ಮಹಾನಗರ: ಆಟೋ ಪ್ರಯಾಣದರ ಪರಿಷ್ಕರಣೆಯಲ್ಲಿ ಜಿಲ್ಲಾಡಳಿತವು ರಿಕ್ಷಾ ಚಾಲಕರ-ಮಾಲಕರ ಬೇಡಿಕೆಯನ್ನು ಪರಿಗಣಿಸಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಮಂಗಳವಾರದಿಂದ ಜಾರಿಗೆ ಬರಬೇಕಾಗಿದ್ದ ಪರಿಷ್ಕೃತ ಪ್ರಯಾಣದರ ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಹೀಗಾಗಿ ರಿಕ್ಷಾ ಚಾಲಕರು ಹಿಂದಿನ ದರದಲ್ಲೇ ಬಾಡಿಗೆ ಮಾಡಿದ್ದಾರೆ!
ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ (ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಡಾ| ಕುಮಾರ್ ಅವರು) ಅ.27ರಂದು ಆಟೋ ಪ್ರಯಾಣ ದರವನ್ನು ನ.15ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿದ್ದರು. ಆದರೆ ಈ ಪರಿಷ್ಕೃತ ದರ ಬೇಡಿಕೆಗಿಂತ ಕಡಿಮೆ ಇದ್ದುದರಿಂದ ಅಧಿಸೂಚನೆ ಹೊರಡಿಸಿದ ಕ್ಷಣದಿಂದಲೇ ಚಾಲಕ-ಮಾಲಕರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿಯವರನ್ನು ಭೇಟಿಯಾದ ಆಟೋ ರಿಕ್ಷಾ ಚಾಲಕ – ಮಾಲಕರ ಒಕ್ಕೂಟದ ಪದಾಧಿಕಾರಿಗಳು ದರ ಪರಿಷ್ಕರಣೆಯಲ್ಲಿ ತಮಗೆ ಅನ್ಯಾಯವಾಗಿದ್ದು, ಆದೇಶವನ್ನು ತಡೆ ಹಿಡಿದು ನ್ಯಾಯಯುತ ದರವನ್ನು ಮರುನಿಗದಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. “ಸುದಿನ’ ಜತೆ ಮಾತನಾಡಿದ ಮಂಗಳೂರು ನಗರ ಆಟೋ ರಿಕ್ಷಾ ಚಾಲಕ-ಮಾಲಕರ ಒಕ್ಕೂಟದ ಗೌರವ ಸಲಹೆಗಾರ ಅರುಣ್ ಕುಮಾರ್ ಅವರು, ಜಿಲ್ಲಾಧಿಕಾರಿ ನಮ್ಮ ಬೇಡಿಕೆಗೆ ಸ್ಪಂದಿಸಿದ್ದು, ನಾಲ್ಕು ದಿನದಲ್ಲಿ ಎಲ್ಲವನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ನಾಲ್ಕು ದಿನ ಕಾಯುತ್ತೇವೆ. ಪರಿಷ್ಕೃತ ದರವನ್ನು ಅಳವಡಿಸಿಕೊಳ್ಳದಂತೆ ಎಲ್ಲ ಸಂಘಗಳ ಮೂಲಕ ಚಾಲಕ-ಮಾಲಕರಿಗೆ ಸಂದೇಶ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೇಡಿಕೆ ಏನಿತ್ತು? ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ, ಆಟೋ ಚಾಲಕರು ಉಡುಪಿ ಜಿಲ್ಲೆಯ ಮಾದರಿಯಲ್ಲೇ ದ.ಕ ಜಿಲ್ಲೆಯಲ್ಲೂ ದರ ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಉಡುಪಿಯಲ್ಲಿ ಮೊದಲ 1.5 ಕಿ.ಮೀ.ವರೆಗೆ 40 ರೂ. ಅನಂತರ ಪ್ರತಿ ಕಿ.ಮೀ.ಗೆ 20 ರೂ. ದರ ನಿಗದಿ ಪಡಿಸಲಾಗಿದೆ. ಆದರೆ ದ.ಕ ಜಿಲ್ಲಾಡಳಿತ ನೂತನ ಆದೇಶದಲ್ಲಿ ಕನಿಷ್ಠ ದರ 1.5 ಕಿ.ಮೀ.ವರೆಗೆ 30ರಿಂದ 35ಕ್ಕೆ ಏರಿಸಿದೆ. ಅನಂತರದ ಪ್ರತಿ ಕಿ.ಮೀ.ಗೆ 17 ರೂ., ಕಾಯುವ ದರ ಮೊದಲ 15 ನಿಮಿಷ ಉಚಿತ, ಅನಂತರದ 15 ನಿಮಿಷದ ವರೆಗೆ 5 ರೂ., ಹೀಗೆ ದರ ಏರಿಕೆ ಮಾಡಿದೆ. 2020ರ ಏ.1ರಂದು ಸದ್ಯ ಇರುವ ದರ ಜಾರಿಗೆ ಬಂದಿದ್ದು, ಪರಿಷ್ಕರಣೆಯಾಗದೆ ಎರಡು ವರ್ಷವಾಗಿರುವುದರಿಂದ ಉಡುಪಿ ಮಾದರಿ ಪರಿಷ್ಕರಣೆ ಸರಿಯಾದ ಕ್ರಮ ಎನ್ನುವುದು ಚಾಲಕ – ಮಾಲಕರ ಬೇಡಿಕೆಯಾಗಿದೆ.
ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಟೋ ರಿಕ್ಷಾ ಯೂನಿಯನ್‌ನವರು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಆರ್‌ಟಿಒ, ಪೊಲೀಸ್ ಅಧಿಕಾರಿಗಳು, ತಹಶೀಲ್ದಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನೊಳಗೊಂಡ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ವಾರಾಂತ್ಯದೊಳಗೆ ಸಭೆ ನಡೆಸಿ ಹೊಸ ಆದೇಶ ಹೊರಡಿಸುತ್ತೇನೆ. -ರವಿಕುಮಾರ್ ಎಂ.ಆರ್., ದ.ಕ. ಜಿಲ್ಲಾಧಿಕಾರಿ