18 ಗಂಟೆ ನಿದ್ದೆ 6 ಗಂಟೆ ಎಚ್ಚರ. ಹಾಗಂತ ಆತ ಸೋಮಾರಿಯಲ್ಲ. ಬೇಡವೆಂದರೂ ಕಾಯಿಲೆಯೊಂದು ಆತನನ್ನು ಬಿಟ್ಟುಬಿಡದಂತೆ ಕಾಡುತ್ತಿದೆ. ಎಚ್ಚರವಿರುವ ಹೊತ್ತಲ್ಲಿ ಆತ ಗುಡ್‌ಬಾಯ್. ಅಪ್ಪಟ ಪ್ರೇಮಿ, ಪಕ್ಕಾ ಫ್ಯಾಮಿಲಿ ಮ್ಯಾನ್ ಜೊತೆಗೆ ಮುದ್ದಿನ ಚಿಕ್ಕಪ್ಪ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುತ್ತದೆ. ಆದರೆ, ಅಂದುಕೊಂಡಂತೆ ಎಲ್ಲವೂ ನಡೆಯಬೇಕಲ್ಲ. ಆ ಒಂದು ಘಟನೆ ಆತನನ್ನು ಇನ್ನಿಲ್ಲದಂತೆ ಕಾಡುತ್ತದೆ. ಆತನೊಳಗಿನ ಕುಂಭಕರ್ಣ ಎದ್ದು ನಿಲ್ಲುತ್ತಾನೆ.
ನೀವು “ಜಂಟಲ್‌ಮೆನ್’ ಸಿನಿಮಾ ನೋಡಿದರೆ ಅಲ್ಲಿ ನಿಮಗೆ ಪ್ರೀತಿ, ಪ್ರೇಮ ಜೊತೆಗೆ ಭಾವುಕ ಜಗತ್ತೂಂದು ತೆರೆದುಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಬರುವ ಸಿನಿಮಾಗಳಲ್ಲಿ ಕಥೆಯಿಲ್ಲ, ಕಥೆ ಇದ್ದರೂ ಅದು ಕಾಡುವುದಿಲ್ಲ ಎಂಬ ಮಾತಿದೆ. ಆದರೆ, “ಜಂಟಲ್ ಮೆನ್’ ಒಂದು ಗಟ್ಟಿ ಕಥೆ ಇರುವ ಹಾಗೂ ಅಷ್ಟೇ ಕಾಡುವ ಸಿನಿಮಾ. ಸಿನಿಮಾ ನೋಡ ನೋಡುತ್ತಲೇ ನಿಮ್ಮ ಕಣ್ಣಂಚು ಒದ್ದೆಯಾಗಿರುತ್ತದೆ ಎಂದರೆ ಅದಕ್ಕೆ ಕಾರಣ ಸಿನಿಮಾದ ಕಥೆ ಹಾಗೂ ಸಾಗುವ ರೀತಿ. ನಿರ್ದೇಶಕ ಜಡೇಶ್ ಒಂದು ಹೊಸ ಬಗೆಯ ಕಥೆಯನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡಿದ್ದಾರೆ. ಮುಖ್ಯವಾಗಿ ಚಿತ್ರದ ನಿರೂಪಣೆ ಕುತೂಹಲದ ಜೊತೆ ಜೊತೆಗೆ ಪ್ರೇಕ್ಷಕರಲ್ಲಿ ಸಣ್ಣದೊಂದು ಚಡಪಡಿಕೆ ಉಂಟಾಗುವಂತೆ ಮಾಡುತ್ತದೆ.
