Advertisement

ರಿವರ್ಸ್‌ ಗೇರ್‌ ಬೈಕ್‌ ಆವಿಷ್ಕಾರ

12:59 PM May 20, 2019 | pallavi |

ಗದಗ: ವಿಕಲಚೇತನರ ಪಾಲಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಓಡಿಸುವುದಕ್ಕಿಂತ ನಿಲ್ಲಿಸಿದಾಗ ತಿರುಗಿಸುವುದೇ ದೊಡ್ಡ ಸವಾಲು. ದಿವ್ಯಾಂಗರ ಈ ಸಮಸ್ಯೆಗೆ ಸ್ಥಳೀಯ ಜ| ತೋಂಟದಾರ್ಯ ಇಂಜಿನಿಯರಿಂಗ್‌ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ರಿವರ್ಸ್‌ ಗೇರ್‌ ಬೈಕ್‌ ಆವಿಷ್ಕಾರಗೊಳಿಸಿದ್ದಾರೆ.

Advertisement

ಹೌದು. ವಿದ್ಯಾರ್ಥಿಗಳಾದ ಆಸಿಫಅಲಿ ಜೆ.ಬಳ್ಳಾರಿ, ಚಿದಂಬರ ಎಸ್‌.ಜೋಶಿ, ಮಂಜುನಾಥ ಹಾಳಕೇರಿ, ವೆಂಕಟೇಶ್‌ ಆರ್‌.ಗೌಡರ್‌ ಅವರು ಪ್ರಾಜೆಕ್ಟ್ ಭಾಗವಾಗಿ ‘ಅಂಗವಿಕಲರ ವಾಹನಕ್ಕೆ ಹಿಂಬದಿ ಗೇರ್‌’ ಹೆಸರಲ್ಲಿ ವಾಹನವೊಂದನ್ನು ವಿನ್ಯಾಸಗೊಳಿಸಿ ವಿಕಲಚೇತನರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಮಾರುಕಟ್ಟೆ ಪ್ರದೇಶದಲ್ಲಿ ಬೈಕ್‌ಗಳ ಸಾಲಿನಲ್ಲಿ ಸಿಲುಕಿರುವ ಮತ್ತೂಂದು ದ್ವಿಚಕ್ರವಾಹನಗಳನ್ನು ಹೊರ ತೆಗೆಯಲು ಪ್ರಯಾಸ ಪಡುವಂತಾಗುತ್ತದೆ. ವಿಕಲಚೇತನರು ಬಳಸುವ ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ಬೈಕ್‌ಗಳು ಮುಂದಕ್ಕೆ ಚಲಿಸುತ್ತವೆಯೇ ಹೊರತು ಹಿಂದಕ್ಕೆ ಚಲಿಸವು. ಹೀಗಾಗಿ ಪಾರ್ಕಿಂಗ್‌ ಸ್ಲಾಟ್, ಜನನಿಬಿಡ ಪ್ರದೇಶದ ಬೈಕ್‌ಗಳ ಸಾಲಿನಲ್ಲಿ ಸಿಲುಕಿದ ತಮ್ಮ ವಾಹನ ಹೊರ ತೆಗೆಯಲು ವಿಕಲಚೇತನರು ಹರಸಾಹಸ ಪಡುವಂತಾಗುತ್ತದೆ.

