Advertisement

ಬಬ್ರೂ ವಾಹನದೊಳಗೊಂದು ಹ್ಯಾಪಿ ಜರ್ನಿ

10:21 AM Dec 08, 2019 | Suhan S |

ಅರ್ಜುನ್‌ ನೀನು ಹೇಳಿದಂಗೆ ಈ ಕಾರನ್ನ ತಗೊಂಡ್‌ ಹೋದ್ರೆ ಹತ್ತುಕೋಟಿ ಸಿಗುತ್ತಾ… ‘

Advertisement

ಸನಾ ಅಲಿಯಾಸ್‌ ಸೃಷ್ಟಿ ಆ ದಟ್ಟ ಕಾಡಿನ ನಡುವೆ ಈ ಡೈಲಾಗ್‌ ಹೇಳುವ ಹೊತ್ತಿಗೆ, ಸುಖಕರವಾಗಿದ್ದ ಕಾರಿನ ಪಯಣ ಒಂದಷ್ಟು ಗೊಂದಲಕ್ಕೀಡಾಗಿರುತ್ತೆ. ಹಾಗಾದರೆ, ಆ ಕಾರಲ್ಲಿ ಅಷ್ಟೊಂದು ಹಣ ಇರುತ್ತಾ ಅಥವಾ ಬೆಲೆ ಬಾಳುವ ವಸ್ತು ಏನಾದ್ರೂ ಇರುತ್ತಾ? ಕೊನೆಗೆ ಅವರಂದುಕೊಂಡ ಕೆಲಸ ಆಗುತ್ತಾ? ದಾರಿ ಮಧ್ಯೆ ಸಿಗುವ ಅಪರಿಚಿತ ಯಾರು, ಆಗಾಗ ಕಾಡುವ ರಗಡ್‌ ವ್ಯಕ್ತಿ ಯಾರು, ಅವನೇಕೆ ಆ ಕಾರನ್ನು ಹಿಂಬಾಲಿಸುತ್ತಾನೆ..? ಹೀಗೆ ಕಾಡುವ ಹತ್ತಾರು ಪ್ರಶ್ನೆಗಳ ಜೊತೆ ಜೊತೆಯಲ್ಲೇ ಸಣ್ಣ ತಳಮಳ, ಆತಂಕ, ಚಿಗುರೊಡೆದ ಪ್ರೀತಿ, ಆಸೆದುರಾಸೆಗಳ ಜೊತೆಗೆ ಒಂದು ಬೆಚ್ಚನೆಯ ಅನುಭವ ಕಟ್ಟಿಕೊಡುವ ಪ್ರಯತ್ನ ಬಬ್ರೂಕಥೆ.

ಇಷ್ಟು ಹೇಳಿದ ಮೇಲೆ ಇದೊಂದು ಜರ್ನಿ ಕಥೆ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಕಥೆಯಲ್ಲಿ ಹೇಳಿಕೊಳ್ಳುವ ವಿಶೇಷತೆ ಇಲ್ಲ. ಆದರೆ, ಅದನ್ನು ಅಷ್ಟೇ ರಸವತ್ತಾಗಿ ನಿರೂಪಿಸಿರುವ ರೀತಿ ಇಷ್ಟವಾಗುತ್ತೆ. ಇಲ್ಲಿ ಕಥೆ ಸಿಂಪಲ್‌, ಅದನ್ನು ತೋರಿಸಿರುವ ರೀತಿ ವಂಡರ್‌ಫ‌ುಲ್‌. ಹಾಗಾಗಿ ಬಬ್ರೂಪಯಣ ಸಾಗಿದಂತೆಲ್ಲಾ ಹಿತಾನುಭವ ಎನಿಸುತ್ತಲೇ ಸಣ್ಣ ಕುತೂಹಲಕ್ಕೂ ಕಾರಣವಾಗುತ್ತಾ ಹೋಗುತ್ತದೆ. ಕನ್ನಡದಲ್ಲಿ ಈ ರೀತಿಯ ಪ್ರಯೋಗ ಹೊಸದಲ್ಲ. ಆದರೆ, ಇಡೀ ಚಿತ್ರ ಯುಎಸ್‌ ಎನಲ್ಲೇ ಕಟ್ಟಿಕೊಟ್ಟಿರುವುದು ಹೊಸತು. ವಿದೇಶಿ ನೆಲದಲ್ಲಿ ಚಿತ್ರೀಕರಿಸಿದರೂ, ಅಲ್ಲೂ ಕನ್ನಡದ ಕಂಪು ಸೂಸುತ್ತದೆ ಅನ್ನುವುದಕ್ಕೆ ಕೆಲ ಪಾತ್ರಗಳು ಧರಿಸಿರುವ ಟೀ ಶರ್ಟ್‌ ಮೇಲಿನ ಕನ್ನಡ ಬರಹಗಳು ಸಾಕ್ಷಿಯಾಗುತ್ತವೆ. ವಿದೇಶಿ ನೆಲದಲ್ಲಿ ಕನ್ನಡಿಗರ ಕಥೆಯೊಂದು ಸರಾಗವಾಗಿ ಸಾಗುವುದರಿಂದ ಇದೊಂದು ಫ್ರೆಶ್‌ ಫಿಲ್ ಕೊಡುವ ಚಿತ್ರ ಎನ್ನಬಹುದು. ಬೆರಳೆಣಿಕೆ ಪಾತ್ರಗಳನ್ನಿಟ್ಟುಕೊಂಡು ಒಂದೇ ಒಂದು ಕಥೆಯ ಎಳೆಯೊಂದಿಗೆ, ಎರಡು ತಾಸು ಸುಮ್ಮನೆ ಕೂರಿಸುವ ತಾಕತ್ತು ಇರುವುದು, ಚಿತ್ರದ ಸ್ಕ್ರೀನ್‌ಪ್ಲೇ. ಇಲ್ಲಿ ಒಂದೇ ಸಲ ಮೂರು ಟ್ರ್ಯಾಕ್‌ನಲ್ಲಿ ಕಥೆ ಬಿಚ್ಚಿಕೊಳ್ಳುತ್ತೆ. ಅವರೆಲ್ಲಾ ಯಾರು, ಅಲ್ಲೇನು ನಡೆಯುತ್ತಿದೆ, ಯಾಕೆ ಅಂದುಕೊಳ್ಳುವ ಹೊತ್ತಿಗೆ, ಒಂದೊಂದಕ್ಕೇ ಲಿಂಕ್‌ ಕಲ್ಪಿಸಿ, ಚಿತ್ರದ ಕಥೆಗೊಂದು ಅಂತ್ಯ ಕಾಣಿಸಲಾಗಿದೆ. ಕೆಲವು ಕಡೆ ಸಣ್ಣಪುಟ್ಟ ಎಡವಟ್ಟುಗಳಾಗಿವೆ. ಹಿನ್ನೆಲೆ ಸಂಗೀತ ಮತ್ತು ಕೆಲವೊಂದು ದೃಶ್ಯವೈಭವ ಆ ತಪ್ಪುಗಳನ್ನೆಲ್ಲಾ ಮರೆ ಮಾಚುತ್ತದೆ. ಮೊದಲರ್ಧ ಮಂದಗತಿಯಲ್ಲೇ ಸಾಗುವ ಚಿತ್ರ, ದ್ವಿತಿಯಾರ್ಧದಲ್ಲೊಂದು ತಿರುವು ಪಡೆದುಕೊಳ್ಳುತ್ತೆ.

ಅಲ್ಲಿಂದ ಆ ಬಬ್ರೂವೇಗ ಮತ್ತಷ್ಟು ಹೆಚ್ಚುತ್ತದೆ. ಕಾರೊಂದರ ಪಯಣದಲ್ಲಿ ಒಂದಷ್ಟು ವಿಷಯಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಆ ವಿಷಯದಲ್ಲಿ ಅನೇಕ ಟೆಸ್ಟುಟ್ವಿಸ್ಟುಗಳೂ ಇವೆ. ಎಲ್ಲೋ ಒಂದು ಕಡೆ ಚಿತ್ರ ಟ್ರಾಕ್‌ ತಪ್ಪುತ್ತಿದೆ ಅನ್ನುವಷ್ಟರಲ್ಲೇ ನಿರ್ದೇಶಕರು ಸಣ್ಣದ್ದೊಂದು ಟ್ವಿಸ್ಟ್‌ ಇಟ್ಟು, ಪುನಃ ಎಲ್ಲರನ್ನೂ ಆ ಕಾರಿನೊಳಗೆ ಕೂರಿಸಿ ಪಯಣ ಮಾಡುವಂತೆ ಮಾಡಿರುವ ಜಾಣ್ಮೆ ಮೆಚ್ಚಬೇಕು. ಹಾಗಾದರೆ, ಬಬ್ರೂಯಾರು, ಆ ಕಾರಲ್ಲಿ ಯಾರೆಲ್ಲಾ ಇರುತ್ತಾರೆ, ಎಲ್ಲಿಗೆ ಹೊರಡುತ್ತಾರೆ, ಏನೆಲ್ಲಾ ಆಗುತ್ತೆ ಎಂಬ ಕುತೂಹಲವಿದ್ದರೆ, ಒಮ್ಮೆ ಬಬ್ರೂಜೊತೆ ರೌಂಡ್‌ ಹೋಗಿಬರಲ್ಲಡ್ಡಿಯಿಲ್ಲ. ಕನ್ನಡಿಗನೊಬ್ಬ ಕೆಲಸ ಅರಸಿ ಅಮೆರಿಕ ಬರುವಾಗ ಫ್ಲೈಟ್‌ನಲ್ಲಿ ಕನ್ನಡದ ಒಬ್ಟಾಕೆ ಹಿಂಬದಿಯಲ್ಲಿ ಕುಳಿತು ಪರಿಚಯವಾಗಿರುತ್ತಾಳೆ. ನಂತರ ಇಬ್ಬರೂ ಬೇರೆ ಕಡೆ ಕೆಲಸಕ್ಕೆ ಹೊರಡುತ್ತಾರೆ. ಅವಳ ಫೋನ್‌ ನಂಬರ್‌, ವಿಳಾಸ ಯಾವುದನ್ನೂ ಕೇಳದ ಅವನಿಗೆ ಅವಳ ಇಮೇಲ್‌ ವಿಳಾಸ ಸಿಕ್ಕಿರುತ್ತೆ .ಅದರಿಂದಲೇ ಅವನು ಮಾತಿಗೆ ಸಂಪರ್ಕಿಸಿ, ಪ್ರೀತಿಸೋಕು ಮುಂದಾಗಿರುತ್ತಾನೆ.

