ಬೆಂಗಳೂರು: ನೇತ್ರಾಧಿಕಾರಿಗಳಿಗೆ ಹುದ್ದೆಗೆ ಹಾಗೂ ವರ್ಗಕ್ಕೆ ಅನುಸಾರವಾಗಿ ವೇತನ ಹೆಚ್ಚಳ ಮಾಡಬೇಕು ಎಂದು ರಾಜ್ಯ ನೇತ್ರಾಧಿಕಾರಿಗಳ ಸಂಘದ ಅಧ್ಯಕ್ಷ ಡಿ.ಸಿ. ಸುಂದರ್‌ರಾಜು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ನೇತ್ರಾಧಿಕಾರಿಗಳ ಸಂಘದಿಂದ ಬುಧವಾರ ನಗರದ ಕಬ್ಬನ್ ಪಾರ್ಕ್‌ನ ಸರಕಾರಿ ನೌಕರರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ರಾಜ್ಯಮಟ್ಟದ ನೇತ್ರಾಧಿಕಾರಿಗಳ 6ನೇ ಸಮ್ಮೇಳನ-2017′, “ವೈಜ್ಞಾನಿಕ ಕಾರ್ಯಾಗಾರ ಹಾಗೂ ದೇಹದಾನ ನೋಂದಣಿ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೇತ್ರಾಧಿಕಾರಿಗಳ ವೃಂದದ ಹುದ್ದೆಯಲ್ಲಿರುವ ಸಿಬ್ಬಂದಿಗೆ
ಮುಂಬಡ್ತಿ ನೀಡಲಾಗಿದೆ. ಆದರೆ, ಅದಕ್ಕೆ ತಕ್ಕಂತೆ ಬಡ್ತಿ ವೇತನ ನೀಡುವ ಬದಲು ಈ ಹಿಂದೆ ಇದ್ದ ವೇತನವನ್ನೇ ನೀಡಲಾಗುತ್ತಿದೆ. ಇದೊಂದು ರೀತಿ ಹಿಂಬಡ್ತಿ ಆಗಿದೆ. ಆದ್ದರಿಂದ ಹುದ್ದೆ ಹಾಗೂ ವರ್ಗಕ್ಕೆ ಅನುಸಾರವಾಗಿ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ನೇತ್ರಾಧಿಕಾರಿ ವೃಂದಕ್ಕೆ ಸರ್ಕಾರ 2 ಹಂತದ ಪದನ್ನೋತಿ ಜಾರಿಗೊಳಿಸಿತ್ತು. ಆದರೆ, ಅದು ನೌಕರರಿಗೆ ಮಾರಕವಾಗಿದೆ. ಸ್ವಯಂಚಾಲಿತ ವೇತನ ಶ್ರೇಣಿ ನಿಗದಿಪಡಿಸದೇ 10 ವರ್ಷ ಕಾಲಮಿತಿ ವೇತನ ಶ್ರೇಣಿ ನಿಗದಿಪಡಿಸಲಾಗಿದ್ದು, ಇದು ಅವೈಜ್ಞಾನಿಕವಾಗಿದೆ. ಇದರಿಂದಾಗಿ ಮುಂಬಡ್ತಿ ವೇತನದ ಬದಲು ಹಿಂಬಡ್ತಿ ವೇತನ ಸಿಗುತ್ತಿದೆ ಎಂದರು.
ನೇತ್ರಾಧಿಕಾರಿಗಳ ವೇತನ ಶ್ರೇಣಿಯನ್ನು 16 ಸಾವಿರದಿಂದ 29,600 ರೂ. ಬದಲು ಮುಂಬಡ್ತಿ ವೇತನವನ್ನು 20 ಸಾವಿರದಿಂದ 36 ಸಾವಿರ ರೂ. ಗೆ ಹೆಚ್ಚಿಸಬೇಕು. ಮುಖ್ಯ ನೇತ್ರಾಧಿಕಾರಿಗಳ ವೇತನವನ್ನು 21,600 ರಿಂದ 40 ಸಾವಿರ ರೂ.ಗೆ ಹೆಚ್ಚಿಸಬೇಕು. ಸ್ಟಾಫ್ ನರ್ಸ್, ಫಿಜಿಯೋಥೆರಪಿ, ಡೆಂಟಲ್ ಮೆಕ್ಯಾನಿಕ್ ಸಿಬ್ಬಂದಿಗೆ ಡಿಪ್ಲೊಮಾ ಶ್ರೇಣಿ ವೇತನ ನೀಡಲು ಶಿಫಾರಸು ಮಾಡಬೇಕು. ಹಿರಿಯ ನೇತ್ರಾಧಿಕಾರಿಗಳ ಹುದ್ದೆ ಶೇ.5 ಮಾತ್ರ ಇದ್ದು, ಅದನ್ನು ಎಲ್ಲಾ ತಾಲೂಕು ಮತ್ತು ಜಿಲ್ಲಾಸ್ಪತ್ರೆ ಗಳಲ್ಲಿನ ಒಬ್ಬ ಅಧಿಕಾರಿಯನ್ನು ಮೇಲ್ದರ್ಜೆಗೇ ರಿಸಬೇಕು. ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಕೆಲಸ ಮಾಡುವವರನ್ನು ಗುರುತಿಸಿ, ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಹಮ್ಮಿಕೊಳ್ಳಲಾಗಿದ್ದ ದೇಹದಾನ ಅಭಿಯಾನದಲ್ಲಿ ಸುಮಾರು 300 ಮಂದಿ ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಂಡರು.
ಆರೋಗ್ಯ ಇಲಾಖೆಯ ನಿರ್ದೇಶಕ ಡಾ.ನಟರಾಜ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಸಚ್ಚಿದಾನಂದ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ಗೌರವಾಧ್ಯಕ್ಷ ಎಸ್.ರಾಜು ಇತರರಿದ್ದರು.