ಬಾಗಲಕೋಟೆ: ಬ್ರಿಟಿಷರ ಕಾಲದಲ್ಲಿ ಜಿಲ್ಲಾ ಕೇಂದ್ರವಾಗಿದ್ದ, ತಾಲೂಕಿನ ಕಲಾದಗಿ ಗ್ರಾಮಕ್ಕೆ ಕಂದಾಯ ಸಚಿವ ಆರ್. ಅಶೋಕ ಫೆ. 25ರಂದು ಆಗಮಿಸಲಿದ್ದು, ಇಡೀ ದಿನ ಗ್ರಾಮದಲ್ಲಿದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ, ಕಲಾದಗಿ ಹೋಬಳಿ ವ್ಯಾಪ್ತಿಯ ಖಜ್ಜಿಡೋಣಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಕಂದಾಯ ಸಚಿವ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಶುಕ್ರವಾರ ಪರಿಶೀಲಿಸಿದ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಫೆ. 25ರಂದು ಬೆಳಗ್ಗೆ 11.30ಕ್ಕೆ ಕಲಾದಗಿ ಗ್ರಾಮಕ್ಕೆ ಆಗಮಿಸಲಿರುವ ಕಂದಾಯ ಸಚಿವರಿಗೆ ಗ್ರಾಮದ ಮಹಿಳೆಯರಿಂದ ಆರತಿ ಮಾಡುವ ಮೂಲಕ ಸ್ವಾಗತಿಸಲಿದ್ದಾರೆ. ಬಳಿಕ ಅಲಂಕೃತಗೊಂಡ ಟ್ಯಾಕ್ಟರ್‌ನಲ್ಲಿ ಗ್ರಾಮದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತಿದೆ.
ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಖ್ಯ ವೇದಿಕೆಗೆ ಆಗಮಿಸಲಿದೆ ಎಂದು ತಿಳಿಸಿದರು. ಮುಖ್ಯ ವೇದಿಕೆಯಲ್ಲಿ ವಿವಿಧ ಇಲಾಖೆಯವರು ಹಾಕಿದ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಪರಿಕರ ವಿತರಿಸುವ ಮೂಲಕ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವೇದಿಕೆಯಲ್ಲಿ ವಿವಿಧ ಇಲಾಖೆಗಳ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ, ಕಾರ್ಯಕ್ರಮ ಕುರಿತು ಮಾತನಾಡಲಿದ್ದಾರೆ. ಸಂಜೆ ವೇಳೆ ಗ್ರಾಮದ ರಂಗ ಮಂದಿರ ಕಟ್ಟೆಯ ಹತ್ತಿರ ಗ್ರಾಮಸ್ಥರ ಅಹವಾಲು ಸ್ವೀಕರಿಸಲಿದ್ದಾರೆ. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು.
ಖಜ್ಜಿಡೋಣಿಯಲ್ಲಿ ಸಚಿವರ ವಾಸ್ತವ್ಯ: ಖಜ್ಜಿಡೋಣಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ಶಾಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ ವಾಸ್ತವ್ಯ ಮಾಡಲಿದ್ದಾರೆ. ಅವರ ಜೊತೆ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಟಿ.ಭೂಬಾಲನ್ ಸೇರಿದಂತೆ ಇತರೆ ಅಧಿಕಾರಿಗಳು ವಾಸ್ತವ್ಯ ಮಾಡಲಿದ್ದಾರೆ.
ಫೆ.26 ರಂದ ಬೆಳಗ್ಗೆ 7-30 ರಿಂದ 8 ವರೆಗೆ ಗ್ರಾಮದ ಜಗಲಿ ಕಟ್ಟೆಯಲ್ಲಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸುವರು. ನಂತರ 9.30ಕ್ಕೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪೌತಿ ಖಾತಾ ಆಂದೋಲ ನಡೆಸಲಿದ್ದಾರೆ. ನಂತರ ಬೆಳಗ್ಗೆ 11ರ ಬಳಿಕ ಕಲಾದಗಿ ಗ್ರಾಮದಿಂದ ಸಚಿವರು ನಿರ್ಗಮಿಸಲಿದ್ದಾರೆ ಎಂದು ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೊಡ, ಜಿ.ಪಂ ಸಿಇಓ ಟಿ.ಭೂಬಾಲನ್, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ತಹಶೀಲ್ದಾರ ಅಮರೇಶ ಪಮ್ಮಾರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ, ಬೀಳಗಿ ತಹಶೀಲ್ದಾರ ಸುಹಾಸ ಇಂಗಳೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಾಂಡಪ್ಪ ಲಮಾಣಿ ಮುಂತಾದವರು ಉಪಸ್ಥಿರಿದ್ದರು.