Advertisement

ವೃತ್ತಿಪರ ಕೋರ್ಸ್‌ಗಳ ಶುಲ್ಕ ಪರಿಷ್ಕರಣೆ ಇನ್ನೂ ಅನಿಶ್ಚಿತ

06:15 AM Jun 14, 2018 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭಕ್ಕೆ ಇನ್ನು ಕೆಲವೇ ದಿನ ಬಾಕಿ ಉಳಿದಿದ್ದರೂ ಪ್ರಸಕ್ತ ಸಾಲಿನ ಶುಲ್ಕ ಇನ್ನೂ ಪರಿಷ್ಕರಣೆಯಾಗಿಲ್ಲ.

Advertisement

ಈ ಸಂಬಂಧ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತಾದರೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಗೈರು ಹಾಜರಾಗಿದ್ದರು. ಸಿಎಂ ಅಧ್ಯಕ್ಷತೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ನಡೆದರೂ ಸ್ಪಷ್ಟ ನಿರ್ಧಾರ ಹೊರ ಬೀಳಲಿಲ್ಲ.

ಹೀಗಾಗಿ, ಶುಲ್ಕ ಪರಿಷ್ಕರಣೆ ತೂಗುಯ್ನಾಲೆಯಲ್ಲಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರು ಗೊಂದಲದಲ್ಲಿದ್ದಾರೆ.
ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆ ಹಾಗೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ನಡುವೆ ಒಮ್ಮತದ ಅಭಿಪ್ರಾಯ ಬಾರದ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇಲಾಖೆಯ ಅಧಿಕಾರಿಗಳು ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ಇನ್ನೊಮ್ಮೆ ಸಭೆ ಸೇರಿ ಚರ್ಚೆ ನಡೆಸಿ, ಅಂತಿಮ ನಿರ್ಧಾರ ತಿಳಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

2006ರ ವೃತ್ತಿ ಶಿಕ್ಷಣ ಕಾಯ್ದೆಯಂತೆ ಪ್ರತಿವರ್ಷ ಒಪ್ಪಂದದ ಆಧಾರದಲ್ಲಿ ವೈದ್ಯಕೀಯ, ವೃತ್ತಿ ಕೋರ್ಸ್‌ಗಳ ಶುಲ್ಕ ನಿಗದಿ ಮಾಡಲಾಗುತ್ತದೆ. ಕಾಯ್ದೆಯಂತೆ ಶೇ.8ರಿಂದ 10ರಷ್ಟು ಶುಲ್ಕ ಹೆಚ್ಚಳಕ್ಕೆ ಅವಕಾಶ ಇರುತ್ತದೆ. ಖಾಸಗಿ ಎಂಜಿನಿಯರಿಂಗ್‌ ಸಂಸ್ಥೆಗಳು ಪ್ರತಿ ವರ್ಷ ಶೇ.30ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಡುತ್ತವೆ. ಆದರೆ, ಸರ್ಕಾರ ಇದಕ್ಕೆ ಒಪ್ಪುತ್ತಿರಲಿಲ್ಲ.ಅಂತಿಮವಾಗಿ ಶೇ.8ರಿಂದ 10ರಷ್ಟು ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡುವುದು ವಾಡಿಕೆಯಂತೆ ನಡೆದುಕೊಂಡು ಬಂದಿದೆ.

ಪ್ರಸಕ್ತ ಸಾಲಿನ ಸಿಟಿಇ ಪ್ರಕ್ರಿಯೆಗಳು ಈಗಷ್ಟೇ ಆರಂಭವಾ ಗಿವೆ. ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹಂಚಿಕೆ ಮಾಡಲಾಗುತ್ತದೆ. ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್‌ಗಳಿಗೆ ಶೇ.30ರಷ್ಟು ಶುಲ್ಕ ಹೆಚ್ಚಳ ಮಾಡಬೇಕು ಎಂದು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಪಟ್ಟು ಹಿಡಿದಿವೆ. ಆದರೆ,ಇಲಾಖೆಯ ಅಧಿಕಾರಿಗಳು ಮತ್ತು ಸರ್ಕಾರ ಇದಕ್ಕೆ ಒಪ್ಪುತ್ತಿಲ್ಲ.

Advertisement

2006ರ ವೃತ್ತಿಪರ ಶಿಕ್ಷಣ ಕಾಯ್ದೆ ಪ್ರಕಾರ ಶೇ.8ರಷ್ಟು ಹೆಚ್ಚಳಕ್ಕೆ ಅಧಿಕಾರಿಗಳು ಒಪ್ಪುವ ಸಾಧ್ಯತೆ ಇದೆ. ಆದರೆ, ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಕನಿಷ್ಠ ಶೇ.15ರಷ್ಟಾದರೂ ಶುಲ್ಕ ಹೆಚ್ಚಿಸಲೇ ಬೇಕು ಎಂದು ಹಠಕ್ಕೆ ಬಿದ್ದಿವೆ ಎನ್ನಲಾಗಿದೆ.

ಸಭೆಗೆ ಬಾರದ ಜಿಟಿಡಿ: ಉನ್ನತ ಶಿಕ್ಷಣ ಖಾತೆ ನನಗೆ ಬೇಡ ಎಂದು ಹೇಳಿರುವ ಜಿ.ಟಿ.ದೇವೇಗೌಡರು ಇದುವರೆಗೂ ಆ
ಇಲಾಖೆಯ ಹೊಣೆಗಾರಿಕೆ ವಹಿಸಿಕೊಂಡಿಲ್ಲ. ಹೀಗಾಗಿ, ಇಂದಿನ ಸಭೆಗೂ ಬರಲಿಲ್ಲ. ಅವರಿಗೆ ಖಾತೆ ಬದಲಾವಣೆ
ಭರವಸೆ ನೀಡಲಾಗಿದ್ದು, ಉನ್ನತ ಶಿಕ್ಷಣವನ್ನು ಬಹುತೇಕ ಸಿಎಂ ಅವರೇ ಇಟ್ಟುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next