Advertisement

ಪರಿಷ್ಕೃತ ಪಠ್ಯಪುಸ್ತಕವು ಬಿಜೆಪಿ ಹಾಗೂ ಆರೆಸ್ಸೆಸ್ ನ ಭಿತ್ತಿ ಪತ್ರ: ಪ್ರಿಯಾಂಕ್ ಖರ್ಗೆ ಆರೋಪ

03:42 PM Jun 14, 2022 | Team Udayavani |

ಕಲಬುರಗಿ: ರಾಜ್ಯ ಸರ್ಕಾರ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತ ರೋಹಿತ್ ಚಕ್ರವರ್ತಿ ನೇತೃತ್ವದ ಅಸಾಂವಿಧಾನಿಕ ಪಠ್ಯಪುಸ್ತಕ ಪರಿಷ್ಕರಣೆ  ಸಮಿತಿಯ ಮುಖೇನ ಸಂಘ ಪರಿವಾರ ಹಾಗೂ ಬಿಜೆಪಿಯ ಭಿತ್ತಿಪತ್ರ ಮುದ್ರಿಸಿ ಸರಬರಾಜು ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

Advertisement

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆಗೆ ಹೆಸರಿನಲ್ಲಿ ಇತಿಹಾಸ, ಸಾಮಾಜಿಕ, ಧಾರ್ಮಿಕ ಮತ್ತು ವ್ಯಕ್ತಿ ವಿಶೇಷಗಳ ಕುರಿತು ತಪ್ಪುತಪ್ಪಾಗಿ ಮತ್ತು ಸುಳ್ಳು ಮಾಹಿತಿಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಅದರೊಂದಿಗೆ ಬಿಜೆಪಿ ಭವಿಷ್ಯದ ಕಾರ್ಯಪಡೆಯನ್ನು ಸಿದ್ಧ ಮಾಡುತ್ತಿದೆ ಎಂದು ದೂರಿದರು.

ಪರಿಷ್ಕರಣೆ ವೇಳೆ 28 ಪ್ರಗತಿಪರ ಸಾಹಿತಿಗಳ ಲೇಖಕರ ಬರಹಗಳನ್ನು ಕೈ ಬಿಡಲಾಗಿದೆ. ಪ್ರಮುಖವಾಗಿ ಭಗತ್ ಸಿಂಗ್ ಅವರ ಕುರಿತ ಪಠ್ಯಕೂಡ ಚಕ್ರವರ್ತಿ ಸೇರಿಸಿಲ್ಲ. ವಾಸ್ತವದಲ್ಲಿ ಚಕ್ರವರ್ತಿಗೆ ಭಗತ್ ಸಿಂಗ್ ಅವರನ್ನು ವ್ಯಾಖ್ಯಾನ ಮಾಡಿ ಬರೆಯುವಷ್ಟು ನೈತಿಕ ಶಿಕ್ಷಣವೇ ಇಲ್ಲ ಎಂದು ಆರೋಪ ಮಾಡಿದರು.

ನಾಳೆ ಪಾದಯಾತ್ರೆ-ಅಹೋ ರಾತ್ರಿ ಧರಣಿ: ಕನ್ನಡದ ಮತ್ತು ಕರ್ನಾಟಕದ ಅಸ್ಮಿತೆಯನ್ನೇ ಪ್ರಶ್ನಿಸಿರುವ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಾಳೆ ಕುವೆಂಪು ಅವರ ಹುಟ್ಟೂರಾದ ಕುಪ್ಪಳ್ಳಿಯಿಂದ ತೀರ್ಥಹಳ್ಳಿಯವರೆಗೆ ನಾಡಿನ ಮಠಾಧೀಶರು, ಲೇಖಕರು, ಬುದ್ಧಿಜೀವಿಗಳು, ಚಿಂತಕರು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದರು.

ಇದರ ಬೆಂಬಲಾರ್ಥವಾಗಿ ಕಲಬುರಗಿ ನಗರದ ಜಗತ್ ವೃತ್ತದ ಬಸವ ಪುತ್ಥಳಿ ಮುಂಭಾಗದಲ್ಲಿ 24 ಗಂಟೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದ್ದು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

Advertisement

ಇತಿಹಾಸ ತಿರುಚುವ ಕೆಲಸವಾಗಿದೆ: ಬಸವಣ್ಣನವರು ಜನಿವಾರ ಸಂಸ್ಕೃತಿಯನ್ನು ಧಿಕ್ಕರಿಸಿದವರು ಎಂಬುದನ್ನು ಮುಚ್ಚಿಟ್ಟು, ಬಸವಣ್ಣನವರು ಲಿಂಗದೀಕ್ಷೆ ಕೈಗೊಂಡಿದ್ದಾರೆ ಎಂದು ಇತಿಹಾಸ ತಿರುಚುವ ಮೂಲಕ ಬಸವಣ್ಣನವರಿಗೆ ಅಪಮಾನ ಮಾಡಿದ್ದಾರೆ. 24 ಜೈನ ತೀರ್ಥಂಕರರು, ಭಗವಾನ್ ಬುದ್ಧ ಕುರಿತು ಬರೆಯುವಾಗ ಅವರೆಲ್ಲರ ಹೆಸರನ್ನು ಏಕವಚನದಲ್ಲಿ ಬಳಸಲಾಗಿದೆ ಎಂದು ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮೀನುಗಾರಿಕೆ ಬಂದರು: ಮೂಲ ಸೌಕರ್ಯವಿಲ್ಲದೆ ʼಮೀನು ಕಟ್ಟಿಂಗ್‌ʼ ಸಂಕಟ!

ಬೌದ್ಧ, ಜೈನ ಎಂಬ ಮಾತು ಬಂದಾಗ ಧರ್ಮ ಎನ್ನುವ ಪದ ಉದ್ದೇಶ ಪೂರ್ವಕವಾಗಿ ಬಳಸದೆ ಮತ ಎಂದು ಬಳಸಲಾಗಿದೆ. ಆ ಮೂಲಕ ಅನ್ಯ ಧರ್ಮಗಳ ಕುರಿತು ಮಕ್ಕಳು ಹೆಚ್ಚೇನೂ ಕಲಿಯದೆ, ಭವಿಷ್ಯದಲ್ಲಿ ಬಿಜೆಪಿ ಪಾಲಿನ ಕೇಡರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡುತ್ತಾ, ಮನುಸ್ಮೃತಿ ವೈಭವೀಕರಿಸುವ ದಿಸೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗಿದೆ ಎಂದರು.

ವಾಲ್ಮೀಕಿ- ಮಹಿಳೆಗೆ ಅವಮಾನ: ಪಠ್ಯ ಪುಸ್ತಕದಲ್ಲಿ ರಾಮನನ್ನು ವೈಭವೀಕರಿಸುವ ಮೂಲಕ ವಾಲ್ಮೀಕಿಯನ್ನು ದಾರಿಗಳ್ಳ ಎಂದು ಜರಿಯಲಾಗಿದೆ. ಪಠ್ಯದಲ್ಲಿ ಮನುಸ್ಮೃತಿ ವಿಜೃಂಭವಿಸುವ ಮೂಲಕ ಮಹಿಳೆಯರ ಘನತೆ ತುಳಿಯುವ ಯತ್ನ ಮಾಡಲಾಗಿದೆ. ಶಂಕರಾಚಾರ್ಯರು, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೂ ಅಪಮಾನ ಮಾಡಲಾಗಿದೆ ಎಂದು ಪ್ರಿಯಾಂಕ್ ಬೇಸರ ವ್ಯಕ್ತಪಡಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಇಷ್ಟೆಲ್ಲಾ ದೋಷಗಳಿವೆ. ಈ ಕುರಿತು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟೀಕರಣ ನೀಡಬೇಕೆಂದು ಮಾಜಿ ಸಚಿವ ಪ್ರಿಯಾಂಕ್ ಒತ್ತಾಯಿಸಿದರು.

ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಜಿಲ್ಲಾ ಪಂಚಾಯಿತಿ ಮಾಜಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್ ಮರತೂರ್, ಎನ್.ಇ.ಕೆ.ಆರ್.ಟಿ.ಸಿ. ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next