Advertisement

ಕಂದಾಯ ನಡಿಗೆ ರೈತನ ಮನೆ ಮನೆಗೆ

08:36 PM Dec 16, 2019 | Lakshmi GovindaRaj |

ಕುಣಿಗಲ್‌: ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ “ಕಂದಾಯ ನಡಿಗೆ ರೈತನ ಮನೆ ಮನೆಗೆ’ ವಿನೂತನ ಕಾರ್ಯಕ್ರಮಕ್ಕೆ ಶಾಸಕ ಡಾ.ರಂಗನಾಥ್‌ ಚಾಲನೆ ನೀಡಿದರು. ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ ಸೇರಿ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಗ್ರಾಮಸ್ಥರ ಅಹವಾಲು ಆಲಿಸಿದರು.

Advertisement

ಸ್ವಾಮಿ ನನಗೆ ವಯಸ್ಸಾಗಿದೆ. ದುಡಿಯಲು ಶಕ್ತಿ ಇಲ್ಲ. ಪೆನ್ಶನ್‌ ಕೊಡಿಸಿ ಜೀವನಾಂಶಕ್ಕೆ ಪೆಂಚಿನ್‌ ಕೊಡಿಸಿ ಎಂದು ವೃದ್ಧೆ ಮಹಿಳೆ, ವಿಕಲಚೇತನ ನನ್ನ ಮಗಳಿಗೆ ಮಾಸಾಶನ ಮಾಡಿಸಿಕೊಡಿ ಎಂದು ಮತ್ತೂಬ್ಬ ಮಹಿಳೆ, ಮೃತಗಂಡನ ಹೆಸರಿನಲ್ಲಿ ಇರುವ ಜಮೀನು ನನ್ನ ಹೆಸರಿಗೆ ದಾಖಲೆ ಮಾಡಿಸಿಕೊಡಿ ಎಂದು ಇನ್ನೊಬ್ಬಳು ಮಹಿಳೆ, ವಾಸಕ್ಕೆ ಮನೆ ಇಲ್ಲ ಮನೆ ಕಟ್ಟಿಸಿಕೊಡಿ ಎಂದು ವೃದ್ಧ ಸೇರಿ ನೂರಾರು ಮಂದಿ ಸೌಲಭ್ಯಕ್ಕೆ ಆಗ್ರಹಿಸಿ ಶಾಸಕರಿಗೆ ಮನವಿ ಮಾಡಿದರು.

ಜಗಲಿ ಮೇಲೆ ಕುಳಿತಿದ್ದ ವಯೋವೃದ್ಧರ ಯೋಗ ಕ್ಷೇಮ ವಿಚಾರಿಸಿದ ಶಾಸಕ, ನಿಮಗೆ ಸರ್ಕಾರದಿಂದ ವೃದ್ಧಾಪ್ಯ ವೇತನ ಬರುತ್ತಿದೇಯೆ ಎಂದು ಕೇಳಿದರು. ಪ್ರತಿ ಮನೆಗೆ ಖುದ್ದು ಭೇಟಿ ನೀಡಿ, ಮಹಿಳೆಯರ, ವೃದ್ಧರ ಹಾಗೂ ಗ್ರಾಮಸ್ಥರ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಿದರು. “ನೀವೇ ಅರ್ಜಿ ಬರೆದು ಫಲಾನುಭವಿಗಳಿದ ಸಹಿ ಪಡೆದು ಕಂದಾಯ ಇಲಾಖೆಯಿಂದ ಸಿಗುವ ಸೌಲಭ್ಯ ತಕ್ಷಣವೇ ಮಾಡಿಕೊಡಿ’ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರಿಗೆ ಶಾಸಕ ಸೂಚಿಸಿದರು.

ಆಸ್ತಿ ದಾಖಲೆಗೆ ಹಣ ಕೇಳುತ್ತಾರೆ: ಗಂಡನ ಹೆಸರಿನಲ್ಲಿ ಇರುವ ಆಸ್ತಿ ದಾಖಲೆ ನನ್ನ ಹೆಸರಿಗೆ ಮಾಡಿಕೊಳ್ಳಲು ತಾಲೂಕು ಕಚೇರಿಯಲ್ಲಿ ಹಣ ಕೇಳುತ್ತಾರೆ ಎಂದು ಲಕ್ಷ್ಮಮ್ಮ ದೂರಿದರು. ಸಾರ್ವಜನಿಕರು ಸರ್ಕಾರದಿಂದ ಮಾಡಿಸಿಕೊಳ್ಳುವ ಕೆಲಸ ಹಣ ರಹಿತವಾಗಿ ಇರಬೇಕು. ಈಗಿನ ತಹಶೀಲ್ದಾರ್‌ ಇಂತದಕ್ಕೆ ಅವಕಾಶ ಕೊಡುವುದಿಲ್ಲ. ನಿಮ್ಮ ಕೆಲಸ ಮಾಡಿಕೊಡುತ್ತಾರೆ ಎಂದು ಶಾಸಕರು ಹೇಳಿದರು. ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ ಮಾತನಾಡಿ, ಖಾತೆ ಬದಲಾವಣೆಗೆ ಸರ್ಕಾರ 35 ರೂ. ನಿಗದಿಪಡಿಸಿದೆ. ರೈತರು ಕಟ್ಟಬೇಕಾಗಿರುವ ಹಣ ಸ್ವಂತ ಹಣದಿಂದ ಪಾವತಿಸಿ ಅವರ ಹೆಸರಿಗೆ ಖಾತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಸೌಲಭ್ಯ ಸಿಗಲಿ: ಹೇರೂರು ಗ್ರಾಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಎಚ್‌.ಡಿ.ರಂಗನಾಥ್‌, ಚುನಾವಣಾ ಸಂದರ್ಭ ನೀಡಿದ್ದ ಭರವಸೆಯಂತೆ ರೈತರ ಮನೆ ಬಾಗಿಲಿಗೆ ಅಧಿಕಾರಿಗಳ ಕರೆದುಕೊಂಡು ಬಂದು ಸ್ಥಳದಲ್ಲೇ ಸಮಸ್ಯೆ ಬಗೆ ಹರಿಸಿ ಸೌಲಭ್ಯ ಕೊಡಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಸಾರ್ವನಿಕರ ಸಹಕಾರ ಅಗತ್ಯ ಎಂದು ಹೇಳಿದರು. ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳ ಬಗ್ಗೆ ದೂರು ಕೇಳಿ ಬಂದಿದೆ. ಸರ್ಕಾರದ ಸೌಲಭ್ಯ ಸಮಾಜದ ಕಟ್ಟ ಕಡೆಯ ಜನರಿಗೆ ತಲುಪಿದಾಗಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಸಿಗುತ್ತದೆ. ಕಂದಾಯ ಇಲಾಖೆಯಿಂದ ಸಿಗುವ ಸೌಲಭ್ಯ ಸಂಬಂಧ ಜನರಲ್ಲಿ ಅರಿವಿನ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲೇ ಪ್ರಥಮ ಎಂದು ತಿಳಿಸಿದರು.

