ಬೆಂಗಳೂರು: ಕಂದಾಯ ಇಲಾಖೆಗೆ ಸಂಬಂಧಿಸಿದ ರೈತರ ಪಹಣಿ, ಖಾತೆ, ನಕ್ಷೆ ಸಹಿತ ಎಲ್ಲ ದಾಖಲೆಗಳನ್ನು ಜ. 26ರಿಂದ ನೇರವಾಗಿ ರೈತರ ಮನೆಗಳಿಗೆ ಉಚಿತವಾಗಿ ತಲುಪಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಇದುವರೆಗೂ ರೈತರು ಜಮೀನಿನ ಪಹಣಿ, ಖಾತೆ ಬದಲಾವಣೆ, ಸರ್ವೆ ನಂಬರ್ ದಾಖಲೆ ಸಹಿತ ಎಲ್ಲವನ್ನೂ ಹಣ ಕೊಟ್ಟು ಪಡೆಯಬೇಕಿತ್ತು. ಜನವರಿ 26ರಿಂದ ಎಲ್ಲ ದಾಖಲೆಗಳನ್ನು ಉಚಿತವಾಗಿ ನೀಡಲಾಗುವುದು. ಸುಮಾರು 45 ಲಕ್ಷ ರೈತರಿಗೆ ದಾಖಲೆಗಳನ್ನು ಮನೆಗೆ ತಲುಪಿಸಲಾಗುವುದು ಎಂದು ಹೇಳಿದರು.
ಅಕಾಲಿಕ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಆದ ಹಾನಿಯ ಪರಿಹಾರಕ್ಕೆ ಕೇಂದ್ರ ಸರಕಾರ ಹೆಚ್ಚುವರಿಯಾಗಿ ರಾಜ್ಯಕ್ಕೆ 504.06 ಕೋ. ರೂ. ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚಿನ ನೆರವನ್ನು ನೀಡುವುದಾಗಿ ಭರವಸೆ ನೀಡಿದೆ.
ನಮ್ಮ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಈವರೆಗೆ 16 ಲಕ್ಷಕ್ಕೂ ಅಧಿಕ ರೈತರಿಗೆ 1061.24 ಕೋ. ರೂಗಳನ್ನು ಪರಿಹಾರವಾಗಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ 30 ದಿನದಲ್ಲಿ ಪರಿಹಾರ ವಿತರಿಸಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 960 ಕೋ. ರೂ. ಇದೆ. ಜನರ ಅನಿರೀಕ್ಷಿತ ಸಮಸ್ಯೆ ಪರಿಹರಿಸಲು ಇದನ್ನು ಬಳಸಬಹುದಾಗಿದೆ. ಪಿಂಚಣಿ, ಕೋವಿಡ್ ಪರಿಹಾರಗಳನ್ನು ಬೇಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರ ಕಂದಾಯ ಜಮೀನುಗಳಿಗೆ ಸಂಬಂಧಿಸಿದ ವ್ಯಾಜ್ಯವನ್ನು ತ್ವರಿತವಾಗಿ ಪರಿಹರಿಸಬೇಕು, ಕೇಸ್‌ಗಳ ಪ್ರಗತಿ ಬಗ್ಗೆ ಪ್ರತಿ ತಿಂಗಳು ಕಾನೂನು ಸಚಿವರಿಗೆ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಲಾಗಿದೆ ಎಂದರು.
ಇದನ್ನೂ ಓದಿ:ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿಗೆ ಸ್ಮೃತಿ ಮಂಧನಾ ನಾಮ ನಿರ್ದೇಶನ
ಸರಕಾರಿ ದಾಖಲೆಗಳನ್ನು ಸರಿಯಾಗಿಟ್ಟು, ಜನರ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಮಟ್ಟದಲ್ಲಿಯೇ ಪರಿಹರಿಸಬೇಕು. ಜನರು ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಬೇಕು. ಕಡತ ವಿಲೇವಾರಿಗೆ ಪ್ರಾಮುಖ್ಯ ನೀಡಿ ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು. ಇನಾಂ ಜಮೀನಿಗೆ ಸಂಬಂಧಿಸಿ ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸುವುದಕ್ಕೆ ಸಿದ್ಧತೆ ನಡೆಸಿದ್ದೇವೆ. ಉಳುಮೆ ಮಾಡುತ್ತಿರುವವರ ಹಿತ ಕಾಯವುದು ಸರಕಾರದ ಹೊಣೆ ಎಂದು ಹೇಳಿದರು.