Advertisement

ರೆವರೆಂಡ್‌ ಕಿಟ್ಟೆಲ್‌, ಅಪ್ರತಿಮ ಶಬ್ದಸಂತ

11:12 PM Nov 02, 2019 | Sriram |

ಎರಡೂವರೆ ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡವು ಸಂಸ್ಕೃತ, ಗ್ರೀಕ್‌ ಹೊರತುಪಡಿಸಿದರೆ ಅತಿ ಪ್ರಾಚೀನ ಭಾಷೆ. ತಾರ್ಕಿಕವಾಗಿಯೂ, ವೈಜ್ಞಾನಿಕ ವಾಗಿಯೂ ಪರಿಪೂರ್ಣವಾಗಿರುವ ಕನ್ನಡದ ಲಿಪಿ ಮುತ್ತು ಜೋಡಿಸಿದಂತಿದೆ. ಇದ ನ್ನು ಕಂಡ ಆಚಾರ್ಯ ವಿನೋಬಾ ಭಾವೆ ಕನ್ನಡವನ್ನು “ವಿಶ್ವ ಲಿಪಿಗಳ ರಾಣಿ’ ಎಂದು ಪ್ರಶಂಸಿಸಿದ್ದಾರೆ. ಅಂತಾರಾಷ್ಟ್ರೀಯ ಭಾಷೆ ಯಾದ ಇಂಗ್ಲಿಷಿಗೂ ಸ್ವಂತ ಲಿಪಿಯಿಲ್ಲ. ಅದು ಬಳಸು ವುದು ರೋಮನ್‌ ಲಿಪಿಯೆಂದು ಬಹಳ ಜನರಿಗೆ ತಿಳಿ ದಿಲ್ಲ. ಅಂತೆಯೇ ಹಿಂದಿ ದೇವನಾಗರಿ ಬಳಸುತ್ತದೆ.

Advertisement

ಎಷ್ಟಾದರೂ ಭಾಷೆ ಮಾನವ ತನ್ನ ಸಂವಹನಕ್ಕಾಗಿ ರೂಪಿಸಿಕೊಂಡ ನಿರ್ಮಿತಿ. ವಿಶ್ವಮಾನವರನ್ನೆಲ್ಲ ಒಗ್ಗೂಡಿಸುವ ಉದ್ದೇಶ ಭಾಷೆಯೆಂಬ ಸೃಜನಶೀಲತೆಗೆ, ಭವ್ಯ ದಿವ್ಯ ಚೇತನಕ್ಕೆ. ಕನ್ನಡವನ್ನು ಮಾತನಾಡುವಂತೆಯೆ ಬರೆಯಬಹುದು, ಬರೆಯುವಂತೆಯೇ ಮಾತನಾ ಡಬಹುದು. ವಿದೇಶಿಯರೊಬ್ಬರು ಶಬ್ದಕೋಶವನ್ನು ರಚಿಸಿಕೊಟ್ಟ ಏಕೈಕ ಭಾಷೆಯೆಂದರೆ ಅದು ಕನ್ನಡ. ಆ ಸಾಹಸಿ ಶಿಲ್ಪಿ ಕಿಟ್ಟೆಲ್‌. ಕನ್ನಡ ವಾš¾ಯವನ್ನು ಸಿರಿವಂತ ಗೊಳಿಸುವುದರಲ್ಲಿ ಪಾಶ್ಚಾತ್ಯ ವಿದ್ವಾಂಸರ ಕೊಡುಗೆ ಗಣನೀಯವಾಗಿದೆ. ಜಾಕೊಬಿ, ಮ್ಯಾಕ್ಸ್‌ ಮಲರ್‌ರಂಥ ಮೇಧಾವಿಗಳು ಸಂಸ್ಕೃತವನ್ನು ಆಳವಾಗಿ ಆಭ್ಯಸಿಸಿ ಮೌಲಿಕ ಭಾಷ್ಯ, ವಿಮರ್ಶೆಗಳನ್ನು ರಚಿಸಿಕೊಟ್ಟರು.

