ಕೆ.ಆರ್.ಪೇಟೆ: ತಾಲೂಕಿನ ಸಿಂಧುಘಟ್ಟ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಮನೆ ಬಾಗಿಲಿಗೆ ಕಂದಾಯ ದಾಖಲೆ ವಿತರಣೆ ಕಾರ್ಯಕ್ರಮ ಹಾಗೂ ಕಂದಾಯ ಅದಾಲತ್ ನಡೆಯಿತು.
ಸಚಿವರಾದ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ನಮ್ಮ ಸರ್ಕಾರ ಜಿಲ್ಲಾಡಳಿತವನ್ನು ಜನರ ಮನೆ ಬಾಗಿಲಿಗೆ ಕಳುಹಿಸಿ ಸರ್ಕಾರದ ಸೌಲಭ್ಯ ಕೊಡಿಸುವ ಕೆಲಸ ಮಾಡುತ್ತಿದೆ. ಈ ಹಿಂದೆ ಒಂದು ಪಿಂಚಣಿ ಆದೇಶ ಪತ್ರ ಪಡೆಯಲು ನಾಲ್ಕಾರು ತಿಂಗಳು ನಾಡಕಚೇರಿಗೆ, ತಾಲೂಕು ಕಚೇರಿಗೆ ಅಲೆಯಬೇಕಾಗಿತ್ತು ಎಂದರು.
1 ಲಕ್ಷ ಹೆಲ್ತ್ ಕಾರ್ಡ್: ನನ್ನ ತಾಯಿ ತಮ್ಮ ಸಂಧ್ಯಾಕಾಲದಲ್ಲಿ ಹುಟ್ಟೂರು ಮರೆಯಬೇಡ ಎಂದು ಹೇಳಿದ ಕಾರಣ ನಾನು ತಾಲೂಕಿನ ಜನರ ಸೇವೆಗಾಗಿಯೇ ದೂರದ ಮುಂಬೈನಿಂದ ಬಂದಿ ದ್ದೇನೆ. ತನ್ನನ್ನು 3 ಬಾರಿ ತಾಲೂಕಿನ ಶಾಸಕನನ್ನಾಗಿ ಗೆಲ್ಲಿಸಿದ್ದೀರಿ ಎಂದು ಸ್ಮರಿಸಿದ ಅವರು, ತಾಲೂಕಿನ ಎಲ್ಲಾ ಜನತೆಗೆ ಆರೋಗ್ಯ ಕಾರ್ಡು ನೀಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸುಮಾರು 1 ಲಕ್ಷ ಹೆಲ್ತ್ ಕಾರ್ಡ್ ಮಾಡಿಸಿ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಕಾಮಗಾರಿ ಸಾಗಿದೆ: ಜೆಡಿಎಸ್‌ನಲ್ಲಿ ನನ್ನನ್ನು ಕಡೆಗಣಿಸಲಾಗಿತ್ತು. ಆದರೆ ಯಡಿಯೂರಪ್ಪ ಅವರು ತಮ್ಮನ್ನು ಪಕ್ಷಕ್ಕೆ ಕರೆದು ಸಚಿವ ಸ್ಥಾನ ಕೊಟ್ಟಿದ್ದಾರೆ. ಇದಕ್ಕೆ ಎಂದೆಂದಿಗೂ ಚಿರಋಣಿ. ಶೀಳನೆರೆ ಹೋಬಳಿ ಏತ ನೀರಾವರಿ ಇಲಾಖೆಗೆ 265 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಯೋಜನೆಯನ್ನು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟಿಸುತ್ತೇನೆ. ಹಾಗೂ ಏತ ನೀರಾವರಿಯಿಂದ ಭರ್ತಿಯಾದ ನಮ್ಮ ತಾಲೂಕಿನ ಕೆರೆಗಳಿಗೆ ನಮ್ಮ ಹೆಣ್ಣು ಮಕ್ಕಳಿಂದಲೇ ಬಾಗಿನ ಅರ್ಪಿಸುವ ಕೆಲಸ ಮಾಡಿಸುತ್ತೇನೆಂದರು.
ಸೀಮಂತ: ಜಿಲಾಧಿಕಾರಿ ಎಸ್.ಅಶ್ವಥಿ ಅವರು ವಯೋವೃದ್ಧರೊಬ್ಬರಿಗೆ ಪಿಂಚಣಿ ಆದೇಶ ಪತ್ರ ವಿತರಣೆ ಮಾಡುವ ಮೂಲಕ ಒಂದು ಸಾವಿರ ಮಂದಿಗೆ ಪಿಂಚಣಿ ಆದೇಶ ಪತ್ರಗಳ ವಿತರಣೆಗೆ ಚಾಲನೆ ನೀಡಿದರು. ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಗರ್ಭಿಣಿಯರಿಗೆ ಸೀಮಂತ ಕಾರ್ಯ ಕ್ರಮವನ್ನು ನೆರವೇರಿಸಿ ಫಲತಾಂಬೂಲ ದೊಂದಿಗೆ ಉಡಿ ತುಂಬಿದರು.
ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪಾ, ತಾಪಂ ಇಒ ಚಂದ್ರಶೇಖರ್, ಮುಖಂಡರಾದ ಎಸ್. ಅಂಬರೀಶ್, ಕೆ.ಶ್ರೀನಿವಾಸ್, ಕೆ.ಎಸ್.ಪ್ರಭಾಕರ್, ಕೆ.ಜಿ.ತಮ್ಮಣ್ಣ, ತಾಲೂಕು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕಟ್ಟೇಕ್ಯಾತನಹಳ್ಳಿ ಪಾಪಣ್ಣ, ಸಿಂಧುಘಟ್ಟ ಗ್ರಾಪಂ ಅಧ್ಯಕ್ಷರಾದ ನವೀನ್, ಶೀಳನೆರೆ ಗ್ರಾಪಂ ಅಧ್ಯಕ್ಷರಾದ ಗಾಯಿತ್ರಿ ಸಿದ್ದೇಶ್, ತೆಂಡೇಕೆರೆ ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಸಿಂಧುಘಟ್ಟ ಪಿಡಿಒ ಯಶಸ್ವಿನಿ, ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ವೃತ್ತ ನಿರೀಕ್ಷಕ ದೀಪಕ್, ಸಬ್ ಇನ್ಸ್‌ಪೆಕ್ಟರ್ ಸುನಿಲ್, ಕೃಷಿ ಸಹಾಯಕ ನಿರ್ದೇಶಕ ಟಿ.ಎಸ್. ಮಂಜುನಾಥ್, ತೋಟಗಾರಿಕಾ ಸಹಾಯಕ ನಿರ್ದೇಶಕ ಡಾ.ಲೋಕೇಶ್, ತೋಟಗಾರಿಕಾ ಅಧಿಕಾರಿ ಡಾ.ಆರ್.ಜಯರಾಂ, ತಾಲೂಕು ಅಂಗನವಾಡಿ ಮೇಲ್ವಿಚಾರಕ ಅಧಿಕಾರಿಗಳಾದ ಪದ್ಮಾ, ಶಾಂತವ್ವ. ಎಸ್.ಹಾವಣ್ಣನವರ್, ದಿಲ್ ಶಾದ್ ನದಾಫ್, ಸಚಿವ ಆಪ್ತ ಸಹಾಯಕ ಸಾರಂಗಿ ಮಂಜುನಾಥಗೌಡ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.