ಹೊಸದಿಲ್ಲಿ/ವಾಷಿಂಗ್ಟನ್: “ಅಗತ್ಯ ಬಿದ್ದರೆ ರಾತ್ರಿ ಕರ್ಫ್ಯೂ ಜಾರಿ ಮಾಡಿ, ಕೊರೊನಾ ವಾರ್ ರೂಮ್‌ಗಳನ್ನು ಚುರುಕುಗೊಳಿಸಿ, ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳನ್ನು ಸಿದ್ಧಗೊಳಿಸಿ’ ಹೀಗೆಂದು ಕೇಂದ್ರ ಸರಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳ ಮುಖ್ಯ ಕಾರ್ಯ ದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಸೋಂಕು ಸಂಖ್ಯೆ ಹೆಚ್ಚಾದರೂ ಅವುಗಳ ಮೇಲೆ ನಿಗಾ ಇರಿಸಿ. ಜಿಲ್ಲಾ ಮಟ್ಟ, ಸ್ಥಳೀಯ ಮಟ್ಟದಲ್ಲಿ ಕೂಡ ಕಂಟೈನ್‌ಮೆಂಟ್ ವಲಯಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸೂಚಿಸಿದ್ದಾರೆ.
ಸದ್ಯಕ್ಕೆ ಬೇಡ: ದೇಶದಲ್ಲಿ ಸದ್ಯಕ್ಕೆ ಮಕ್ಕಳಿಗೆ ಲಸಿಕೆ ಹಾಕುವ ಅಗತ್ಯವಿಲ್ಲ. ಅಂಥ ಪರಿಸ್ಥಿತಿಯೂ ಉಂಟಾಗಿಲ್ಲವೆಂದು ಲಸಿಕೆ ಹಾಕಿಸುವುದಕ್ಕಾಗಿ ಇರುವ ರಾಷ್ಟ್ರೀಯ ತಾಂತ್ರಿಕ ಸಮಿತಿ (ಎನ್‌ಟಿಎಜಿಐ) ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
ಇದನ್ನೂ ಓದಿ:“ಭಾರತ ವಿರೋಧಿ ಕೃತ್ಯ’: 20 ಯೂಟ್ಯೂಬ್ ಚಾನೆಲ್, 2 ವೆಬ್‌ಸೈಟ್ ಬ್ಲಾಕ್
200ಕ್ಕೂ ಹೆಚ್ಚು ಕೇಸ್: ದೇಶದಲ್ಲಿ ಒಟ್ಟು ಒಮಿಕ್ರಾನ್ ಕೇಸ್‌ಗಳ ಸಂಖ್ಯೆ 200 ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 65, ದಿಲ್ಲಿಯಲ್ಲಿ ತಲಾ 54, ಕರ್ನಾಟಕದಲ್ಲಿ 19 ಕೇಸ್‌ಗಳು ದೃಢಪಟ್ಟಿವೆ. ಇದೇ ವೇಳೆ, ಸೋಮವಾರದಿಂದ ಮಂಗಳವಾರದ ಅವಧಿಯಲ್ಲಿ ದಿನವಹಿ ಕೇಸ್‌ಗಳ ಸಂಖ್ಯೆ 5,326 ಆಗಿದೆ.
ಮೊದಲ ಸಾವು
ಅಮೆರಿಕದಲ್ಲಿ ಒಮಿಕ್ರಾನ್‌ನಿಂದಾಗಿ ಮೊದಲ ಸಾವು ದೃಢಪಟ್ಟಿದೆ. ಅದಕ್ಕೆ ಪೂರಕವಾಗಿ ಕಳೆದ ವಾರದ ವರೆಗೆ ಅಮೆರಿಕದಲ್ಲಿ ದೃಢಪಟ್ಟಿರುವ ಕೇಸ್‌ಗಳ ಪೈಕಿ ಶೇ.73 ರೂಪಾಂತರಿಯದ್ದೇ ಆಗಿದೆ.