ರೆವರೆಂಡ್‌ ಫೆರ್ಡಿನಾಂಡ್‌ ಕಿಟ್ಟೆಲ್‌(1832-1903) ವಾಯುವ್ಯ ಜರ್ಮನಿಯ ರೆಸೆ‌ಟರ್‌ಹಫೆ ಎಂಬಲ್ಲಿ 1832ರ ಏಪ್ರಿಲ್‌ 7ರಂದು ಜನಿಸಿದರು. ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವಾಗಲೇ ಕಿಟ್ಟೆಲ್‌ಗೆ ಭಾಷಾಶಾಸ್ತ್ರದ ಬಗ್ಗೆ ವಿಶೇಷ ಆಸಕ್ತಿ. ಲ್ಯಾಟಿನ್‌, ಫ್ರೆಂಚ್‌, ಇಟಾಲಿಯನ್‌ ಭಾಷೆಗಳನ್ನು ಬಾಲ್ಯದಲ್ಲೇ ಕಲಿತರು. ಬಾಸಲ್‌ ನಗರದ ಮಿಶನ್‌ ಕಾಲೇಜಿನಲ್ಲಿ ಮೂರು ವರ್ಷ ಥಿಯೋಲಜಿ (ಪರಮಾರ್ಥ ವಿದ್ಯೆ) ಅಧ್ಯಯನ ಕೈಗೊಂಡರು. ನಂತರ ಬಾಸಲ್‌ ಮಿಶನರಿಯಲ್ಲಿ ಪಾದ್ರಿಯಾಗಿ ಸೇರಿದರು. 1853ರಲ್ಲಿ ಪ್ರಾಟೆಸ್ಟಂಟ್‌ ಧರ್ಮ ಪ್ರಸಾರಕ್ಕಾಗಿ ಭಾರತಕ್ಕೆ ಬಂದರು. ಅವರು ಆಗಮಿಸಿದ್ದು ನೇರ ಮಂಗಳೂರಿಗೆ. ಮಂಗಳೂರೇ ಅವರ ಪ್ರಧಾನ ಕಾರ್ಯ ಕ್ಷೇತ್ರವಾಯ್ತು. ಮಡಿಕೇರಿ, ಆನಂದಪುರ, ಹುಬ್ಬಳ್ಳಿ, ಧಾರವಾಡದಲ್ಲಿ ಅವರು ಪಾದ್ರಿಯಾಗಿ, ಆ ಹೊಣೆಗಾರಿಕೆ ನಡುವೆಯೇ ಪ್ರಾಗೈತಿಹಾಸ ತಜ್ಞರಾಗಿಯೂ ಮೆರೆದರು. ಜನರೊಂ ದಿಗೆ ಬೆರೆಯುವ ವಿರಳ ಪಾದ್ರಿಯೆನ್ನಿಸಿದರು. ಕನ್ನಡದ ಜನಮನ ಗೆದ್ದರು. ಕನ್ನಡಿಗರು ಅವರಿಗೆ “ಇವ ನಮ್ಮವ…ಇವ ನಮ್ಮವ’ ಎಂದು ಗೌರವಾದರ ತೋರಿದರು. ಭಾರತೀಯ ಭಾಷೆಗಳ ಉಗಮ ಮತ್ತು ವಿಕಾಸ ಅವರನ್ನು ವಿಶೇಷವಾಗಿ ಆಕರ್ಷಿಸಿತು. ಹಳಗನ್ನಡದ ವೈಭವ, ಆಡುಕನ್ನಡದ ವೈವಿಧ್ಯತೆ, ಆ ಕುರಿತ ಇತಿಹಾಸ ಅವರನ್ನು ಬಹುವಾಗಿ ಪ್ರಭಾವಿಸಿದವು.

ಕನ್ನಡವನ್ನಂತೂ ಒಂದು ನಿಘಂಟು ರಚಿಸುವಷ್ಟರ ಮಟ್ಟಿಗೆ ಅವರು ಒಲಿಸಿಕೊಂಡರೆಂದರೆ ಇನ್ನು ಹೇಳುವು ದೇನಿದೆ? 1894ರಲ್ಲಿ ಕಿಟ್ಟೆಲ್‌ರ “ಕನ್ನಡ-ಇಂಗ್ಲಿಷ್‌ ನಿಘಂಟು’ ಮಂಗಳೂರಿನಲ್ಲಿ ಪ್ರಕಟಗೊಂಡಿತು. ಅದೋ 1758 ಪುಟಗಳ, 70,000 ಪದಗಳುಳ್ಳ ಶಬ್ದ ಕನ್ನಡಿ. ಗಾದೆಗಳು, ನುಡಿಗಟ್ಟುಗಳನ್ನು ಸೊಗಸಾಗಿ ಉದಾಹರಿಸಲಾಗಿದೆ. ಕಿಟ್ಟೆಲ್‌ ಎಂದರೆ ಕನ್ನಡ ನಿಘಂಟು, ಕನ್ನಡ ನಿಘಂಟೆಂದರೆ ಕಿಟ್ಟೆಲ್‌ ಎಂಬಂತೆ ಇಂದಿಗೂ ಎಂದಿಗೂ ಮನೆಮಾತು.

ಅವರದು ಅಧಿಕಾರಯುತ ಶಬ್ದಕೋಶವೆಂದು ಖ್ಯಾತ ಕನ್ನಡ ವಿದ್ವಾಂಸರಾದ ಮಂಜೇಶ್ವರ ಗೋವಿಂದ ಪೈ, ಆರ್‌. ನರಸಿಂಹಾಚಾರ್‌, ಡಿ. ಎಲ್‌. ನರಸಿಂಹಾ ಚಾರ್‌ ಮುಂತಾದವರು ಮುಕ¤‌¤ಕಂಠದಿಂದ ಕೊಂಡಾಡಿ ದ್ದಾರೆ. ನಿಘಂಟಿನ ಸಾಹಸಗಾಥೆ ಕುರಿತು ಹೇಳಲೇಬೇಕು. ನಿಘಂಟಿನ ಕಾರ್ಯ ಆರಂಭವಾಗಿದ್ದು 1872ರಲ್ಲಿ. ಕೊನೆಯಾಗಿದ್ದು 1894. ಅಂದರೆ 22 ವರ್ಷಗಳ ಸುದೀರ್ಘ‌ ನಿರ್ಮಾಣ ಪಯಣ. ಸ್ಥಳೀಯ ವಿದ್ವಾಂಸರು ನಿಘಂಟಿನ ಕಾರ್ಯಕ್ಕೆ ನೆರವಾದರು. ವಸ್ತ್ರದ ಶಿವಲಿಂಗಯ್ಯ, ಎಂ.ಸಿ. ಶ್ರೀನಿವಾಸಾಚಾರ್ಯ, ಶಿವರಾಮ ಭಾರದ್ವಾಜ್‌ ಪ್ರಮುಖರು. ಏತನ್ಮಧ್ಯೆ ಕಿಟ್ಟೆಲ್‌ ಒಮ್ಮೆ ತಮ್ಮ ತಾಯ್ನಾಡಿಗೆ ಅವಸರ ಅವಸರವಾಗಿ ಹೋಗಿಬಂದರು. ನಿಘಂಟಿನ ಕೆಲಸ ಪೂರ್ಣವಾಗಿ ಸಲೇಬೇಕೆಂಬ ಹಟ. ಅವರಿಗೆ ಕಣ್ಣಿನ ದೃಷ್ಟಿ ದೋಷವೂ ಕಾಡಿತ್ತು. ಆ ಐಬು, ನೋವು ಲೆಕ್ಕಿಸದೆ ಶಬ್ದಗಳಲ್ಲಿ ಮಗ್ನರಾದರು. ಕಿಟ್ಟೆಲ್‌ರನ್ನು ಹೆತ್ತ ತಾಯಿ ಹ್ಯೂಬರ್ಟ್‌ ಧನ್ಯ ಕನ್ನಡತಿ, ಸರಸ್ವತಿಯ ವರಪುತ್ರಿ ಮುಂತಾಗಿ ಕನ್ನಡದ ಜನಮಾನಸ ಹೃದಯ ಪೂರ್ವಕವಾಗಿ ಹೊಗಳುವುದರಲ್ಲಿ ಅತಿಶಯವೇನಿಲ್ಲ. ಕಿಟ್ಟೆಲ್‌ ಇಷ್ಟೊಂದು ಸಂಖ್ಯೆಯಲ್ಲಿ ಪದಗಳನ್ನು ಹೇಗೆ ಕಲೆಹಾಕಿದರೆನ್ನುವುದೇ ಒಗಟು.

