ಹಾವೇರಿ: ರಾಜ್ಯದಲ್ಲಿರುವ ವಸತಿ ನಿಲಯಗಳ ವಿದ್ಯಾರ್ಥಿಗಳ ದೂರು-ಸಮಸ್ಯೆ ಆಲಿಸಲು ಶೀಘ್ರದಲ್ಲೇ ಪರಿಷ್ಕೃತ ಸಹಾಯವಾಣಿ ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಾಯವಾಣಿ ಸ್ವರೂಪ ಕುರಿತಂತೆ ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ರಾಜ್ಯದ ಯಾವುದೇ ವಸತಿ ನಿಲಯದ ವಿದ್ಯಾರ್ಥಿಗಳು ಕರೆ ಮಾಡಿದರೆ ಅವರ ಸಮಸ್ಯೆಗಳ ಆಲಿಕೆ ಜತೆಗೆ ಪರಿಹಾರ ನಿಟ್ಟಿನಲ್ಲಿ ಪರಿಷ್ಕೃತ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಮುಖ್ಯಮಂತ್ರಿಗಳು ಶೀಘ್ರವೇ ಸಹಾಯವಾಣಿಗೆ ಚಾಲನೆ ನೀಡಲಿದ್ದಾರೆ ಎಂದರು. ವಿದ್ಯಾರ್ಥಿ ವಸತಿ ನಿಲಯಗಳ ಕೊರತೆ ನೀಗಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ವಾರದೊಳಗೆ ಪ್ರತಿ ಜಿಲ್ಲೆಗೆ ಹೆಚ್ಚುವರಿಯಾಗಿ ನಾಲ್ಕು ವಸತಿ ನಿಲಯಗಳನ್ನು ಮಂಜೂರು ಮಾಡಲಾಗುವುದು. ತಕ್ಷಣವೇ ಬಾಡಿಗೆ ಕಟ್ಟಡದಲ್ಲಿ ಹೊಸ ವಸತಿ ನಿಲಯ ಆರಂಭಿಸಲು ಸೂಚಿಸಲಾಗಿದೆ.
ವಸತಿ ನಿಲಯಗಳಲ್ಲಿ ಅವಕಾಶ ಸಿಗದೇ ಇರುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಹೊಸ ವಸತಿ ನಿಲಯಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದರು. ವಿದ್ಯಾರ್ಥಿ ವೇತನ ಪಾವತಿ ಕುರಿತು ದೂರುಗಳಿದ್ದು, ಈಗಾಗಲೇ ಶೇ.86 ಮಂದಿಗೆ ವಿದ್ಯಾರ್ಥಿ ವೇತನ ಪಾವತಿಸಲಾಗಿದೆ. ಆಧಾರ್ ನೋಂದಣಿ ಸೇರಿದಂತೆ ತಾಂತ್ರಿಕ ಕಾರಣಗಳಿಂದ ವಿದ್ಯಾರ್ಥಿ ವೇತನ ಪಾವತಿಗೆ ವಿಳಂಬವಾಗಿರುವ ಪ್ರಕರಣಗಳ ವಿವರವನ್ನು ಅಧಿಕಾರಿಗಳಿಂದ ಪಡೆಯಲಾಗಿದೆ. ಈ ಉದ್ದೇಶಕ್ಕಾಗಿ ಜ.1ರಂದು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಸಮಸ್ಯೆಯನ್ನು ಪಾರದರ್ಶಕವಾಗಿ ಬಗೆಹರಿಸಲಾಗುವುದು ಎಂದರು. ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಗುಣಮಟ್ಟದ ಆಹಾರ ಪೂರೈಕೆಯಾಗಬೇಕು. ಇದರಲ್ಲಿ ಯಾವುದೇ ರಾಜೀ ಇಲ್ಲ.
ಲೋಪ ಉಂಟಾದರೆ ಆಯಾ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದರು. ಗಂಗಾಕಲ್ಯಾಣ ಹಾಗೂ ಭೂ ಒಡೆತನ ಯೋಜನೆ ಅನುಷ್ಠಾನದಲ್ಲಿ ಲೋಪವಾಗಿದ್ದು, ಈ ಕುರಿತಂತೆ ಪಾರದರ್ಶಕವಾಗಿ ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು