Advertisement

ಬಜೆಟ್‌ನಲ್ಲಿ ಬದಲಾವಣೆ ಇಲ್ಲದೆ ಪರಿಷ್ಕರಣೆ!

06:10 AM Jun 02, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್‌ನಲ್ಲಿ ಆರ್ಟಿರಿಯಲ್‌ ಮತ್ತು ಸಬ್‌ ಆರ್ಟಿರಿಯಲ್‌ ರಸ್ತೆಗಳ ಅಭಿವೃದ್ಧಿ ಸೇರಿದಂತೆ “ತುರ್ತು’ ಯೋಜನೆಗಳಿಗಾಗಿ ಅನುದಾನವನ್ನು ಪಾಲಿಕೆಯ ಕೋರಿಕೆ ಮೇರೆಗೆ ಸೋಮವಾರ ನಗರಾಭಿವೃದ್ಧಿ ಇಲಾಖೆ ಪರಿಷ್ಕರಿಸಿದೆ. ಆದರೆ, ಬೆನ್ನಲ್ಲೇ ಈಗಾಗಲೇ ಅನುಮೋದಿಸಿರುವ ಮೊತ್ತದಲ್ಲೇ ಇದನ್ನು ಹೊಂದಾಣಿಕೆ ಮಾಡತಕ್ಕದ್ದು ಎಂಬ ಷರತ್ತು ಕೂಡ ವಿಧಿಸಿದೆ.

Advertisement

ಇದರಿಂದ ಪಾಲಿಕೆ ಇಕ್ಕಟ್ಟಿಗೆ ಸಿಲುಕಿದೆ. ಸುಟ್ಟುಹೋದ  ಬೀದಿದೀಪಗಳ ಬದಲಾವಣೆ ಮತ್ತು ನಿರ್ವಹಣೆ ಹಾಗೂ ದುರಸ್ತಿ (ಪ್ಯಾಕೇಜ್‌), ಬೃಹತ್‌ ನೀರುಗಾಲುವೆ ವಾರ್ಷಿಕ ನಿರ್ವಹಣೆ ಹಾಗೂ ಆರ್ಟಿರಿಯಲ್‌ ಮತ್ತು ಸಬ್‌ ಆರ್ಟಿರಿಯಲ್‌ ರಸ್ತೆಗಳನ್ನು ಎಂಟು ವಲಯಗಳಲ್ಲಿ ರಸ್ತೆ ಮೂಲಸೌಕರ್ಯ ಯೋಜನೆಗಳಿಂದ  ಅಭಿವೃದ್ಧಿಗೊಳಿಸುವ ಸಂಬಂಧ ಸರ್ಕಾರ ಈ ಮೊದಲು ಅನುಮೋದಿಸಿದ್ದ ಮೊತ್ತ 50 ಕೋಟಿ ರೂ. ಆದರೆ, ಈಗ ಪಾಲಿಕೆ ಪ್ರಸ್ತಾವನೆ ಹಿನ್ನೆಲೆಯಲ್ಲಿ ಅದನ್ನು 229 ಕೋಟಿ ರೂ.ಗಳಿಗೆ ಪರಿಷ್ಕರಿಸಿದೆ.

ಈ ಪೈಕಿ ಆರ್ಟಿರಿಯಲ್‌ ಮತ್ತು ಸಬ್‌ ಆರ್ಟಿರಿಯಲ್‌ ರಸ್ತೆಗಳ ಅಭಿವೃದ್ಧಿ ಮೊತ್ತವೇ 142 ಕೋಟಿ ರೂ. ಇದೆ. ಬೆನ್ನಲ್ಲೇ ಇದನ್ನು ಆಯವ್ಯಯದ ಒಟ್ಟಾರೆ ಅನುಮೋದಿತ ಹಾಗೂ ಎಸೊ ಮೊತ್ತದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ  ಹೊಂದಾಣಿಕೆ ಮಾಡಿಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದೆ. ಇದು ಪಾಲಿಕೆಯನ್ನು ಗೊಂದಲಕ್ಕೀಡು ಮಾಡಿದೆ. ಯಾಕೆಂದರೆ, ಈ ಅನುದಾನದ ಹೊಂದಾಣಿಕೆಗಾಗಿ ಈಗಿರುವ ಯಾವುದಾದರೂ  ಯೋಜನೆಗಳಿಗೆ ಕತ್ತರಿ ಹಾಕುವುದು ಅನಿವಾರ್ಯವಾಗಿದ್ದು, ಯಾವುದೇ ಅನುದಾನಕ್ಕೆ ಕತ್ತರಿ ಹಾಕಿದರೂ ಅಪಸ್ವರಗಳು ಕೇಳಿಬರಲಿವೆ.

ತೃಪ್ತಿಪಡಿಸುವ ಕಸರತ್ತು?: ಮೂಲಗಳ ಪ್ರಕಾರ ಆರ್ಟಿರಿಯಲ್‌ ಮತ್ತು ಸಬ್‌ ಆರ್ಟಿರಿಯಲ್‌ ರಸ್ತೆ ನಿರ್ವಹಣೆಯನ್ನು ವಲಯ ಕಚೇರಿಗಳಿಂದ ಮಾಡುತ್ತಿದ್ದರೂ, ಬೃಹತ್‌ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ತೃಪ್ತಿಪಡಿಸಲು  ಮೂಲಸೌಕರ್ಯ ವಿಭಾಗಕ್ಕೆ 142 ಕೋಟಿ ರೂ. ಹೆಚ್ಚುವರಿ ಅನುದಾನ ಕೋರಲಾಗಿದೆ. ಈಗ ಒಟ್ಟಾರೆ ಅನುಮೋದಿತ ಮೊತ್ತದಲ್ಲೇ ಹೊಂದಾಣಿಕೆ ಮಾಡಬೇಕಾಗಿರುವುದರಿಂದ ಇತರೆ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಯೋಜನೆಗಳಿಗೆ ಕತ್ತರಿ ಹಾಕುವ ಕಸರತ್ತು ನಡೆದಿದೆ.

ಈ ಮಧ್ಯೆ ಪರಿಷ್ಕೃತ ಮೊತ್ತದ ಕಾಮಗಾರಿಗಳ ಅನುಷ್ಠಾನಕ್ಕಾಗಿ ಪರ್ಯಾಯವಾಗಿ ಸಮಮೊತ್ತದ ಅತಿ ತುರ್ತು ಅಲ್ಲದ ನೂತನ ಯೋಜನೆಗಳನ್ನು ಅನುಮೋದಿತ ವಿವೇಚನಾ  ಅನುದಾನಗಳನ್ನು ಹೊರತುಪಡಿಸಿ, ವಿಶೇಷ ವಾರ್ಡ್‌ ಅಭಿವೃದ್ಧಿಕಾಮಗಾರಿಗಳು, ಮೀಸಲು ನಿಧಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಚಾಲ್ತಿ ಕಾಮಗಾರಿಗಳು ಮತ್ತಿತರ ಶೀರ್ಷಿಕೆಗಳಿಂದ ಕೈಬಿಡುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ. ಆದರೆ, ತುರ್ತು ಅಲ್ಲದ ಕಾಮಗಾರಿಗಳ ಆಯ್ಕೆಯೇ ಕಗ್ಗಂಟಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next