ಉಂಗುರ, ಆಭರಣಗಳಿಗೆ ಬಳಸುವ ಅಪರೂಪದ ಹರಳುಗಳಿಗಿರುವ ಬೇಡಿಕೆ, ಮಾರುಕಟ್ಟೆ, ಪಶ್ಚಿಮ ಘಟ್ಟದ ಗಣಿಗಾರಿಕೆ ಹಿಂದಿನ ಮಾಫಿಯಾ, ಆಡಳಿಶಾಹಿ ಮತ್ತು ಅಧಿಕಾರಶಾಹಿ ವ್ಯವಸ್ಥೆ, ಇವೆಲ್ಲದರ ನಡುವೆ ನಲುಗಿ ಹೋಗುವ ಪರಿಸರ, ನರಳುವ ಜನಸಾಮಾನ್ಯರ ಬದುಕು ಇವೆಲ್ಲದಕ್ಕೂ ತನ್ನದೇ ಆದ ಮಾರ್ಗದಲ್ಲಿ ತಾರ್ಕಿಕ ಅಂತ್ಯ ಹಾಡುವವನೇ “ಮೇಲೊಬ್ಬ ಮಾಯಾವಿ’. ಆ “ಮಾಯಾವಿ’ ಯಾರು? ಅನ್ನೋ ಕುತೂಹಲವನ್ನು ತೆರೆಮೇಲೆ ನೋಡುವುದೇ ಒಳ್ಳೆಯದು.
ನಿರ್ದೇಶಕ ನವೀನ್ ಕೃಷ್ಣ ಆಯ್ಕೆ ಮಾಡಿರುವ ಪಶ್ಚಿಮ ಘಟ್ಟದ ಹರಳು ಮಾಫಿಯಾ ಕಥಾಹಂದರ ಎಲ್ಲರಿಗೂ ಕನೆಕ್ಟ್ ಆಗುವಂತಿದೆ. ಆಯ್ಕೆ ಮಾಡಿಕೊಂಡ ಕಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಮೇಲೆ ತರುವ ಸಾಧ್ಯತೆಗಳಿದ್ದವು. ಚಿತ್ರದ ಕಥೆ ಚೆನ್ನಾಗಿದ್ದರೂ, ಅದನ್ನು ಸನ್ನಿವೇಶಗಳ ಮೂಲಕ ತೆರೆಮೇಲೆ ತರುವ ಚಿತ್ರಕಥೆ ಮತ್ತು ಸಂಭಾಷಣೆ ಚಿತ್ರಕ್ಕೆ ಅಲ್ಲಲ್ಲಿ ಹಿನ್ನಡೆಯಾಗಿದೆ. ಇಡೀ ಸಿನಿಮಾದ ಬಹುಭಾಗ ಇರುವೆ, ಸಕ್ಕರೆ ಮತ್ತು ಸುಲೇಮಾನ್ ಎಂಬ ಮೂರು ಪಾತ್ರಗಳ ಸುತ್ತ ನಡೆಯುತ್ತದೆ.
ಸಂಚಾರಿ ವಿಜಯ್ ಅರೆ ಮಾನಸಿಕ ಅಸ್ವಸ್ಥನಂತಿರುವ ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ, ನಾಟಿ ಚಿಕಿತ್ಸೆ ಮಾಡುವ ಕಾಡಿನ ಹುಡುಗಿಯ ಪಾತ್ರದಲ್ಲಿ ನಾಯಕಿ ಅನನ್ಯಾ ಶೆಟ್ಟಿ, ಹರಳು ಮಾಫಿಯಾದ ಖಳನಾಯಕ ಸುಲೇಮಾನ್ ಆಗಿ ಚಂದ್ರಚೂಡ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ಸಂಚಾರಿ ವಿಜಯ್ ತನ್ನ ಅಭಿನಯದ ಮೂಲಕ ನೋಡುಗರನ್ನು ಸೆಳೆಯುತ್ತಾರೆ.
ಸಕ್ಕರೆ ತೆರೆಮೇಲೆ ಇರುವಷ್ಟು ಹೊತ್ತು ಇಷ್ಟವಾಗುತ್ತದೆ. ಅತಿಯಾದ ಅಬ್ಬರ ಮತ್ತು ಆರ್ಭಟಗಳಿಂದಲೇ ಸದ್ದು ಮಾಡುವ ಸುಲೇಮಾನ್ ಅನೇಕ ಕಡೆಗಳಲ್ಲಿ ಕಿರಿಕಿರಿ ಎನಿಸುತ್ತಾನೆ.
ಚಿತ್ರದ ಎರಡು ಹಾಡುಗಳು ಥಿಯೇಟರ್‌ನ ಹೊರಗೂ ಗುನುಗುವಂತಿದೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ತಾಂತ್ರಿಕವಾಗಿ ಗಮನ ಸೆಳೆಯುತ್ತದೆ. ಒಟ್ಟಾರೆ ಸಂಚಾರಿ ವಿಜಯ್ ನೆನಪಿನಲ್ಲಿ ತೆರೆಗೆ ಬಂದ “ಮೇಲೊಬ್ಬ ಮಾಯಾವಿ’ ಒಂದೊಳ್ಳೆ ಪ್ರಯತ್ನ ಎನ್ನಲು ಅಡ್ಡಿಯಿಲ್ಲ.
ಜಿಎಸ್ ಕೆ