Advertisement

ನಿಘಂಟು ರಚನೆಯೆಂದರೆ ಸಾಮಾನ್ಯವೆ? ಅದೊಂ ದು ತಪಸ್ಸು. ಒಂದು ಶಬ್ದಕ್ಕೆ ಎರಡೇನು ಐದಾರು ಬಗೆ ಅರ್ಥಗಳಿರುತ್ತವೆ. ಉಚ್ಚಾರಣೆಯಿಂದ ಹಿಡಿದು ಎಲ್ಲ ಪರ್ಯಾಯ ಅರ್ಥ, ಅಭಿಪ್ರಾಯವಲ್ಲದೆ ಕಿರು ತಾತ್ಪರ್ಯ ಒದಗಿಸಬೇಕು. ಕಿಟ್ಟೆಲ್‌ ಕುದುರೆಯ ಅರ್ಥಾತ್‌ ಪದಗಳ ಬೆನ್ನೇರಿ ಸಂತೆ, ಜಾತ್ರೆಗಳಲ್ಲಿ ಅಡ್ಡಾಡಿದರು. ಎತ್ತಿನ ಲಾಳ, ಕೀಲಿಕೈ, ಒರಳು ಕಲ್ಲು, ಪಾತಾಳ ಗರಡಿ, ಮಸಿ ಕುಡಿಕೆ, ಅಡಕತ್ತರಿ, ಧೋತ್ರ…ಹೀಗೆ ಶಬ್ದಗಳ ಬೇಟೆಯೆಂದರೆ ಸಾಮಾನ್ಯದ ಮಾತೇ? “ಕಥಾಮಾಲ’ ರಚಿಸಿದ್ದು, ನಾಗವರ್ಮನ ಕನ್ನಡ ವ್ಯಾಕರಣವನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದ್ದು ಕಿಟ್ಟೆಲ್‌ರಲ್ಲಿದ್ದ ಕನ್ನಡ ಸಾಹಿತ್ಯ ಸಂಕಲ್ಪ ಶಕ್ತಿಗೆ ಸಾಕ್ಷಿ. ಮಧುರಿಕೆ-ಒಂದು ಜಾತಿಯ ಸುಗಂಧ ಸಸ್ಯ, ರಾಜಶೇಖರ ವಿಲಾಸ-ಷಡಕ್ಷರಿಯ ಕಾವ್ಯ, ರಾಜಸದನ-ಅರಮನೆ, ಲಬ-ಬಾಯಿಯ ಬಳಿ ಹಸ್ತ ತಂದು ಮಾಡುವ ಸದ್ದು, ಲಡ್ಡು-ಲಾಡು, ಬಹುಬಗೆಯ ಸಿಹಿ ಉಂಡೆ…ಹೀಗೆ ಸಾಗುತ್ತವೆ ಅವರ ನಿಘಂಟಿನ ಪುಟಗಳು.

ಕಿಟ್ಟೆಲ್‌ “ವಜ್ರಪಾಣಿ’ ಎಂಬ ಪದವನ್ನು ಕೈಯಲ್ಲಿ ಸಿಡಿಲಿನಂಥ ಆಯುಧ ಹಿಡಿದ ಇಂದ್ರ ಎಂದು ವಿವರಿಸುತ್ತಾರೆ.

ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಕಿಟ್ಟೆಲ್‌ “ಕಾವ್ಯಮಂಜರಿ’ ಕೃತಿ ರಚಿಸಿದರು. ಮಕ್ಕಳಿಗೆಂದೇ ಅವರು ಹಲವು ಪಠ್ಯಪುಸ್ತಕಗಳನ್ನು ರಚಿಸಿದರು. “ಪರಮಾತ್ಮ ಜ್ಞಾನ’, “ಪಂಚತಂತ್ರ’ ಅವರು ಭಾಷಾಂತರಿಸಿದ ಗ್ರಂಥಗಳಲ್ಲಿ ಮುಖ್ಯವಾದವು. “ಶಬ್ದಮಣಿದರ್ಪಣ’, “ಛಂದೋಂಬುಧಿ’ -ಇವು ಅವರ ಸಂಪಾದಿಸಿದ ಕೃತಿಗಳು.
ಧಾರವಾಡದ ಬಾಸಲ್‌ ಮಿಶನ್‌ ಪ್ರೌಢಶಾಲೆಯಲ್ಲಿ ಕಿಟ್ಟೆಲ್‌ ಅಲ್ಪಾವಧಿಗೆ ಮುಖ್ಯೋಪಾ ಧ್ಯಾಯರೂ ಆಗಿದ್ದರು. ಉನ್ನತ ಆಡಳಿತದ ನಾನಾ ಹುದ್ದೆಗಳಿಗೆ ಆಹ್ವಾನ ಬರುತ್ತಿತ್ತಾದರೂ ಅವರು ಅವನ್ನೆಲ್ಲ ನಯವಾಗಿ ಒಲ್ಲೆನೆಂದರು, ಕನ್ನಡದ ಉಪಾಸನೆ, ಪರಿಚಾರಿಕೆಗೆ ತಮ್ಮ ವ್ಯವಧಾನ ಮೀಸಲಿರಿಸಿದರು. ಕನ್ನಡದ ಇತಿಹಾಸವನ್ನು ಇಂಗ್ಲಿಷ್‌, ಜರ್ಮನ್‌ ಭಾಷೆಯಲ್ಲಿ ಬಿಂಬಿಸಿದ್ದು ಕಿಟ್ಟೆಲ್‌ರ ಅಸದೃಶ ಹೆಗ್ಗಳಿಕೆ. 1903ರ ಡಿಸೆಂಬರ್‌ 18 ರಂದು ಟ್ಯೂಬೆನ್‌ಜನ್‌ನಲ್ಲಿ ಕಿಟ್ಟೆಲ್‌ ಕಾಲವಶರಾದರು. ಅವರು ಜೀವಿದ್ದಾಗಲೇ ದಂತಕಥೆಯಾಗಿದ್ದರು. “ಕನ್ನಡದ ಕಿಟ್ಟ’ ಎಂದೇ ಅಚ್ಚುಮೆಚ್ಚಾಗಿರುವ ಕಿಟ್ಟೆಲ್‌ ಅವರ ಪ್ರತಿಮೆಯನ್ನು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸ್ಥಾಪಿಸಲಾಗಿದೆ. ಬಳಸಿದರೆ ಭಾಷೆ, ಬಳಸದಿದ್ದರೆ ಜಡ. ಹೆಚ್ಚೆಚ್ಚು ಕನ್ನಡ ಪದಗಳನ್ನು ಪರಿಚಯಿಸಿಕೊಳ್ಳುತ್ತಾ ಕನ್ನಡವನ್ನು ಮತ್ತಷ್ಟು ಹತ್ತಿರ, ಇನ್ನಷ್ಟು ಆಪ್ತ¤ವಾಗಿಸಿಕೊಳ್ಳುವುದೇ ಈ ಶಬ್ದಸಂತನಿಗೆ ನಾವು ಸಲ್ಲಿಸುವ ಕೃತಜ್ಞತೆ ಅಲ್ಲವೇ?

-ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next