಿಯಲ್ಲಿ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಮತ್ತು ಅಗ್ರಿ ಕಾಲೇಜು ಆರಂಭಕ್ಕೆ ನಿರ್ಣಯಿಸಲಾಗಿತ್ತು. ನಗರದ ಕನಕಗಿರಿ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಸಂಶೋಧನಾ ಕೇಂದ್ರಕ್ಕೆ ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ರಾಜ್ಯದ ಅಧಿ ಕಾರಿಗಳ ನಿಯೋಗ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿತ್ತು.
2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನೂತನ ಕೃಷಿ ಕಾಲೇಜು ಆರಂಭಿಸಬೇಕಾದ ಕಡತ ತಿರಸ್ಕರಿಸಿದ್ದರಿಂದ ನಿಯೋಜಿತ ಕೃಷಿ ಮಹಾವಿದ್ಯಾಲಯ ಸ್ಥಾಪನೆ ಪ್ರಸ್ತಾಪ ರದ್ದಾಗಿತ್ತು. ಇದೀಗ ಶಾಸಕ ಪರಣ್ಣ ಮುನವಳ್ಳಿ ಹಾಗೂ ನೂತನವಾಗಿ ಕೃಷಿ ಮಹಾವಿದ್ಯಾಲಯದ ಆಡಳಿತ ಮಂಡಳಿ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಜಿ. ಶ್ರೀಧರ ಕೃಷಿ ಮಹಾವಿದ್ಯಾಲಯ ಸ್ಥಾಪನೆ ಕುರಿತು ಹಳೆಯ ಪ್ರಸ್ತಾಪನೆಗೆ ಜೀವ ತುಂಬಿದ್ದು, ಕೃಷಿ ವಿವಿ ಅಧಿಕಾರಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜು ಆರಂಭಕ್ಕೆ ಸಿದ್ಧತೆ ನಡೆಸಿದ್ದಾರೆ.
ಗಂಗಾವತಿಯಲ್ಲಿ ಅಗ್ರಿ ಕಾಲೇಜು ಸ್ಥಾಪನೆ ಪ್ರಸ್ತಾಪ ಹಳೆಯದಾಗಿದ್ದು ಶಾಸಕ ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ ಆಸಕ್ತರಾಗಿದ್ದಾರೆ. ಈ ಬಾರಿ ಖಚಿತವಾಗಿ ಕೆವಿಕೆ ಮತ್ತು ಎಆರ್‌ಎಸ್ ಕೇಂದ್ರದಲ್ಲಿ ಸುಮಾರು 200ಕ್ಕೂ ಹೆಚ್ಚು ಭೂಮಿ ಇದೆ. ಅಲ್ಲಿ ಅಗ್ರಿ ಕಾಲೇಜು ಸ್ಥಾಪನೆ ಹಳೆ ಕಡತ ತೆರೆದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೇಂದ್ರ ಸರ್ಕಾರದ ಐಸಿಎನ್‌ಆರ್ ಸಂಸ್ಥೆ ನೆರವಿನಿಂದ ಕಾಲೇಜು ಆರಂಭಿಸಲು ಯತ್ನಿಸಲಾಗುತ್ತದೆ.
ಜಿ. ಶ್ರೀಧರ, ನಾಮ ನಿರ್ದೇಶಿತ ಸದಸ್ಯರು, ಕೃಷಿ ವಿವಿ ರಾಯಚೂರು
ಕೆ.ನಿಂಗಜ್ಜ