Advertisement

ಕಾಮಿಡಿಗೆ ಕನಸಿನಲ್ಲೂ ನಗಬಹುದು!

10:23 AM Dec 08, 2019 | Suhan S |

ಅದೊಂದು ಶ್ರೀಮಂತ ಕುಟುಂಬದ ಮನೆ. ಒಮ್ಮೆ ವಾರಾಂತ್ಯದಲ್ಲಿ ಆ ಮನೆಯಲ್ಲಿರುವವರೆಲ್ಲರೂ ಬೇರೆ ಬೇರ ಕಾರಣಗಳಿಂದ ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಹೀಗಿರುವಾಗ ಮನೆಯಲ್ಲಿ ವಯಸ್ಸಿಗೆ ಬಂದ ಮಗನನ್ನು ಬಿಟ್ಟು ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ಹೊರಡುತ್ತಾರೆ. ಅದೇ ಸಂದರ್ಭದಲ್ಲಿ, ಆ ಮನೆಗೆ ಅಪರಿಚಿತ

Advertisement

ಹುಡುಗಿಯೊಬ್ಬಳ ಆಗಮನವಾಗುತ್ತದೆ. ಒಬ್ಬನೇ ಹುಡುಗನಿರುವ ಮನೆಗೆ ಹುಡುಗಿಯೊಬ್ಬಳು ಬಂದ ನಂತರ ಅಲ್ಲಿ ಏನೇನಾಗಬಹುದು? ಸಾಮಾನ್ಯವಾಗಿ ಎಲ್ಲರೂ ಏನು ಊಹಿಸಿಕೊಳ್ಳುತ್ತಾರೋ, ಅದೆಲ್ಲದಕ್ಕಿಂತ ಬೇರೆಯದ್ದೇ ಅಲ್ಲಿ ನಡೆಯುತ್ತದೆ. ಹಾಗಾದ್ರೆ, ಆ ಮನೆಯಲ್ಲಿ ಏನೇನು ನಡೆಯುತ್ತದೆ ಅನ್ನೋ ಕುತೂಹಲವಿದ್ದರೆ, ಈ ವಾರ ತೆರೆಗೆ ಬಂದಿರುವ ಕಾಮಿಡಿ ಕಂ ಸಸ್ಪೆನ್ಸ್‌ ಕಥಾಹಂದರದ ಹಗಲು ಕನಸುಚಿತ್ರ ನೋಡಲು ಅಡ್ಡಿಯಿಲ್ಲ.

ಕನ್ನಡದ ಹಿರಿಯ ನಿರ್ದೇಶಕ ದಿನೇಶ್‌ ಬಾಬು ಹಗಲು ಕನಸುಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ತೆರೆಗೆ ತಂದಿದ್ದಾರೆ. ಬಾಬು ನಿರ್ದೇಶನದ ಹಿಂದಿನ ಚಿತ್ರಗಳಲ್ಲಿ ಇರುವಂತೆ ಹಗಲು ಕನಸುಚಿತ್ರದಲ್ಲೂ ಒಂದಷ್ಟು ಟ್ವಿಸ್ಟ್‌, ಟರ್ನ್ ಜೊತೆಯಲ್ಲಿ ಕಾಮಿಡಿ ಸೇರಿಕೊಂಡು ಪ್ರೇಕ್ಷಕರನ್ನು ಕ್ಲೈಮ್ಯಾಕ್ಸ್‌ವರೆಗೂ ಸುಲಲಿತವಾಗಿ ಕರೆದುಕೊಂಡು ಹೋಗುತ್ತದೆ. ನಿರ್ದೇಶಕ ಬಾಬು ಬಾಬು ಒಂದೇ ಮನೆಯಲ್ಲಿ, ಆರೇಳು ಪಾತ್ರಗಳನ್ನು ಇಟ್ಟುಕೊಂಡು ಎಲ್ಲೂ ಬೋರ್‌ ಹೊಡೆಸದಂತೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅದು ಚಿತ್ರದ ದೊಡ್ಡ ಹೆಗ್ಗಳಿಕೆ ಕೂಡ ಹೌದು.

ಇನ್ನು ಚಿತ್ರದಲ್ಲಿ ಕಲಾವಿದರ ಅಭಿನಯದ ಬಗ್ಗೆ ಹೇಳುವುದಾದರೆ ಆನಂದ್‌ ಎಂದಿನಂತೆ ಲೀಲಾಜಾಲವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ನವನಟಿ ಸನಿಹಾ ಯಾದವ್‌ ಕೂಡ ಮೊದಲ ಚಿತ್ರದಲ್ಲೆ ತಮ್ಮ ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ವಾಣಿಶ್ರೀ, ನಾರಾಯಣ ಸ್ವಾಮಿ, ನೀನಾಸಂ ಅಶ್ವಥ್‌, ಮನದೀಪ್‌ ರಾಯ್‌, ಅಶ್ವಿ‌ನ್‌ ಹಾಸನ್‌, ಚಿತ್ಕಲಾ ಬಿರಾದಾರ್‌, ಶ್ವೇತಾ ಎಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಚಿತ್ರದ ಸಂಕಲನ ಕಾರ್ಯ ಇನ್ನಷ್ಟು ಮೊನಚಾಗಿದ್ದರೆ ಮತ್ತು ಹಿನ್ನೆಲೆ ಸಂಗೀತದ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಕೊಟ್ಟಿದ್ದರೆ, “ಹಗಲು ಕನಸುಇನ್ನಷ್ಟು ಪರಿಣಾಮಕಾರಿಯಾಗಿ ತೆರೆಮೇಲೆ ತರಬಹುದಿತ್ತು. ಚಿತ್ರದ ಕೆಲ ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದರೆ,ಚಿತ್ರಕ್ಕೆ ಕೊಂಚ ವೇಗ ಕೊಟ್ಟಿದ್ದರೆ, “ಹಗಲು ಕನಸುಬೇಗ ಮುಗಿಸಬಹುದಿತ್ತು. ಒಟ್ಟಾರೆ ಮಾಮೂಲಿ ಲವ್‌, ಆ್ಯಕ್ಷನ್‌, ಹಾರರ್‌, ಥ್ರಿಲ್ಲರ್‌ ಚಿತ್ರಗಳನ್ನು ನೋಡಿ ಬೋರ್‌ ಆಗಿದೆ ಎನ್ನುವ ಪ್ರೇಕ್ಷಕರು, ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಹೋದರೆ ಹಗಲು ಕನಸುಒಂದೊಳ್ಳೆ ಮನರಂಜನೆ ನೀಡುತ್ತದೆ.

Advertisement

 

ಕಾರ್ತಿಕ್‌

Advertisement

Udayavani is now on Telegram. Click here to join our channel and stay updated with the latest news.

Next