ತಮ್ಮ ತ್ರಿಚಕ್ರ-ನಾಲ್ಕು ಚಕ್ರವುಳ್ಳ ಬೈಕ್‌ಗಳನ್ನು ಹಿಂದಕ್ಕೆ ಎಳೆಯಲು ಮತ್ತೂಬ್ಬರ ಸಹಾಯಕ್ಕೆ ಅಂಗಲಾಚುವಂತಾಗುತ್ತದೆ. ವಿಕಲಚೇತನರ ಈ ಸಮಸ್ಯೆ ಮೇಲ್ನೋಟಕ್ಕೆ ಸಣ್ಣದೆಂಬಂತೆ ಭಾಸವಾದರೂ, ಸಂಕೀರ್ಣವಾಗಿದೆ. ಮಾರುಕಟ್ಟೆಯಲ್ಲಿ ಈಗಿರುವ ದ್ವಿ ಚಕ್ರ ವಾಹನಗಳಲ್ಲಿ ಹಿಂಬದಿ ಚಲನೆ(ರಿವರ್ಸ್‌) ಸೌಲಭ್ಯವಿಲ್ಲ. ಕಾರುಗಳಲ್ಲಿ ರಿವರ್ಸ್‌ ಗೇರ್‌ ಇದ್ದರೂ, ಖರೀದಿ ಬೆಲೆ ಮತ್ತು ನಿರ್ವಹಣೆಯೂ ದುಬಾರಿ. ಹೀಗಾಗಿ ಬಹುತೇಕ ವಿಕಲಚೇತನರು ದ್ವಿಚಕ್ರ ವಾಹನಗಳನ್ನೇ ಖರೀದಿಸಿ, ಅವುಗಳಿಗೆ ಮತ್ತೂಂದು, ಎರಡು ಹೆಚ್ಚುವರಿಯಾಗಿ ಚಕ್ರಗಳನ್ನು ಜೋಡಿಸಿಕೊಳ್ಳುತ್ತಾರೆ. ಇನ್ನೂ ಕೆಲವರು, ಕಂಪನಿಯಿಂದಲೇ ತ್ರಿಚಕ್ರ ವಾಹನಗಳನ್ನು ಖರೀದಿಸಿದರೂ, ಹಿಮ್ಮುಖ ಚಲನೆಯ ಸೌಲಭ್ಯವಿಲ್ಲದೇ ಪರದಾಡುವಂತಾಗುತ್ತದೆ. ಇದನ್ನೆಲ್ಲಾ ಮನಗಂಡ ಈ ವಿದ್ಯಾರ್ಥಿಗಳು ಇದಕ್ಕೊಂದು ಪರಿಹಾರ ಸೂಚಿಸಿದ್ದಾರೆ.

20 ಸಾವಿರ ರೂ. ಖರ್ಚು: ಈ ವಾಹನ ರೆಡಿ ಮಾಡಲು ಸುಮಾರು 20 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. 10 ಸಾವಿರ ರೂ. ಮೌಲ್ಯದಲ್ಲಿ ಹಳೆ ದ್ವಿಚಕ್ರ ವಾಹನ ಖರೀದಿಸಿ, ಕಾರುಗಳಲ್ಲಿ ಬಳಕೆಯಾಗುವ ರಿವರ್ಸ್‌ ಗೇರ್‌ ಮೆಕಾನಿಸಂ ಮಾದರಿಯಲ್ಲಿ ಸಣ್ಣದೊಂದು ರಿವರ್ಸ್‌ ಗೇರ್‌ ವಿನ್ಯಾಸಗೊಳಿಸಿದ್ದಾರೆ. ಇನ್ನುಳಿದ 10 ಸಾವಿರ ರೂ.ಗಳಲ್ಲಿ ವಿವಿಧ ಬಿಡಿ ಭಾಗಗಳನ್ನು ತಯಾರಿಸಿ ಜೋಡಿಸಿದ್ದಾರೆ. ಒಂದೇ ಇಂಜಿನ್‌ನಲ್ಲಿ ಬೈಕ್‌ ಹಿಂದಕ್ಕೆ-ಮುಂದಕ್ಕೆ ಚಲಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಾಜೆಕ್ಟ್ಗಾಗಿ ವಿದ್ಯಾರ್ಥಿಗಳು ಸತತ ಒಂದು ತಿಂಗಳ ಕಾಲ ಶ್ರಮಿಸಿದ್ದಾರೆಂದು ಹೇಳಲಾಗಿದೆ.

Advertisement

ಸದ್ಯ ಹಳೆಯ ಟಿವಿಎಸ್‌-ಎಚ್‌ಡಿ ವಾಹನವನ್ನು ವಿಕಲಚೇತನರ ಸ್ನೇಹಿಯಾಗಿ ರಿವರ್ಸ್‌ಗೇರ್‌ ಉಳ್ಳ ಬೈಕ್‌ ಸಿದ್ಧಗೊಳಿಸಿದ್ದಾರೆ. ಬೈಕ್‌ನ ಆಸನದ ಕೆಳಗೆ ಸಣ್ಣದೊಂದು ಲಿವರ್‌ ನೀಡಿದ್ದು, ಅದನ್ನು ಕೆಳಗೆ- ಮೇಲಕ್ಕೆ ಸ್ಥಾನ ಪಲ್ಲಟ ಮಾಡುತ್ತಿದ್ದಂತೆ ಮುಂದೆ ಅಥವಾ ಹಿಂದಕ್ಕೆ ವಾಹನ ಚಲಾಯಿಸಬಹುದಾಗಿದೆ. ಇದನ್ನು ಇನ್ನೂ ಕಡಿಮೆ ದರದಲ್ಲಿ ತಯಾರಿಸಬಹುದಾಗಿದ್ದು, ವಿಕಲಚೇತನರಿಗೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next