Advertisement

ಮಧ್ಯವರ್ತಿಗಳ ಕಡಿವಾಣಕ್ಕೆ ಸಹಕಾರಿ: ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ ಮಾತನಾಡಿ, ಸರ್ಕಾರ ವಿವಿಧ ಸೌಲಭ್ಯ ಕೊಡಿಸುತ್ತೇವೆ ಎಂದು ಮಧ್ಯವರ್ತಿಗಳು ಅಮಾಯಕರ ನಂಬಿಸಿ ಹಣ ವಸೂಲಿ ಮಾಡುತ್ತಿರುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ನಾಗರಿಕರು ಮಧ್ಯವರ್ತಿಗಳ ವಂಚನೆಗೆ ಒಳಗಾಗದೆ ನೇರವಾಗಿ ನಮ್ಮ ಬಳಿ ಬಂದರೆ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದರು. ತಾಪಂ ಅಧ್ಯಕ್ಷ ಹರೀಶ್‌ನಾಯ್ಕ, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್‌, ಸದಸ್ಯ ಶ್ರೀಧರ್‌, ಪಿಡಿಒ ಎಸ್‌.ಎಲ್‌.ಚಂದ್ರಹಾಸ್‌, ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮ, ಮುಖಂಡ ನಂಜಪ್ಪ ಇತರರು ಇದ್ದರು.

ಸಮಸ್ಯೆ ಹೇಳಿಕೊಳ್ಳಿ: ಹೇರೂರು ಗ್ರಾಮ ಪ್ರವಾಸದ ಬಳಿಕ ಶಾಸಕರು ಚಿಕ್ಕಮಾವತ್ತೂರು, ನಿಡಸಾಲೆ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಹಾಗೂ ಸೌಲಭ್ಯ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಶಾಸಕರಿಗೆ ಅರ್ಜಿ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ರೈತರು ದಿನದ 24 ಗಂಟೆ ಯಾವಾಗ ಬೇಕಾದರೂ ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಬಹುದು. ನೀವು ಕರೆದಲ್ಲಿಗೂ ಬರುತ್ತೇನೆ. ನಿಮ್ಮ ಸಮಸ್ಯೆ ಇದ್ದಲ್ಲಿ ನನಗೆ ಹೇಳಿ, ನಾನು ನಿಮ್ಮೊಂದಿಗೆ ಇದ್ದೇನೆ. ಭಯಪಡಬೇಡುವ ಅವಶ್ಯಕತೆ ಇಲ್ಲ. ಮರಣ ದೃಡೀಕರಣ ಪತ ಕಂದಾಯ ಇಲಾಖೆಯಿಂದ ಜನರು ತೆಗೆದುಕೊಳ್ಳವುದೆ ಸಮಸ್ಯೆಯಾಗಿದ್ದು, ಇದನ್ನು ಸರಿಮಾಡಿಸಲಾಗುವುದು ಎಂದು ಭರವಸೆ ನೀಡಿದರು.

1500 ಅರ್ಜಿ ಸಲ್ಲಿಕೆ: 60 ಗ್ರಾಮಗಳ ರೈತರಿಂದ ಪಹಣಿ ತಿದ್ದುಪಡಿ, ಫಾವತಿ ವಾರಸು ಹಕ್ಕು ಬದಲಾವಣೆ, ಸಂಧ್ಯಾ ಸುರಕ್ಷಾ, ನಿರ್ಗತಿಕ ವಿಧವಾ ವೇತನ, ವಿಕಲಚೇತನ, ಮೈತ್ರಿ, ಮನಸ್ಸಿ, ರಾಷ್ಟ್ರೀಯ ಕುಟುಂಬ ನೆರವು, ಪಡಿತರ ಚೀಟಿ ಸೇರಿ ವಿವಿಧ ಸೌಲಭ್ಯ ಕೋರಿ 1500 ಅರ್ಜಿಗಳು ಸಲ್ಲಿಕೆಯಾಗಿದ್ದು, ಒಂದೇ ದಿನ ಇಷ್ಟೇದು ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಿರುವುದು ತಾಲೂಕಿನಲ್ಲಿ ಇದೇ ಪ್ರಥಮ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next