ಅವಳು ಇರೋದು, ಸಾವಿರಾರು ಕಿಲೋ ಮೀ. ದೂರದ ಊರಲ್ಲಿ. ಅವಳನ್ನು ಭೇಟಿಯಾಗಿ, ತನ್ನ ಪ್ರೀತಿಯನ್ನು ಹೇಳುವ ಹಂಬಲ. ಕೊನೆಗೆ ಒಂದು ಕಾರು ಬಾಡಿಗೆ ಪಡೆದು ಅವಳಲ್ಲಿಗೆ ಹೋಗುವ ನಿರ್ಧಾರ ಮಾಡುವ ಅವನಿಗೆ ಕಾರು ಸಿಗಲ್ಲ. ಆ ಕಾರನ್ನು ಅದಾಗಲೇ ಬಾಡಿಗೆ ಪಡೆದಿದ್ದ ಕನ್ನಡದ ಒಬ್ಟಾಕೆ ಅವನೂ ಹೋಗುವ ಜಾಗಕ್ಕೆ ಹೊರಟಿರುತ್ತಾಳೆ. ಕೊನೆಗೆ ಇಬ್ಬರ ಪರಿಚಯವಾಗಿ, ಒಂದೇ ಕಾರಲ್ಲಿ ಮೂರು ದಿನಗಳ ಪಯಣ ಶುರು ಮಾಡುತ್ತಾರೆ. ಅವರೊಂದಿಗೆ ಒಬ್ಬ ಸ್ವೀಡನ್‌ ಪ್ರಜೆ ಸೇರಿಕೊಳ್ಳುತ್ತಾನೆ. ಆ ಕಾರಲ್ಲೊಂದು ವಸ್ತು ಇರೋದು ಯಾರಿಗೂ ಗೊತ್ತಿಲ್ಲ. ಅಪರಿಚಿತ ವ್ಯಕ್ತಿಯೊಬ್ಬ ಕಾರು ಹಿಂಬಾಲಿಡುತ್ತಿರುವುದು ಗೊತ್ತಾದಾಗ ಒಂದಷ್ಟು ಘಟನೆಗಳು ನಡೆಯುತ್ತವೆ. ಅದೇನೆಂಬುದೇ ಸಸ್ಪೆನ್ಸ್‌. ಸುಮನ್‌ ನಗರ್‌ಕರ್‌ ಬಹಳ ದಿನಗಳ ಬಳಿಕ ಕಾಣಿಸಿಕೊಂಡರೂ, ಒಳ್ಳೆಯ ಪಾತ್ರದ ಮೂಲಕ ಎಂಟ್ರಿಯಾಗಿದ್ದಾರೆ. ತಮ್ಮ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಮಾಹಿ ಹಿರೇಮಠ್ ನಟನೆಯಲ್ಲಿ ಲವಲವಿಕೆ ಇದೆ.

Advertisement

ಡೈಲಾಗ್‌ ಡಿಲವರಿಯಲ್ಲಿ ಇನ್ನಷ್ಟು ಫೋರ್ಸ್‌ ಬೇಕು. ಉಳಿದಂತೆ ಸ್ಪ್ಯಾನಿಶ್‌ ನಟ ರೇ ಟೋಸ್ಟಡೊ ಪಾತ್ರದಲ್ಲಿ ಇಷ್ಟವಾದರೆ, ಸನ್ನಿ ಮೋಜ ಅವರು ಬರೀ ಬಿಲ್ಡಪ್‌ನಲ್ಲೇ ಕುತೂಹಲ ಕೆರಳಿಸುತ್ತಾರೆ. ಮಿಕ್ಕಂತೆ ಪ್ರಕೃತಿ ಕಶ್ಯಪ್‌ ಇತರರು ಪಾತ್ರಕ್ಕೆ ಮೋಸ ಮಾಡಿಲ್ಲ. ಪೂರ್ಣಚಂದ್ರ ತೇಜಸ್ವಿ ಸಂಗೀತದ ಸ್ವಾದ ಕೂಡ ಹೊಸದಾಗಿದೆ. ಸುಮುಖ, ಸುಜಯ್‌ ಅವರ ಕ್ಯಾಮೆರಾ ಕೈಚಳಕ ಅಮೆರಿಕವನ್ನು ಸುತ್ತಾಡಿಕೊಂಡು ಬಂದ ಅನುಭವ ಕಟ್ಟಿಕೊಡುತ್ತದೆ.

 

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next