ಅದಕ್ಕೆ ಕಾರಣ ಕಥೆಯ ಜೊತೆಗೆ ಪ್ರೇಕ್ಷಕ ಬೇಗನೇ ಕನೆಕ್ಟ್ ಆಗುತ್ತಾನೆ. ಎಲ್ಲೋ ನಮ್ಮ ಅಕ್ಕಪಕ್ಕದಲ್ಲಿ ಹೀಗಾದರೆ ಹೇಗೆ ಫಿಲ್ ಆಗುತ್ತದೋ ಆ ತರಹದ ಒಂದು ಭಾವ ಮೂಡುತ್ತದೆ. ನಿರ್ದೇಶಕ ಜಡೇಶ್ ಒಂದು ಕಥೆಯಲ್ಲಿ ಹಲವು ಅಂಶಗಳನ್ನು ಹೇಳುತ್ತಾ ಹೋಗಿದ್ದಾರೆ. ನಿದ್ರಾ ಕಾಯಿಲೆಯಿಂದ ಬಳಲುವ ನಾಯಕನ ಸಮಸ್ಯೆ ಒಂದೆಡೆಯಾದರೆ, ಹೆಣ್ಣುಮಕ್ಕಳ ಕಿಡ್ನಾಪ್ ಹಾಗೂ ಅದರ ಹಿಂದಿನ ಮಾಫಿಯಾವನ್ನು ಹೇಳುತ್ತಾ ಹೋಗಿದ್ದಾರೆ. ಮುಖ್ಯವಾಗಿ ಪ್ರೇಕ್ಷಕರ ಊಹಿಸಿಕೊಂಡಂತೆ ಇಲ್ಲಿ ಯಾವುದೂ ನಡೆಯೋದಿಲ್ಲ. ಆತನ ಊಹೆ ಕ್ಲೈಮ್ಯಾಕ್ಸ್‌ನಲ್ಲಿ ಬುಡಮೇಲಾಗುತ್ತದೆ. ಅಂತಹ ಟ್ವಿಸ್ಟ್‌ವೊಂದನ್ನು ನಿರ್ದೇಶಕರು ಇಟ್ಟಿದ್ದಾರೆ. ಅದೇನೆಂಬುದನ್ನು ನೀವು ಸಿನಿಮಾದಲ್ಲೇ ನೋಡಿ.
ಚಿತ್ರದ ಮೊದಲರ್ಧ ಪ್ರೀತಿ, ಪ್ರೇಮ, ಹೊಡೆದಾಟ ಬಡಿದಾಟದಲ್ಲಿ ಸಾಗಿದರೆ, ದ್ವಿತೀಯಾರ್ಧ ಸಿನಿಮಾದ ನಿಜವಾದ ಜೀವಾಳ. ಕಥೆಯ ಪ್ರಮುಖ ಅಂಶ ತೆರೆದುಕೊಳ್ಳುತ್ತದೆ. ನಿರ್ದೇಶಕರು ಇಲ್ಲಿ ಕಥೆಗೆ ಪೂರಕವಾದ ಪರಿಸರ ಹುಡುಕಿರೋದು ಸಿನಿಮಾದ ಮತ್ತೂಂದು ಪ್ಲಸ್. ಈ ಚಿತ್ರದ ನಿರ್ಮಾಪಕ ಗುರುದೇಶಪಾಂಡೆ ಅವರ ಸಿನಿಮಾ ಪ್ರೀತಿ ತೆರೆಮೇಲೆ ಕಾಣುತ್ತದೆ.
ನಾಯಕ ಪ್ರಜ್ವಲ್ ದೇವರಾಜ್ ಇದುವರೆಗೆ ಮಾಡದಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಬ್ಬ ಪ್ರೇಮಿಯಾಗಿ, ಫ್ಯಾಮಿಲಿ ಮ್ಯಾನ್ ಆಗಿ ಅವರು ಇಷ್ಟವಾಗುತ್ತಾರೆ. ಅವರ ಚಡಪಡಿಕೆ, ಕೋಪ, ಸಿಟ್ಟು ಎಲ್ಲವೂ ಆ ಪಾತ್ರದ ತೂಕವನ್ನು ಹೆಚ್ಚಿಸಿದೆ. ನಾಯಕಿ ನಿಶ್ವಿಕಾ ನಾಯ್ಡು ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಂಚಾರಿ ವಿಜಯ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ ಮತ್ತು ಈ ಸಿನಿಮಾದ ಅಚ್ಚರಿ ಕೂಡಾ. ಅಜನೀಶ್ ಲೋಕನಾಥ್ ಸಂಗೀತದ ಹಾಡುಗಳು ಸನ್ನಿವೇಶಕ್ಕೆ ತಕ್ಕಂತಿವೆ.
-ರವಿ ರೈ