Advertisement

ಮೌಲ್ಯಮಾಪನ ಬಹಿಷ್ಕಾರ ಹಿಂಪಡೆದ ಪಿಯು ಉಪನ್ಯಾಸಕರು

06:05 AM Mar 22, 2018 | Team Udayavani |

ಬೆಂಗಳೂರು :ಪಿಯುಸಿ ಉಪನ್ಯಾಸಕರಿಗೆ ಕಳೆದ ವರ್ಷ ನೀಡಬೇಕಿದ್ದ ವೇತನ ಬಡ್ತಿ ಈಗ ನೀಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಯಾವುದೇ ಅಡೆತಡೆ ಇಲ್ಲದೆ ನಡೆಯಲಿದೆ.

Advertisement

ಬುಧವಾರ ಶಾಸಕರ ಭವನದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಮೇಲ್ಮನೆ ಸದಸ್ಯರಾದ ರಮೇಶ್‌ ಬಾಬು, ಆರ್‌.ಚೌಡರೆಡ್ಡಿ, ರಾಮಚಂದ್ರಗೌಡ ಹಾಗೂ ಕೆ.ಟಿ.ಶ್ರೀಕಂಠೇಗೌಡ ಅವರು ಪಿಯು ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಮನವೊಲಿಸುವಲ್ಲಿ  ಯಶಸ್ವಿಯಾಗಿದ್ದು, ಮೌಲ್ಯಮಾಪನ ಬಹಿಷ್ಕಾರ ಹಿಂದಕ್ಕೆ ಪಡೆದು ಅನಿರ್ದಿಷ್ಟಾವಧಿ ಮುಷ್ಕರ ಕೈಬಿಟ್ಟಿದ್ದಾರೆ.

ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘ ಮತ್ತು ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲಕರ ಸಂಘವು ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕಾರ ಮಾಡುವುದಾಗಿ ಘೋಷಿಸಿ, ಮಾ.22ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ಹೀಗಾಗಿ, ಸಚಿವರು ಇಂದು ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಅದರಂತೆ ಮೌಲ್ಯಮಾಪನ ಬಹಿಷ್ಕರಿಸಿರುವುದನ್ನು ಹಿಂಪಡೆದಿರುವ ಬಗ್ಗೆ ಮತ್ತು ಸಚಿವರು ನೀಡಿರುವ ಭರವಸೆಯನ್ನು ಸೇರಿಸಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮತ್ತು ಮೇಲ್ಮನೆ ಸದಸ್ಯ ಶ್ರೀಕಂಠೇಗೌಡ ಸಹಿ ಮಾಡಿದ್ದಾರೆ. ವೇತನ ಬಡ್ತಿಗೆ ಸಂಬಂಧಿಸಿದಂತೆ ಸಂಬಂಧ ಗುರುವಾರ ಅಥವಾ ಶುಕ್ರವಾರ ಅಧಿಕೃತ ಆದೇಶ ಹೊರಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಸಭೆಯಲ್ಲೇ ದೂರವಾಣಿ ಮೂಲಕ ಸಚಿವರು ಮುಖ್ಯಮಂತ್ರಿಗಳ ಜತೆ ಮಾತನಾಡಿದರು ಎಂದು ಹೇಳಲಾಗಿದೆ.

ಒತ್ತಾಯ
ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಮಾಡಿ, ಈ ಹಿಂದೆ ನೀಡುತ್ತಿದ್ದ 1000ರೂ. ಎಕ್ಸ್‌ಗೆಷಿಯಾವನ್ನು ಮುಂದುವರಿಸಬೇಕು. ಅದನ್ನು ಪ್ರಾಂಶುಪಾಲರ ಮೂಲ ವೇತನದಲ್ಲಿ ವಿಲೀನಗೊಳಿಸಿ ನೂತನ ವೇತನ ಶ್ರೇಣಿ ನಿಗದಿ ಮಾಡಬೇಕು ಎಂದು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಚಿವರನ್ನು ಒತ್ತಾಯಿಸಿದರು.

Advertisement

ಪ್ರಾಂಶುಪಾಲರಿಗೆ 1 ಸಾವಿರ ಎಕ್ಸ್‌ಗೆÅàಷಿಯಾ, ಪ್ರತ್ಯೇಕ ವೇತನ ಶ್ರೇಣಿ  ಸಂಬಂಧ ಸರ್ಕಾರಿ ಹಂತದಲ್ಲಿ ಆದೇಶ ಹೊರಡಿಸಿ ಅದನ್ನು 6ನೇ ವೇತನ ಆಯೋಗಕ್ಕೆ ಸಲ್ಲಿಸಲಿದ್ದೇವೆ. ಮೂಲ ವೇತನದಲ್ಲೇ ಇದನ್ನು ವಿಲೀನಗೊಳಿಸಲು ವೇತನ ಆಯೋಗಕ್ಕೆ ಪತ್ರ ಬರೆಯುವುದಾಗಿ ಸಚಿವರು ಭರವಸೆ ನೀಡಿದರು.

ಇಂದು ಸಿಎಂ ಜತೆ ಸಭೆ
ಉಪನ್ಯಾಸಕರಿಗೆ ನೀಡುತ್ತಿರುವ ವಿಶೇಷ ಭತ್ಯೆ ಹಿಂಪಡೆದು, 2ನೇ ವೇತನ ಬಡ್ತಿಯನ್ನು ನೀಡಿ ಮೂಲ ವೇತನದಲ್ಲಿ ವಿಲೀನಗೊಳಿಸಿ ಹೊಸ ವೇತನ ಶ್ರೇಣಿ ನಿಗದಿ ಪಡಿಸಿಬೇಕು ಎಂದು ಇನ್ನೊಂದು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ ಮತ್ತು ಸಕಾರತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದು ಸಚಿವ ತನ್ವೀರ್‌ ಸೇಠ್ ಹೇಳಿದರು.

ವೇತನ ತಾರತಮ್ಯ ನಿವಾರಣೆ ಹಾಗೂ ಪ್ರತ್ಯೇಕ ವೇತನ ಶ್ರೇಣಿಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದರಿಂದ ಮೌಲ್ಯಮಾಪನ ಬಹಿಷ್ಕಾರ ವಾಪಾಸ್‌ ಪಡೆದಿದ್ದೇವೆ. ಇನ್ನು ಎರಡು ದಿನದ ಕಾಲಾವಕಾಶ ಇರುವುದರಿಂದ ಅಷ್ಟರೊಳಗೆ ಸರ್ಕಾರಿ ಆದೇಶ ಬರುವ ನಿರೀಕ್ಷೆ ಇದೆ. ಸರ್ಕಾರ ಮಾತು ತಪ್ಪಿದರೆ ಹೋರಾಟ ಮುಂದುವರಿಯುತ್ತದೆ.
-ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ಸರ್ಕಾರಿ ಪಿಯು ಕಾಲೇಜು ಉಪನ್ಯಾಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next