Advertisement

ಮಹಿಳೆ ಸತ್ತಿದ್ದಾಳೆಂದು ಮರಣ ಪತ್ರ ಸೃಷ್ಟಿ: ಕೇಸು

04:06 PM Mar 14, 2022 | Team Udayavani |

ಮುಳಬಾಗಿಲು: ಬದುಕಿದ್ದವನನ್ನೇ ಸತ್ತಿದ್ದಾನೆಂದು ಮರಣ ಪತ್ರ ನೀಡಿ ಸಾಕಷ್ಟು ವಿವಾದಕ್ಕೀಡಾಗಿದ್ದ ಕಂದಾಯ ಅಧಿಕಾರಿಗಳು ಪ್ರಸ್ತುತ ಜೀವಂತ ಮಹಿಳೆಯೊಬ್ಬಳು ಬದುಕಿದ್ದರೂ ಮೃತಪಟ್ಟಿದ್ದಾಳೆಂದು ನಕಲಿ ದಾಖಲೆ ಸೃಷ್ಟಿಸಿ ಆಕೆಯ ಜಮೀನನ್ನು ಮಾರಾಟ ಮಾಡಿದ್ದಾರೆ. ಮತ್ತೂಂದು ಪ್ರಕರಣದಲ್ಲಿ ಸಿಲುಕಿಕೊಂಡು ಕೋರ್ಟ್‌ ಕಟಕಟೆ ಹತ್ತಿರುವುದು ಬೆಳಕಿಗೆ ಬಂದಿದೆ.

Advertisement

ಮುಳಬಾಗಿಲು ನಗರ ಠಾಣೆಯಲ್ಲಿ ಆರೋಪಿ ಎಂ.ಬಾಗ್ಯಲಕ್ಷ್ಮೀ, ಕೃಷ್ಣಪ್ಪ , ಅನಸೂಯಮ್ಮ ಮತ್ತು ಮಗ ಲಕ್ಷ್ಮೀ ಪತಿ.ಕೆ, ಆನಂದಕುಮಾರ್‌.ಕೆ, ಹಾಗೂ ತಹಶೀಲ್ದಾರ್‌ ಕೆ.ಎನ್‌.ರಾಜಶೇಖರ್‌, ಶಿರಸ್ತೆದಾರ್‌ ಸಂಪತ್‌ಕುಮಾರ್‌, ನಿರೀಕ್ಷಕ ಸಾದತ್‌ ಉಲ್ಲಾ ಖಾನ್‌, ಗ್ರಾಮಲೆಕ್ಕಾಧಿಕಾರಿ ಅರವಿಂದ್‌, ಸುಲೋಚನಮ್ಮ ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಳಬಾಗಿಲಿನ ವೀರಭದ್ರನಗರದ ಪರಿಶಿಷ್ಟ ಜನಾಂಗದ ವೆಂಕಟರಾಮಯ್ಯ ಬಿನ್‌ ನಲ್ಲಪ್ಪ ಎಂಬುವರಿಗೆ ಮುಳಬಾಗಿಲು ರೂರಲ್‌ 0.15 ಗುಂಟೆ ಜಮೀನಿದ್ದು, 1972ರ ನೋಂದಾಣಿಯಾಗಿತ್ತು. ವೆಂಕಟ ರಾಮಯ್ಯ 1999 ರಂದು ನಿಧನರಾಗಿ ಪತ್ನಿ ಮುನೆಮ್ಮ ಹೆಸರಿಗೆ ಈ ಜಮೀನು ಬಂದಿತ್ತು. 2020ರಲ್ಲಿ ದಾಖಲೆಗಳಿವೆ.

ಆದರೆ ಯಾವುದೇ ಸಂಬಂಧವಿಲ್ಲದ ವೀರಭದ್ರ ನಗರದ ಕೃಷ್ಣಪ್ಪ, ಆತನ ಪತ್ನಿ ಅನಸೂಯಮ್ಮ ಮತ್ತು ಆತನ ಮಕ್ಕಳಾದ ಲಕ್ಷ್ಮೀಪತಿ. ಕೆ ಮತ್ತು ಆನಂದಕುಮಾರ್‌ ಇವರು ಮುನೆಮ್ಮ ಬದುಕಿರುವಾಗಲೇ ಸತ್ತು ಹೋಗಿದ್ದಾಳೆಂದು ಮರಣ ಪ್ರಮಾಣ ಪತ್ರ ಹಾಗೂ ಇತರೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಕೆಯ ಹೆಸರಿನಲ್ಲಿದ್ದ 15 ಗುಂಟೆ ಜಮೀನಿನ ಖಾತೆಗಳ ಬದಲಾವಣೆಗೆ ಅರ್ಜಿ ಹಾಕಿದ್ದರು. ಮುನೆಮ್ಮನ ಮಗ ನಾಗರಾಜ್‌ ಈ ಜಮೀನು ನಮ್ಮದೆಂದು ಖಾತೆ ಬದಲಾವಣೆ ಮಾಡದಂತೆ ತಕರಾರು ಅರ್ಜಿ ಸಲ್ಲಿಸಿದ್ದರು. ಆದರೆ ಹಿಂದಿನ ತಹಶೀಲ್ದಾರ್‌ ರಾಜಶೇಖರ್‌ ಒಳಗೊಂಡಂತೆ ಐವರು ಕಂದಾಯ ಇಲಾಖಾಧಿಕಾರಿಗಳು ತರಕಾರು ಅರ್ಜಿಯನ್ನು ಪರಿಗಣಿಸದೇ ಹಣದ ಆಸೆಗಾಗಿ ಆರೋಪಿಗಳ ಜತೆ ಶಾಮೀಲಾಗಿ 2021ರ ನ. 27ರಂದು ಕೃಷ್ಣಪ್ಪ ಹೆಸರಿಗೆ ಖಾತೆ ಬದಲಾಯಿಸಿ ಕೊಟ್ಟಿದ್ದಾರೆ.

ಆರೋಪಿ ಕೃಷ್ಣಪ್ಪ ಈ ಪೈಕಿ ಏಳೂವರೆ ಗುಂಟೆ ಜಮೀನನ್ನು ಮುಳಬಾಗಿಲು ನಗರದ ತಾತಿಪಾಳ್ಯ ಎಂ.ಭಾಗ್ಯಲಕ್ಷ್ಮೀ ಎಂಬುವರಿಗೆ ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ಮುನೆಮ್ಮ ತಾವು ಬದುಕಿರುವಾಗಲೇ ಸತ್ತಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಮ್ಮ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆಂದು ತಹಶೀಲ್ದಾರ್‌ ಕಚೇರಿ ಮತ್ತು ಕೋಲಾರ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಮುಳಬಾಗಿಲು ಜೆಎಂಎಫ್ಸಿ ಕೋರ್ಟಿನಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು 10 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸಿದ್ದಾರೆ.

Advertisement

ರೈತನಿಗೆ ಮೋಸ ಮಾಡಿದ್ದ ಅಧಿಕಾರಿಗಳು : ಹಿಂದಿನ ತಹಶೀಲ್ದಾರ್‌ ಕೆ.ಎನ್‌.ರಾಜಶೇಖರ್‌, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಸಾದತ್‌ ಉಲ್ಲಾ ಖಾನ್‌, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಗ್ರಾಮ ಲೆಕ್ಕಾಧಿಕಾರಿ ಅರವಿಂದ್‌ ಇವರುಗಳು ಇತ್ತೀಚಿಗೆ ಇದೇ ರೀತಿ ರೈತನೊಬ್ಬ ಬದುಕಿರುವಾಗಲೇ ಸತ್ತಿದ್ದಾನೆಂದು ಮರಣ ಪತ್ರ ವಿತರಿಸಿದ್ದು ಸಾಕಷ್ಟು ವಿವಾದಕ್ಕೀಡಾಗಿದ್ದ ವಿಚಾರ ಜನರು ಮರೆಯುವ ಮುನ್ನವೇ ಇವರು ಹಣದ ಆಸೆಗಾಗಿ ಆರೋಪಿ ಗಳೊಂದಿಗೆ ಶಾಮೀಲಾಗಿ ವೃದ್ಧೆಯೊಬ್ಬಳು ಬದುಕಿರುವಾಗಲೇ ಆಕೆಯ ಹೆಸರಿನಲ್ಲಿದ್ದ ಜಮೀನನ್ನು ಲಪಟಾಯಿಸಲು ನಕಲಿ ಮರಣ ಪತ್ರ ಸೇರಿದಂತೆ ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಿದ ವಿಚಾರದಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದಿಂದ ಕಂದಾಯ ಇಲಾಖೆ ಅಧಿಕಾರಿಗಳು ಎರಡನೇ ಬಾರಿಗೆ ನ್ಯಾಯಾಲಯದ ಕಟಕಟೆ ಏರಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next